Site icon Vistara News

‌Lok Sabha Election 2024: ಮೆಣಸಿನಕಾಯಿಯನ್ನು ಜೀರ್ಣಿಸಿಕೊಳ್ತೇನೆ; ನನ್ನ ಮೇಲೆ ರಾಜಸ್ಥಾನದ ಪ್ರಭಾವ ಇಲ್ಲ: ಯದುವೀರ್

Lok Sabha Election 2024 Yaduveer talks about entering politics and Yaduveer Krishnadatta Chamaraja Wadiyar meets BY Vijayendra

ಮೈಸೂರು/ ಬೆಂಗಳೂರು: ಸಾಂಬರಿನಲ್ಲಿ ಒಮ್ಮೊಮ್ಮೆ ಮೆಣಸಿನಕಾಯಿ ಸಿಗುತ್ತದೆ. ರಾಜಕೀಯದಲ್ಲಿ ಮೆಣಸಿನಕಾಯಿ ರೂಪದಲ್ಲಿ ಪ್ರತಿನಿತ್ಯ ಟೀಕೆಗಳು ಬರುತ್ತವೆ. ಅದನ್ನು ನಾವು ಜೀರ್ಣಿಸಿಕೊಳ್ಳಬೇಕು. ರಾಜಕೀಯಕ್ಕೆ ಬಂದಾಗ ಅದೆಲ್ಲವೂ ಸಹಜ. ಎಲ್ಲದಕ್ಕೂ ಸಿದ್ಧವಾಗಿದ್ದೇನೆ. ಕಳೆದ ಒಂದು ವರ್ಷದಿಂದ ರಾಜಕೀಯಕ್ಕೆ ಬರುವ ಬಗ್ಗೆ ತೀರ್ಮಾನ ಮಾಡಿದ್ದೆ. ರಾಜಸ್ಥಾನದ ಮೂಲ, ರಾಜಸ್ಥಾನದ ಪ್ರಭಾವ ಇದ್ಯಾವುದೂ ಇಲ್ಲ ಎಂದು ರಾಜವಂಶಸ್ಥ, ಕೊಡಗು – ಮೈಸೂರು ಲೋಕಸಭಾ ಕ್ಷೇತ್ರದ (Kodagu Mysore Lok Sabha constituency) ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಯದುವೀರ್‌ ಒಡೆಯರ್‌, ನನ್ನ ತಾಯಿಯ ಅನುಮತಿ ಹಾಗೂ ಆಶೀರ್ವಾದ ಪಡೆದು ಚುನಾವಣೆಗೆ ಬಂದಿದ್ದೇನೆ. ನನಗೆ ಮೈಸೂರಿನ ಅಭಿವೃದ್ಧಿ ವಿಚಾರವಾಗಿ ನನ್ನದೇ ಆದ ಕನಸುಗಳಿವೆ. ಆ ಕೆಲಸಗಳನ್ನು ಮಾಡುತ್ತೇನೆ. ನಮ್ಮ ಕುಟುಂಬದ ವ್ಯಾಜ್ಯಗಳು ಅವು ಕಾನೂನಿನ ವ್ಯಾಪ್ತಿಯಲ್ಲಿದೆ. ಅವುಗಳ ಪಾಡಿಗೆ ಅವುಗಳು ನಡೆಯುತ್ತವೆ. ಅದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದರು.

ಸಾಮಾಜಿಕ ಸಮಸ್ಯೆಗಳು ರಾಜಕಾರಣದ ಮೂಲಕ ಬಗೆಹರಿಸಲು ಸಾಧ್ಯ. ಇದೇ ಕಾರಣಕ್ಕೆ ನಾನು ರಾಜಕಾರಣಕ್ಕೆ ಬರಲು ತೀರ್ಮಾನಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಕಾರ್ಯವೈಖರಿಯನ್ನು ಗಮನಿಸಿ‌ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಎಸಿ ರೂಮಿನಿಂದ ಜನರ ಮಧ್ಯೆ ಬರುವುದು ಏನೂ ಕಷ್ಟ ಅಲ್ಲ. ನಾನು ಈಗಾಗಲೇ ಜನರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಶೈಕ್ಷಣಿಕ ಸಾಮಾಜಿಕ ಹಾಗೂ ಸೈಬರ್ ಕ್ಷೇತ್ರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ರಾಜಕೀಯದಲ್ಲಿರುವ ಸವಾಲುಗಳನ್ನು ಅರಿತೇ ಬಂದಿದ್ದೇನೆ. ಕೇವಲ ಅವಕಾಶ ಸಿಕ್ಕಿದೆ ಅಂತ ನಾನು ಬಂದಿಲ್ಲ. ಪ್ರತಾಪ್‌ ಸಿಂಹ ಸೇರಿದಂತೆ ಹಲವರು ಉತ್ತಮ ಅಡಿಪಾಯ ಹಾಕಿದ್ದಾರೆ. ಅದನ್ನು ಮುಂದುವರಿಸುತ್ತೇನೆ ಎಂದು ಯದುವೀರ್‌ ಒಡೆಯರ್‌ ಹೇಳಿದ್ದಾರೆ.

ಪ್ರತಾಪ್‌ ಸಿಂಹಗೆ ಟಿಕೆಟ್ ತಪ್ಪಿದ್ದಕ್ಕೆ ರಾಮದಾಸ್‌ ಹೇಳಿದ್ದೇನು?

ಮೈಸೂರು ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾಗಲು ಕಾರಣಗಳಿವೆ. ಅವೆಲ್ಲ ರಾಜ್ಯ, ರಾಷ್ಟ್ರ ಮಟ್ಟದ ನಾಯಕರಿಗೆ ಗೊತ್ತು. ನಾನು ಎಲ್ಲವನ್ನೂ ಹೇಳಲ್ಲ. ನಾವೆಲ್ಲ ಅಣ್ಣ- ತಮ್ಮಂದಿರು. ಮನೆಯಲ್ಲಿ ಅಣ್ಣ- ತಮ್ಮ ಹೇಗಿರುತ್ತಾರೆ ? ಪ್ರತಾಪ್ ಸಿಂಹ ಈಗಲೂ ನಮ್ಮ ಜತೆ ಇದ್ದಾರೆ. ಆದ್ದರಿಂದ ನಾವೆಲ್ಲ ಒಂದೇ ಕುಟುಂಬ. ದೇಶ, ನಾಡಿನ ಅಭಿವೃದ್ಧಿಗೆ ರಾಜವಂಶದ ಕೊಡುಗೆ ದೊಡ್ಡದು. ಮೈಸೂರು ರಾಜಮನೆತನವನ್ನು ಪಕ್ಷಕ್ಕೆ ಕರೆತಂದು ದೇಶ ಸೇವೆಗೆ ತೊಡಗಿಸಬೇಕು ಎಂಬುದು ನಮ್ಮ ಅಪೇಕ್ಷೆ ಆಗಿತ್ತು. ನಾವೆಲ್ಲ ಚರ್ಚೆ ಮಾಡಿಯೇ ಯದುವೀರ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ. ನನಗೆ ವೈಯಕ್ತಿಕವಾಗಿ ಸಂತೋಷ ಆಗಿದೆ ಎಂದು ಇದೇ ವೇಳೆ ವಿಸ್ತಾರ ನ್ಯೂಸ್‌ಗೆ ಮಾಜಿ ಸಚಿವ ಎಸ್.ಎ. ರಾಮದಾಸ್ ಹೇಳಿದ್ದಾರೆ.

Yaduveer Krishnadatta Chamaraja Wadiyar visit BJP office bangalore

ಮಾ. 16ಕ್ಕೆ ಯದುವೀರ್‌ ಬಿಜೆಪಿ ಸೇರ್ಪಡೆ

ಯದುವೀರ್ ಒಡೆಯರ್ ಹಾಗೂ ಡಾ ಮಂಜುನಾಥ್ ಅವರು ಮಾರ್ಚ್ 16ಕ್ಕೆ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಮ್ಮುಖದಲ್ಲೇ ಪಕ್ಷ ಸೇರ್ಪಡೆಗೆ ಮುಹೂರ್ತವನ್ನು ನಿಗದಿ ಮಾಡಲಾಗಿದೆ.

ಇದನ್ನೂ ಓದಿ: Lok Sabha Election 2024: ಗೌಡರ ಅಳಿಯನೇ ಜೆಡಿಎಸ್‌ ಬಿಟ್ಟಿದ್ದಾರೆ; ಕಾಂಗ್ರೆಸ್‌ ಸೇರಲು ದಳ ಕಾರ್ಯಕರ್ತರಿಗೆ ಡಿಕೆಸು ಆಹ್ವಾನ!

Yaduveer Krishnadatta Chamaraja Wadiyar visit BJP office bangalore

ಬಿಜೆಪಿ ಕಚೇರಿಯಲ್ಲಿ ಆರತಿ ಬೆಳಗಿ ಸ್ವಾಗತ

ಬೆಳಗ್ಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಯದುವೀರ್‌ ಒಡೆಯರ್‌ ಅವರು ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಅವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಅಲ್ಲಿಂದ ಬಿಜೆಪಿ ಕಚೇರಿಗೆ ಆಗಮಿಸಿದರು. ಅಲ್ಲಿ ಅವರಿಗೆ ಪಕ್ಷದ ಕಾರ್ಯಕರ್ತೆಯರು ಆರತಿ ಬೆಳಗಿ ಸ್ವಾಗತ ಕೋರಿದರು.

Exit mobile version