ಬೆಂಗಳೂರು: ಕೆಎಸ್‌ಡಿಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತ ವಿಚಾರಣೆ ಎದುರಿಸುತ್ತಿರುವ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ನೀಡಲಾಗಿರುವ ಮಧ್ಯಂತರ ನಿರೀಕ್ಷಣಾ ಜಾಮೀನು ರದ್ದು ಮಾಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ, ಜಲ ಮಂಡಳಿಯಲ್ಲಿ ಅಧಿಕಾರಿಯಾಗಿರುವ ಮಾಡಾಳ್ ಪ್ರಶಾಂತ್ ಶಾಸಕರ ಕಚೇರಿಯಲ್ಲಿ ಕುಳಿತು 40 ಲಕ್ಷ ರೂ. ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದಿದ್ದರು. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮಕ್ಕೆ ಕಚ್ಚಾವಸ್ತುಗಳನ್ನು ಖರೀದಿಸುವ ವಿಚಾರದಲ್ಲಿ ಟೆಂಡರ್ ಒದಗಿಸುವುದಕ್ಕೆ ಸಂಬಂಧಿಸಿ 80 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಡಲಾಗಿದ್ದು, ಅದರ ಪೈಕಿ 40 ಲಕ್ಷ ರೂ.ಯನ್ನು ನೀಡಲಾಗಿತ್ತು ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಲೋಕಾಯುಕ್ತರು ಮಾಡಾಳ್ ಪ್ರಶಾಂತ್ ಅವರನ್ನು ಬಂಧಿಸಿದ್ದರು. ಬಳಿಕ ಒಟ್ಟು ಆರು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಅದರಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಂಬರ್ ಒನ್ ಆರೋಪಿ ಎಂದು ಗುರುತಿಸಲ್ಪಟ್ಟಿದ್ದರು.
ಮೊದಲ ಆರೋಪಿಯಾಗಿರುವ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸಲು ಪೊಲೀಸರು ಮುಂದಾಗುತ್ತಿದ್ದಂತೆಯೇ ಅವರು ಕೋರ್ಟ್ ಮೂಲಕ ಮಧ್ಯಂತರ ಜಾಮೀನನ್ನು ಪಡೆದುಕೊಂಡಿದ್ದಾರೆ. ಕೋರ್ಟ್ ಅವರನ್ನು ಎರಡು ದಿನದ ಒಳಗೆ ಲೋಕಾಯುಕ್ತ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಅದರಂತೆ ಮಾಡಾಳು ಅವರು ಹಾಜರಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಅದರೆ, ಅಧಿಕಾರಿಗಳಿಗೆ ಈಗ ಅವರನ್ನು ಬಂಧಿಸಿ ವಿಚಾರಣೆ ನಡೆಸಲು ಸಾಧ್ಯವಾಗುತ್ತಿಲ್ಲ.
ಮಾಡಾಳ್ ವಿರೂಪಾಕ್ಷಪ್ಪ ಅವರು ಇದುವರೆಗಿನ ವಿಚಾರಣೆಯಲ್ಲಿ ಹಲವು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವ ಬಗ್ಗೆ ಲೋಕಾಯುಕ್ತ ಪರಿಶೀಲನೆ ನಡೆಸುತ್ತಿದೆ. ಇದರ ಭಾಗವಾಗಿ ಹೈಕೋರ್ಟ್ ನೀಡಿರುವ ಮಧ್ಯಂತರ ಜಾಮೀನಿನ ವಿರುದ್ಧ ಸುಪ್ರೀಂಕೋಟ್‌ಗೆ ವಿಶೇಷ ರಜಾ ಕಾಲದ ಅರ್ಜಿಯನ್ನು ಸಲ್ಲಿಸಲಾಗಿದೆ. ಈ ಅರ್ಜಿಯ ವಿಚಾರಣೆ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ನಡೆಯುವ ಸಾಧ್ಯತೆ ಇದೆ.
ಮಾಡಾಳ್ ಪುತ್ರನ ಕಸ್ಟಡಿ ವಿಸ್ತರಣೆ
ಈ ನಡುವೆ ಪ್ರಸಕ್ತ ಲೋಕಾಯುಕ್ತ ಕಸ್ಟಡಿಯಲ್ಲಿರುವ ಮಾಡಾಳ್ ಪ್ರಶಾಂತ್‌ನ ಕಸ್ಟಡಿ ಅವಧಿಯನ್ನು ಕೋರ್ಟ್ ಇನ್ನೂ ಮೂರು ದಿನ ವಿಸ್ತರಿಸಿದೆ. ಬಂಧಿತ ಮಾಡಾಳ್ ಪ್ರಶಾಂತ್‌ನ್ನು ಇತ್ತೀಚೆಗೆ ಲೋಕಾಯುಕ್ತರ ಮನವಿ ಮೇರೆಗೆ ಕೋರ್ಟ್ ಮಾರ್ಚ್ 13ರವರೆಗೆ ಕಸ್ಟಡಿಗೆ ಒಪ್ಪಿಸಿತ್ತು. ಸೋಮವಾರ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಪ್ರಶಾಂತ್ ಮತ್ತು ಸುರೇಶ್ ಎಂಬವರನ್ನು ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಜಯಂತ್ ಕುಮಾರ್ ಅವರ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಆಗ ಕೋರ್ಟ್ ಮಾರ್ಚ್ 16ರವರೆಗೆ ಕಸ್ಟಡಿ ವಿಸ್ತರಿಸಿದೆ.
ಒಂದೇ ಕಚೇರಿಯಲ್ಲಿ ಅಪ್ಪ-ಮಗ
ಈ ನಡುವೆ, ಮಾಡಾಳು ವಿರೂಪಾಕ್ಷಪ್ಪ ಮತ್ತು ಪುತ್ರ ಪ್ರಶಾಂತ್ ಏಕಕಾಲದಲ್ಲಿ ಲೋಕಾಯುಕ್ತ ಕಚೇರಿಯಲ್ಲಿ ಕಾಣಿಸಿಕೊಳ್ಳುವ ಸನ್ನಿವೇಶ ಸೋಮವಾರ ಸೃಷ್ಟಿಯಾಯಿತು. ಮಾಡಾಳ್ ವಿರೂಪಾಕ್ಷಪ್ಪ ಲೋಕಾ ಕಚೇರಿಯಲ್ಲಿ ವಿಚಾರಣೆಗಾಗಿ ಬಂದಿದ್ದರೆ, ಪ್ರಶಾಂತ್‌ನ್ನು ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ ಲೋಕಾಯುಕ್ತಕ್ಕೆ ತರಲಾಯಿತು.
ಇದನ್ನೂ ಓದಿ : Lokayukta Raid: ಬಿಜೆಪಿ ಟಿಕೆಟ್ ಆಕಾಂಕ್ಷೆಗೂ ಸಿಜೆಐ ಪತ್ರಕ್ಕೂ ಸಂಬಂಧವಿಲ್ಲ: ಮಾಡಾಳ್ ಪ್ರಕರಣದ ಕುರಿತು ವಿವೇಕ್ ರೆಡ್ಡಿ ಹೇಳಿಕೆ