Site icon Vistara News

Lok Sabha Election 2024: ಪ್ರತಾಪ್ ಸಿಂಹಗಿಂತಲೂ ಯದುವೀರ್‌ ಉತ್ತಮ‌ ಅಭ್ಯರ್ಥಿ ಎಂದ ರಾಧಾಮೋಹನ್ ದಾಸ್

Radha Mohan Das Agarwal

ಮೈಸೂರು: ಮೈಸೂರಿನ ಆಳರಸರು ಅಪಾರ ಕೊಡುಗೆ ನೀಡಿದ್ದಾರೆ. ಅವರ ದೂರದೃಷ್ಟಿಯ ಫಲವಾಗಿ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಇದೆಲ್ಲವನ್ನೂ ಪರಿಗಣಿಸಿ ರಾಜಮನೆತನದ ಯದುವೀರ್‌ಗೆ ಬಿಜೆಪಿ ಟಿಕೆಟ್ ‌ನೀಡಿದ್ದೇವೆ. ಈ ಮೂಲಕ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ (Lok Sabha Election 2024) ಸಂಸದ ಪ್ರತಾಪ್ ಸಿಂಹಗಿಂತಲೂ ಉತ್ತಮ‌ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್‌ ತಿಳಿಸಿದ್ದಾರೆ.

ಕಾಂಗ್ರೆಸ್‌ನವರು ಮಹಾರಾಜ ಹಾಗೂ ಸಾಮಾನ್ಯ ಅಭ್ಯರ್ಥಿ ನಡುವಿ‌ನ ಚುನಾವಣೆ ಎನ್ನುತ್ತಿರುವ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿರುವ ಅವರು, ನಮ್ಮ ಅಭ್ಯರ್ಥಿ ಕೂಡ ಜನಸಾಮಾನ್ಯ. ನಮ್ಮ ಅಭ್ಯರ್ಥಿ ಜನಸಾಮಾನ್ಯರ ಜೊತೆಯೇ ಇದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮಹಾರಾಜರು. ಆ ಮಹಾರಾಜರ ವಿರುದ್ಧ ನಮ್ಮ ಸಾಮಾನ್ಯ ಅಭ್ಯರ್ಥಿ ಹೋರಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ | Lok Sabha Election 2024: ಜನಾರ್ದನ ರೆಡ್ಡಿ ಪಕ್ಷ ಬಿಜೆಪಿಯಲ್ಲಿ ವಿಲೀನ? ಇಂದು ಅಥವಾ ನಾಳೆ ಘೋಷಣೆ!

ಟಿಕೆಟ್ ಸಿಗದೇ ಬಂಡಾಯದ ಬಾವುಟ ಹಾರಿಸಿರುವ ಹಿರಿಯ ‌‌‌ನಾಯಕರ ಮನವೊಲಿಕೆ ಕಾರ್ಯ ಮುಂದುವರಿದಿದೆ. ಎಲ್ಲವೂ ಸರಿಹೋಗಲಿದೆ, ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಕರ್ನಾಟಕದ ಎಲ್ಲಾ 28 ಕ್ಷೇತ್ರಗಳಲ್ಲೂ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುಮಲತಾಗೆ ಪಕ್ಷವು ಸೂಕ್ತ ಸ್ಥಾ‌ನಮಾನ ನೀಡಲಿದೆ

ಮಂಡ್ಯ ಸಂಸದೆ ಸುಮಲತಾಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಜೆಡಿಎಸ್ ಜೊತೆ ಮೈತ್ರಿ ಏರ್ಪಟ್ಟ ಕಾರಣ ಸುಮಲತಾಗೆ ಬಿಜೆಪಿ ಟಿಕೆಟ್ ‌ನೀಡಲಾಗಲಿಲ್ಲ. ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ದೇವೆ. ಹಾಗಾಗಿ ಸುಮಲತಾಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ. ಸುಮಲತಾ ಜತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಮಾತನಾಡಿದ್ದಾರೆ. ಸುಮಲತಾಗೆ ಮುಂದಿನ ದಿನಗಳಲ್ಲಿ ಪಕ್ಷ ಸೂಕ್ತ ಸ್ಥಾ‌ನಮಾನ ನೀಡಲಿದೆ. ಸುಮಲತಾ ನಮ್ಮ ಜತೆಯಲ್ಲೇ ಇರುತ್ತಾರೆ. ಕಳೆದ ಐದು ವರ್ಷ ಅವರು ನಮ್ಮ ಜತೆಯೇ ಇದ್ದರು, ಮುಂದಿನ ಐದು ವರ್ಷವೂ ನಮ್ಮ ಜತೆಯಲ್ಲೇ ಇರುತ್ತಾರೆ ಎಂದು ತಿಳಿಸಿದರು.

ಚುನಾವಣಾ ಪ್ರಚಾರ ಮಾಡುವ ವಿಚಾರದಲ್ಲಿ ಜೆಡಿಎಸ್ ನಾಯಕರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಸೀಟು ಹಂಚಿಕೆ ಅಂತಿಮವಾಗದ ಕಾರಣ ಅವರನ್ನು ಆಹ್ವಾನಿಸಿರಲಿಲ್ಲ. ಇದೀಗ ಸೀಟು ಹಂಚಿಕೆ ಅಂತಿಮಗೊಂಡಿದೆ.
ಮುಂದೆ ನಡೆಯುವ ಚುನಾವಣಾ ಪ್ರಚಾರ ಸಭೆಗಳಲ್ಲಿ ಬಿಜೆಪಿ ಜೆಡಿಎಸ್‌ನ ಪ್ರಮುಖ ನಾಯಕರು‌ ಒಟ್ಟಿಗೆ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ಯದುವೀರ್ ನಮ್ಮ ಸ್ಟಾರ್ ಕ್ಯಾಂಪೇನರ್

ಯದುವೀರ್ ನಮ್ಮ ಸ್ಟಾರ್ ಕ್ಯಾಂಪೇನರ್. ಅವರನ್ನು ಎಲ್ಲಾ ಕಡೆಗಳಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳುತ್ತೇವೆ. ಪ್ರತಾಪ್ ಸಿಂಹ ಕೂಡ ನಮ್ಮ ಸ್ಟಾರ್ ಪ್ರಚಾರಕ. ಅದಕ್ಕಿಂತಲೂ ಅವರ ಬಗ್ಗೆ ಇನ್ನೇನೂ ಹೇಳಬೇಕು. ಅವರಿಗೆ ಟಿಕೆಟ್ ತಪ್ಪಿದ್ದಕ್ಕೆ ನಿರ್ಧಿಷ್ಟವಾದ ಕಾರಣ ಏನೂ ಇಲ್ಲ ಎಂದು ತಿಳಿಸಿದರು.

ಇದನ್ನೂ ಓದಿ | Lok Sabha Election 2024: ಮಂಡ್ಯ ಲೋಕಸಭೆ ಅಭ್ಯರ್ಥಿ ಎಚ್‌ಡಿಕೆ? ನಾಳೆಯೇ ಪ್ರಕಟ ಎಂದ ಮಾಜಿ ಸಿಎಂ!

ಕರ್ನಾಟಕ ಬಿಜೆಪಿಯಲ್ಲಿ ಎಲ್ಲಿಯೂ ಬಂಡಾಯ ಇಲ್ಲ. ಶಿವಮೊಗ್ಗ ಹಾಸನದ ವಿಚಾರ ಇವತ್ತಿನ ವಿಚಾರ ನೀವು ಮಾತನಾಡುತ್ತಿದ್ದೀರಿ, ನಾನು ಹೇಳುತ್ತಿರುವುದು ನಾಮಪತ್ರ ಸಲ್ಲಿಕೆಯ ಕೊನೆಯ ದಿನದ ಸತ್ಯ. ಅಷ್ಟೊತ್ತಿಗೆ ನಮ್ಮಲ್ಲಿ ಯಾವ ಬಂಡಾಯ ಇರುವುದಿಲ್ಲ. ಈಶ್ವರಪ್ಪ ನಮ್ಮ ಪಕ್ಷದ ದೊಡ್ಡ ನಾಯಕ. ಅದು ನಮಗೂ ಗೊತ್ತು, ಅವರಿಗೂ ಗೊತ್ತು. ಅವರು ಪ್ರಚಾರ ಶುರು ಮಾಡಿದ್ದಾರೆ. ಎಲ್ಲಾ ಸಮಸ್ಯೆಗಳು ಬಗೆ ಹರಿಯುತ್ತದೆ. ಸುಮಲತಾ ನಮ್ಮ ಪಕ್ಷದ ಬೆಂಬಲಿಗರು. ಅವರು ಈ ಚುನಾವಣೆಗೆ ನಮ್ಮ ಅಭ್ಯರ್ಥಿಗೆ ಕೆಲಸ ಮಾಡುತ್ತಾರೆ ಎಂದು ಹೇಳಿದರು.

Exit mobile version