Site icon Vistara News

Lok Sabha Electon 2024: ನಮ್ಮ ಜನಾಂಗದ ಲಕ್ಷ್ಮಣ್‌ ಗೆಲ್ಲಬೇಕು; ಸಚಿವ ವೆಂಕಟೇಶ್‌ ʼಒಕ್ಕಲಿಗʼ ಅಸ್ತ್ರ ಪ್ರಯೋಗ

Lok Sabha Election 2024

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ (Lok Sabha Electon 2024) ಚುನಾವಣಾ ಪ್ರಚಾರದ ವೇಳೆ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್‌ ಒಕ್ಕಲಿಗ ಜಾತಿ ಅಸ್ತ್ರ ಪ್ರಯೋಗ ಮಾಡಿರುವುದು ಕಂಡುಬಂದಿದೆ. ಒಂದೇ ಕುಟುಂಬದವರನ್ನು ಎಲ್ಲಿ ತನಕ ಬೆಂಬಲಿಸುತ್ತೀರಾ? ನಮ್ಮ ಜನಾಂಗದವರು ಸ್ಪರ್ಧೆ ಮಾಡಿದ್ದಾರೆ. ಒಕ್ಕಲಿಗರು ಅವರಿಗೊಂದು ಅವಕಾಶ ಕೊಡಬೇಕು ಎನ್ನುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ್‌ ಅವರನ್ನು ಗೆಲ್ಲಿಸುವಂತೆ ಮತದಾರರನ್ನು ಕೋರಿದ್ದಾರೆ.

ಜಾತಿ ಆಧಾರದ ಅಭ್ಯರ್ಥಿ ಲಕ್ಷ್ಮಣ್ ಮತ ಕೇಳಿದ್ದರು. ಇದರ ಬೆನ್ನಲ್ಲೇ ಒಕ್ಕಲಿಗ ಅಸ್ತ್ರ ಬಳಸಿರುವ ಸಚಿವ ಕೆ.ವೆಂಕಟೇಶ್ ಅವರು, ಅನೇಕರು ಲಕ್ಷ್ಮಣ್ ಅವರ ಜಾತಿ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಯಾವ ಜಾತಿಗೆ ಸೇರಿದ್ದೇನೋ ಲಕ್ಷ್ಮಣ್ ಕೂಡ ಅದೇ ಜಾತಿಗೆ ಸೇರಿದ್ದಾರೆ‌. ಸಂಸದ ಪ್ರತಾಪ್ ಸಿಂಹ ಕೂಡ ಜಾತಿ ಬಗ್ಗೆ ಪ್ರಶ್ನೆ ಕೇಳಿದ್ದರು. ಲಕ್ಷ್ಮಣ್ ಅವರ ಜಾತಿ ಬಗ್ಗೆ ಯಾವುದೇ ಅನುಮಾನ ಇಟ್ಟುಕೊಳ್ಳಬೇಡಿ. ಜೆಡಿಎಸ್‌ನವರು ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ. ಎಚ್.ಡಿ.ದೇವೇಗೌಡ ಅವರ ಅಳಿಯ ಡಾ.ಮಂಜುನಾಥ್ ಬಿಜೆಪಿ ಅಭ್ಯರ್ಥಿ ಆಗಿದ್ದಾರೆ. ಇವರಿಗೆ ನಾಚಿಕೆ, ಮಾನ, ಮರ್ಯಾದೆ ಇದೆಯಾ? ಸುಮಲತಾ ವಿರುದ್ಧ ವಾಚಾಮಗೋಚರವಾಗಿ ಬೈಯ್ದಿದ್ದರು. ಈಗ ಅದೇ ಸುಮಲತಾ ಅವರ ಬೆಂಬಲ ಕೇಳುತ್ತಿದ್ದಾರೆ. ಜನರ ಹಿತ ಅಂತಾರೆ, ಸಾರ್ಥದ ಹಿತಕ್ಕಾಗಿ ಇದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ | Lok Sabha Election 2024: ಭ್ರಷ್ಟರನ್ನು ಜೈಲಿಗೆ ಹಾಕಬೇಕೋ ಬೇಡವೋ? ಗುಡುಗಿದ ಅಮಿತ್‌ ಶಾ!

ಎಚ್.ಡಿ‌. ದೇವೇಗೌಡ ಸ್ವಾರ್ಥಕ್ಕಾಗಿ ಯದುವೀರ್ ಅವರನ್ನು ಅಭ್ಯರ್ಥಿ ಮಾಡಿದ್ದಾರೆ ಎಂದು ಹೇಳಿದ ಅವರು, ನಮ್ಮ ಸಮಾಜದ ಪ್ರತಾಪ್ ಸಿಂಹ ಎಂಪಿ ಆಗಿದ್ದರು. ಯದುವೀರ್ ಹೆಸರೇ ಇರಲಿಲ್ಲ. ಆದರೆ ಏಕಾಏಕಿ ಯದುವೀರ್ ಹೆಸರು ಬಂತು. ಎಚ್.ಡಿ.ದೇವೇಗೌಡರೇ ಯದುವೀರ್ ಹೆಸರನ್ನು ತಂದರು. ನಮ್ಮ ಸಮಾಜದ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ತಪ್ಪಿಸಿ ಯದುವೀರ್‌ಗೆ ಟಿಕೆಟ್ ಕೊಟ್ಟಿದ್ದಾರೆ. ಆದರೆ ದೇವೇಗೌಡರೆ ಯದುವೀರ್ ಕರೆತಂದು ನಿಲ್ಲಿಸಿದರು. ಯದುವೀರ್ ನಿಲ್ಲಿಸಿದರೆ ಮಂಡ್ಯ, ಹಾಸನಕ್ಕೆ ಅನುಕೂಲ ಆಗುತ್ತದೆ. ಅಲ್ಲಿಗೆ ಕರೆದುಕೊಂಡು ಹೋಗಿ ಪ್ರಚಾರ ಮಾಡಿಸಬಹುದು ಅಂತ ಅಭ್ಯರ್ಥಿ ಮಾಡಿದ್ದಾರೆ ಎಂದು ಆರೋಪಿಸಿದರು.

ನಾನು ದೇವೇಗೌಡರಿಗೆ ಹತ್ತಿರದ ಸಂಬಂಧಿ. ಆದರೂ ಅವರ ಜತೆ ಇಲ್ಲ. ಅವರು ಸ್ವಾರ್ಥ ಅನ್ನುವ ಕಾರಣಕ್ಕೆ ಅವರಿಂದ ದೂರ ಉಳಿದೆ. ನಾನು ರಾಜಕೀಯ ಬಿಡೋಕೆ ಹೋಗಿದ್ದೆ. ಆದರೆ ಯಾಕೆ‌ ರಾಜಕೀಯ ಬಿಡುವೆ ಅಂತ ಹೇಳಿ ಸಿದ್ದರಾಮಯ್ಯ ರಾಜಕಾರಣದಲ್ಲಿ ಉಳಿಸಿಕೊಂಡರು. ಒಂದೇ ಕುಟುಂಬದ ಜನರನ್ನು ಎಲ್ಲಿ ತನಕ ಬೆಂಬಲಿಸುತ್ತೀರಾ? ನಮ್ಮ ಜನಾಂಗದ ವ್ಯಕ್ತಿ ಸ್ಪರ್ಧೆ ಮಾಡಿದ್ದಾರೆ. ಒಕ್ಕಲಿಗರು ಅವರಿಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಮಾತನಾಡಿ, ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಬೀದಿಯಲ್ಲಿ ನಿಂತು ಹೋರಾಟ ಮಾಡುವ ವ್ಯಕ್ತಿ. ನನ್ನನ್ನು ಗುರುತಿಸಿ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟಿದೆ. ನಾನು ಯಾದವಗಿರಿಯ ಮನೆಯೊಂದರಲ್ಲಿ ಇದ್ದೇನೆ. ಬಿಜೆಪಿ ಅಭ್ಯರ್ಥಿ ಅರಮನೆಯಲ್ಲಿದ್ದಾರೆ. ನಾನು ಹುಟ್ಟಿವಾಗ ಒಬ್ಬ ಒಕ್ಕಲಿಗ, ಬೆಳೆಯುತ್ತ ವಿಶ್ವ ಮಾನವ. ನಾನು ಜಾತಿ ಮೇಲೆ ರಾಜಕಾರಣ ಮಾಡಿಲ್ಲ ಎಂದು ಹೇಳಿದರು.

47 ವರ್ಷದ ಬಳಿಕ ಒಕ್ಕಲಿಗ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದಾರೆ. ನಿಮ್ಮ ಆಲೋಚನೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ನಾನು ಎರಡು ಬಾರಿ ಸೋತಿದ್ದೇನೆ. ಈ ಬಾರಿ ನನಗೊಂದು ಅವಕಾಶ ಕೊಡಿ ಎಂದು ಎಂ. ಲಕ್ಷ್ಮಣ್ ಮನವಿ ಮಾಡಿದರು.

ಇದನ್ನೂ ಓದಿ | Lok Sabha Election 2024: ಅಧಿಕಾರಕ್ಕೆ ಅಂಟಿಕೊಂಡಿಲ್ಲವೆಂದು ಸುಮಲತಾ ಪತ್ರ; ನಾಳೆಯ ನಿರ್ಧಾರ ಏನು? ದರ್ಶನ್‌ ಭಾಗಿ!

ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್‌ಗೌಡ, ಡಿ.ರವಿಶಂಕರ್, ಮುಖಂಡರಾದ ಎಂ.ಕೆ.ಸೋಮಶೇಖರ್, ಎಚ್.ವಿ.ರಾಜೀವ್, ಡಾ.ಸುಶೃತ್ ಗೌಡ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

Exit mobile version