Site icon Vistara News

Lok Sabha Election 2024: ದಾರಿ ತಪ್ಪಿದ್ದಾರೆ ಎಂದ ಕುಮಾರಸ್ವಾಮಿಗೆ ಹೆಣ್ಣು ಮಕ್ಕಳು ತಕ್ಕ ಉತ್ತರ ಕೊಡಬೇಕು: ಡಿಕೆಶಿ

Lok Sabha Election 2024

ಮೈಸೂರು: ಕುಮಾರಸ್ವಾಮಿ ಗ್ಯಾರಂಟಿ ಯೋಜನೆಯಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಅಂತ ಹೇಳಿದ್ದಾರೆ. ಏನ್ರವ್ವ ನೀವು ದಾರಿ ತಪ್ಪಿದ್ದೀರಾ? ಹೆಣ್ಣು ಮಕ್ಕಳು ದೇವಸ್ಥಾನಕ್ಕೆ ಹೋಗಲಿ, ನೆಂಟರ ಮನೆಗೆ ಹೋಗಲಿ ಅಂತ ಬಸ್ ಫ್ರೀ ಮಾಡಿದ್ದೀವಿ. ದಾರಿ ತಪ್ಪಿದ್ದಾರೆ ಅಂದ ಕುಮಾರಸ್ವಾಮಿಗೆ ಹೆಣ್ಣು ಮಕ್ಕಳು ತಕ್ಕ ಉತ್ತರ ಕೊಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಕರೆ ನೀಡಿದರು.

ಮಂಡ್ಯ ಲೋಕಸಭಾ ಕ್ಷೇತ್ರದ ಕೆ.ಆರ್. ನಗರದ ರೇಡಿಯೋ ಮೈದಾನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ನನಗೆ ಗಂಡಸರ ಮೇಲೆ ನಂಬಿಕೆ ಇಲ್ಲ. ಆದ್ದರಿಂದಲೇ ಹೆಣ್ಣು ಮಕ್ಕಳಿಗೆ ಗ್ಯಾರಂಟಿ ಕೊಟ್ಟಿದ್ದೇವೆ.‌ ಬೇರು ಇಲ್ಲ ಅಂದ್ರೆ ಮರ ಉಳಿಯಲ್ಲ. ನಂಬಿಕೆ ಇಲ್ಲ ಅಂದ್ರೆ ಸಂಬಂಧ ಇರೋದಿಲ್ಲ. ಆದ್ದರಿಂದಲೇ ನಾನು, ಸಿಎಂ ಸಿದ್ದರಾಮಯ್ಯ ಬಂದಿದ್ದೇವೆ. ನಮ್ಮ ನಿಮ್ಮ ವಿಶ್ವಾಸ ಮುಖ್ಯ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಜಾತಿ, ಧರ್ಮದ ಮೇಲೆ ನಮ್ಮ ಪಕ್ಷ ನಿಂತಿಲ್ಲ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್, ದೇವರಾಜ ಅರಸು, ಸಿದ್ದರಾಮಯ್ಯ ಹೀಗೆ ಯಾವುದೇ ಅವಧಿ ತೆಗೆದುಕೊಳ್ಳಿ. ಜನರ ಪರವಾಗಿ ಕಾಂಗ್ರೆಸ್ (Lok Sabha Election 2024) ಕೆಲಸ ಮಾಡಿದೆ. ಬಿಜೆಪಿ – ಜೆಡಿಎಸ್ ಭಾವನೆ ಮೇಲೆ ಹೊರಟಿದ್ದಾರೆ. ನಾವು ಬದುಕಿನ ಮೇಲೆ ಹೊರಟಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ | Neha Murder Case: ನೇಹಾ ಕೊಲೆ ಪ್ರಕರಣ ರಾಜಕೀಯಕ್ಕೆ ಬಳಕೆ; ಕೊಲೆಗಾರನಿಗೆ ಉಗ್ರ ಶಿಕ್ಷೆ ಎಂದ ಸಿದ್ದರಾಮಯ್ಯ

ಸಾ‌.ರಾ. ಮಹೇಶ್, ಪುಟ್ಟರಾಜು, ಡಿ.ಸಿ. ತಮ್ಮಣ್ಣಗೊಂದು ಚಾಕ್ಲೆಟು ಎಂದು ವ್ಯಂಗ್ಯವಾಡಿದ ಅವರು, ಕುಮಾರಸ್ವಾಮಿ ಮಂಡ್ಯಕ್ಕೆ ಬಂದು ಅಭ್ಯರ್ಥಿ ಆಗಿದ್ದಾರೆ. ಯಾಕ್ ಸ್ವಾಮಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಇರಲಿಲ್ವೇ? ನೀವು ಗೆದ್ದಿರುವ ರಾಮನಗರ ವ್ಯಾಪ್ತಿಯಲ್ಲೇ ಯಾಕೆ ನಿಲ್ಲಲಿಲ್ಲ. ನಿಮ್ಮ ತಂದೆ ಎಲ್ಲಿಂದ ಪ್ರಧಾನಿಯಾದರು. ನಿಮ್ಮ ಧರ್ಮಪತ್ನಿ ಗೆದ್ದಿದ್ರು ಆ ಕ್ಷೇತ್ರ ಬಿಟ್ಟು ಇಲ್ಲಿಗೆ ಯಾಕೆ ಬಂದಿದ್ದೀರಿ. ಇದು ಸ್ವಾಭಿಮಾನದ ಪ್ರಶ್ನೆ ಎಂದರು.

ಜೆಡಿಎಸ್ ನಾಯಕರ ವಿರುದ್ಧ ನಾಲಿಗೆ ಹರಿಬಿಟ್ಟ ಡಿಸಿಎಂ ಡಿ.ಕೆ.ಶಿವಕುಮಾರ್, ಟೀಕೆ ಭರದಲ್ಲಿ ಅಶ್ಲೀಲ ಪದಗಳ ಬಳಕೆ ಮಾಡಿದರು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ರು. ಜನರಿಗೆ ಏನ್ ಮಾಡಿದ್ರು? ಮಿಸ್ಟರ್ ಕುಮಾರಸ್ವಾಮಿ ಏನಾಗಿತ್ತು ನಿಂಗೆ? ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ ಅವರು, ಸಾ.ರಾ.ಮಹೇಶ್ ಸೋತಿದ್ದಾನೆ. ಸೋತಿರೋದಕ್ಕೆ ಏನೇನೋ ಮಾತಾಡ್ತಾನೆ. ಅದಕ್ಕೆಲ್ಲ ನೀನು ತಲೆ ಕೆಡಿಸಿಕೊಳ್ಳಬೇಡ. ಇಂಥವು ಹುಟ್ಟೋವು ಎಷ್ಟೋ ಉದುರೋವು ಎಷ್ಟೋ… ಎಂದು ಶಾಸಕ ಡಿ.ರವಿಶಂಕರ್ ಉದ್ದೇಶಿಸಿ ಮಾತನಾಡಿದರು.

ನನ್ನ ವಿರುದ್ಧ ಕೇಂದ್ರದವರೂ ತನಿಖೆ ಮಾಡುತ್ತಿದ್ದಾರೆ. ನೀನೂ ತನಿಖೆ ಮಾಡಿಸುತ್ತಿದ್ದೀಯ, ಮಾಡ್ಸು ಎಂದು ಏಕವನಚದಲ್ಲೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೊದ್ಲು ಬಿಜೆಪಿ ಜೆಡಿಎಸ್ ಎ ಟೀಂ, ಬಿ ಟೀಂ ಅಂತ ಇತ್ತು. ಇವಾಗ ಇಬ್ಬರದ್ದು ಪಾರ್ಟನರ್‌ಶಿಪ್. ಬಿಜೆಪಿ ಪಕ್ಷದಿಂದ ದೂರ ಇರಲಿ ಅಂತ 38 ಸ್ಥಾನ ಪಡೆದಿದ್ದ ನಿಮಗೆ 80 ಸ್ಥಾನ ಇದ್ದ ನಾವು ಅಧಿಕಾರ ಕೊಟ್ಟೆವು. ನಾವೇನು ನಿಮ್ಮ ಬೆನ್ನಿಗೆ ಚಾಕು ಹಾಕಲು ಬಂದಿದ್ವಾ? ಅಸೆಂಬ್ಲಿಗೆ ಬನ್ನಿ ಮಾತಾಡೊಣ ಅಂತ ಹೇಳಿದ್ದೀನಿ. ನಮ್ಮ ಭೂಮಿಯಲ್ಲಿ ನಾವು ಕೆಲಸ ಮಾಡಿದ್ರೆ ನಿಮಗೇನು ಉರಿ? ಕಲ್ ಹೊಡೆದಿದ್ದು, ಮಣ್ಣು ಹೊಡೆದಿದ್ದು ಎಲ್ಲಾ ತನಿಖೆ ಮಾಡಿಸ್ದಲ್ಲಪ್ಪ. ನೀನೂ ತನಿಖೆ ಮಾಡಿಸ್ದೆ, ಡೆಲ್ಲಿಲೂ ಮಾಡ್ತಿದ್ದಾರಲ್ಲ.. ಈಗೆ ಜೆಡಿಎಸ್ ಜತೆಗೆ ಬಿಜೆಪಿಯವರೂ ಸೇರಿಕೊಂಡಿದ್ದಾರೆ. ಇವರು ಸೇರಿ ಜನರಿಗೆ ಕೊಟ್ಟಿದ್ದು ಏನು ಅಂತ ಜನರ ಮುಂದೆ ಹೇಳಲಿ ಎಂದು ಕಿಡಿಕಾರಿದರು.

ಇದನ್ನೂ ಓದಿ | ‌CM Siddaramaiah: ಸಿಎಂ ಸಿದ್ದರಾಮಯ್ಯ ಬಳಿ ಗನ್‌ ತಂದಿದ್ದ ಕೇಸ್;‌ ನಾಲ್ವರು ಪೊಲೀಸರು ಸಸ್ಪೆಂಡ್

ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ಚಲುವರಾಯಸ್ವಾಮಿ, ಅಭ್ಯರ್ಥಿ ಸ್ಟಾರ್ ಚಂದ್ರು, ಶಾಸಕ ಡಿ.ರವಿಶಂಕರ್ ಸೇರಿ ಹಲವು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.

Exit mobile version