Site icon Vistara News

Lok Sabha Election: ಕರ್ನಾಟಕ ಸೇರಿ 13 ರಾಜ್ಯದಲ್ಲಿ ನಾಳೆ 2ನೇ ಹಂತದ ಮತದಾನ; ಪಿನ್‌ ಟು ಪಿನ್‌ ಮಾಹಿತಿ ಇಲ್ಲಿದೆ

Lok Sabha Election

Lok Sabha Elections 2024 Phase 2: List of 88 constituencies, states, parties and candidates

ಬೆಂಗಳೂರು/ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election 2024) ಎರಡನೇ ಹಂತದ ಮತದಾನಕ್ಕೆ ಕರ್ನಾಟಕ, ಕೇರಳ ಸೇರಿ ದೇಶದ 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸಜ್ಜಾಗಿವೆ. ಕರ್ನಾಟಕದ (Karnataka) 14 ಲೋಕಸಭೆ ಕ್ಷೇತ್ರಗಳು ಸೇರಿ ಎರಡನೇ ಹಂತದಲ್ಲಿ ಶುಕ್ರವಾರ (ಏಪ್ರಿಲ್‌ 26) ಒಟ್ಟು 88 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಇದಕ್ಕಾಗಿ ಚುನಾವಣೆ ಆಯೋಗವು (Election Commission) ಸಕಲ ಸಿದ್ಧತೆ ಮಾಡಿಕೊಂಡಿದೆ. ಮತಗಟ್ಟೆಗಳಲ್ಲಿ ಸಕಲ ಸೌಕರ್ಯ, ಸಿಬ್ಬಂದಿಗೆ ವಾಹನದ ವ್ಯವಸ್ಥೆ, ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜನೆ ಸೇರಿ ಎರಡನೇ ಹಂತದ ಮತದಾನಕ್ಕೆ (2nd Phase Voting) ಸಕಲ ರೀತಿಯ ವ್ಯವಸ್ಥೆ ಮಾಡಿಕೊಂಡಿದೆ.

ಕರ್ನಾಟಕದ 14 ಕ್ಷೇತ್ರಗಳಲ್ಲಿ ವೋಟಿಂಗ್‌

ಕೋಲಾರ, ಮಂಡ್ಯ, ಉಡುಪಿ-ಚಿಕ್ಕಮಗಳೂರು, ಹಾಸನ, ಮೈಸೂರು, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರ ಕೇಂದ್ರ, ಬೆಂಗಳೂರು ಉತ್ತರ, ದಕ್ಷಿಣ ಕನ್ನಡ, ಚಾಮರಾಜನಗರ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮತಗಟ್ಟೆಗಳಲ್ಲಿ ಹೆಚ್ಚಿನ ಜನರ ಸರತಿ ಸಾಲು ಇದ್ದರೆ ಮತದಾನದ ಸಮಯವನ್ನು ಒಂದು ಗಂಟೆವರೆಗೆ ವಿಸ್ತರಣೆ ಮಾಡಲಾಗುತ್ತದೆ.

ಯಾವ ರಾಜ್ಯದ ಎಷ್ಟು ಕ್ಷೇತ್ರಗಳಲ್ಲಿ ಮತದಾನ?

ಕೇರಳದ ಎಲ್ಲ 20, ಕರ್ನಾಟಕ 14, ರಾಜಸ್ಥಾನ 13, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದ ತಲಾ 8, ಮಧ್ಯಪ್ರದೇಶ 6, ಬಿಹಾರ ಹಾಗೂ ಅಸ್ಸಾಂನ ತಲಾ 5, ಛತ್ತೀಸ್‌ಗಢ ಹಾಗೂ ಪಶ್ಚಿಮ ಬಂಗಾಳದ ತಲಾ 3, ತ್ರಿಪುರ, ಜಮ್ಮು-ಕಾಶ್ಮೀರ ಹಾಗೂ ಮಣಿಪುರದ ತಲಾ 1 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 7 ಹಂತಗಳಲ್ಲಿ ನಡೆಯುವ ಚುನಾವಣೆಯು ಜೂನ್‌ 1ರಂದು ಮುಕ್ತಾಯವಾಗಲಿದೆ. ಜೂನ್‌ 4ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.

ಕಣದಲ್ಲಿರುವ ಪ್ರಮುಖರು

ಕೇರಳದಲ್ಲಿ ರಾಹುಲ್‌ ಗಾಂಧಿ, ಕೆ.ಸಿ. ವೇಣುಗೋಪಾಲ್‌, ಶಶಿ ತರೂರ್‌, ರಾಜೀವ್‌ ಚಂದ್ರಶೇಖರ್‌, ರಾಜಸ್ಥಾನದಲ್ಲಿ ಓಂ ಬಿರ್ಲಾ, ಗಜೇಂದ್ರ ಸಿಂಗ್‌ ಶೇಖಾವತ್‌, ಉತ್ತರ ಪ್ರದೇಶದಲ್ಲಿ ಹೇಮಾ ಮಾಲಿನಿ, ಡ್ಯಾನಿಶ್‌ ಅಲಿ, ಮಧ್ಯಪ್ರದೇಶದಲ್ಲಿ ವಿಜೇಂದ್ರ ಕುಮಾರ್‌ ಖಾತಿಕ್‌, ಸಿದ್ಧಾರ್ಥ್‌ ಸುಖಲಾಲ್‌ ಕುಶ್ವಾಹ ಕಣದಲ್ಲಿರುವ ಪ್ರಮುಖರಾಗಿದ್ದಾರೆ. ಹಾಗೆಯೇ, ಪ್ರಕಾಶ್‌ ಅಂಬೇಡ್ಕರ್‌ (ವಿಬಿಎ ಪಕ್ಷ), ನವನೀತ್‌ ಕೌರ್‌ ರಾಣಾ, ಪಪ್ಪು ಯಾದವ್‌ ಸೇರಿ ಇತರ ಗಣ್ಯರು ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ.

2019ರ ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 88 ಕ್ಷೇತ್ರಗಳ ಪೈಕಿ 61 (ಬಿಜೆಪಿ 52, ಶಿವಸೇನೆ 4, ಜೆಡಿಯು 4, ಸ್ವತಂತ್ರ 1) ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಇನ್ನು ಕಾಂಗ್ರೆಸ್‌ ನೇತೃತ್ವದ ಯುಪಿಎ 24 (ಕಾಂಗ್ರೆಸ್‌ 18, ಐಯುಎಂಎಲ್‌ 2, ಜೆಡಿಎಸ್‌ 1, ಕೇರಳ ಕಾಂಗ್ರೆಸ್‌ ಮಣಿ 1, ಆರ್‌ಎಸ್‌ಪಿ 1, ಸ್ವತಂತ್ರ 1) ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.

ಇದನ್ನೂ ಓದಿ: PM Narendra Modi: ಪ್ರಧಾನಿ ಮೋದಿಗೆ ‘ಪ್ರಾಮಿಸ್ಡ್ ನೇಷನ್’ ಪುಸ್ತಕ ಅರ್ಪಣೆ

Exit mobile version