Site icon Vistara News

Lokayukta Raid: ರಾಜ್ಯದ ಹಲವು ಕಡೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ, ಅಧಿಕಾರಿಗಳಿಗೆ ಶಾಕ್

lokayukta raid

ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯದ ಹಲವು ಕಡೆ ಲೋಕಾಯುಕ್ತ ಅಧಿಕಾರಿಗಳ ತಂಡ ಬೆಳ್ಳಂಬೆಳಗ್ಗೆ ದಾಳಿ (Lokayukta Raid) ನಡೆಸಿದೆ. ಸರ್ಕಾರಿ ಅಧಿಕಾರಿಗಳು, ಇಂಜಿನಿಯರ್‌ಗಳ ಮನೆಗಳು ದಾಳಿಗೆ ಒಳಗಾಗಿವೆ.

ಬೆಂಗಳೂರಿನಲ್ಲಿ ಎರಡು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ (lokayukta raid in bangalore) ಮಾಡಿದ್ದಾರೆ. ಬೆಸ್ಕಾಂ ಟೆಕ್ನಿಕಲ್ ಡೈರೆಕ್ಟರ್ ರಮೇಶ್ ಅವರ ಬಸವೇಶ್ವರ ನಗರದಲ್ಲಿರುವ ಮನೆ ಹಾಗೂ ಇಂಡಸ್ಟ್ರೀಸ್ ಆಂಡ್ ಬಾಯ್ಲರ್ ಡೆಪ್ಯುಟಿ ಡೈರೆಕ್ಟರ್ ಟಿ.ವಿ ನಾರಾಯಣಪ್ಪ ಅವರ ವಿಜಯನಗರ ಮಾರುತಿ ಮಂದಿರ ಬಳಿಯ ಮನೆಗೆ ದಾಳಿ ಮಾಡಲಾಗಿದೆ. ಆದಾಯ ಮೀರಿ ಅಧಿಕ ಆಸ್ತಿ ಗಳಿಸಿದ ಆರೋಪದ ಮೇಲೆ ದಾಳಿ ಮಾಡಲಾಗಿದ್ದು, ಆದಾಯದ ಮೂಲ, ಆಸ್ತಿ ಪತ್ರಗಳು, ಬ್ಯಾಂಕ್ ವಿವರಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಅಧಿಕಾರಿ ಮಹೇಶ್ ಕುಮಾರ್ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ (lokayukta raid in mysore) ನಡೆಸಿದ್ದಾರೆ. ಮೈಸೂರಿನ ನಿವೇದಿತಾ ನಗರ ಸಂಕ್ರಾಂತಿ ವೃತ್ತದ ಮನೆ, ತೋಟದ ಮನೆ ಸೇರಿ ಹಲವು ಕಡೆ 13 ತಂಡದಿಂದ ಏಕಕಾಲಕ್ಕೆ‌ ಕಾರ್ಯಾಚರಣೆ ನಡೆದಿದೆ.

ತುಮಕೂರು: ಜಿಲ್ಲೆಯಲ್ಲಿ ಕೆಐಎಡಿಬಿ ಅಧಿಕಾರಿ ನರಸಿಂಹಮೂರ್ತಿ ಅವರ ಆರ್.ಟಿ. ನಗರದಲ್ಲಿ ಇರುವ ಮನೆ ಮೇಲೆ ಲೋಕಾಯುಕ್ತ ಡಿಎಸ್‌ಪಿಗಳಾದ ಮಂಜುನಾಥ್ ಹಾಗೂ ಹರೀಶ್ ತಂಡದಿಂದ ರೇಡ್ ನಡೆದಿದೆ.

ಶಿವಮೊಗ್ಗ: ತುಂಗಾ ಮೇಲ್ದಂಡೆ ಯೋಜನೆ ಇಇ ಪ್ರಶಾಂತ್, ಶಿಕಾರಿಪುರ ಜಿ.ಪಂ. ಇಂಜಿನಿಯರ್ ಶಂಕರ್ ನಾಯ್ಕ ಮನೆ ಮೇಲೆ ಲೋಕಾಯುಕ್ತ ಎಸ್‌ಪಿ‌ ವಾಸುದೇವ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿರುವ ಆರೋಪ ಇವರ ಮೇಲಿದೆ.

ಕೊಪ್ಪಳ: ಕೊಪ್ಪಳದಲ್ಲಿ ಭೂಸೇನಾ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಶರಣಪ್ಪ ಚಿಂಚೋಳಿಕರ್ ಮನೆ ಮೇಲೆ ರಾಯಚೂರು ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಕೊಪ್ಪಳ, ಕಲಬುರಗಿ ಹಾಗೂ ಬೀದರಿನಲ್ಲಿಯೂ ಶರಣಪ್ಪಗೆ ಸಂಬಂಧಿಸಿದ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ತನಿಖೆ ಮಾಡಲಾಗುತ್ತಿದೆ.‌

ಇದನ್ನೂ ಓದಿ: Lokayukta Raid: 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ; ಪಿಎಸ್‌ಐ ಸೇರಿ ಮೂವರು ಲೋಕಾಯುಕ್ತ ಬಲೆಗೆ

Exit mobile version