Site icon Vistara News

Lokayukta raid : ರಾಜೀನಾಮೆ ಆಗ್ರಹ; ಸಿಎಂ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್‌ ನಾಯಕರ ಬಂಧನ

Congress protest

#image_title

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಲಂಚ ಹಗರಣ ಬಯಲಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿತು. ಆನಂದ ರಾವ್‌ ಸರ್ಕಲ್‌ ಸಮೀಪದ ಕಾಂಗ್ರೆಸ್‌ ಭವನದಿಂದ ಸಿಎಂ ಅವರ ಕೃಷ್ಣಾ ನಿವಾಸಕ್ಕೆ ಹೊರಟ ಕಾಂಗ್ರೆಸ್‌ ನಾಯಕರನ್ನು ರೇಸ್‌ ಕೋರ್ಸ್‌ ಸರ್ಕಲ್‌ ಬಳಿ ವಶಕ್ಕೆ ಪಡೆದು ವಾಹನದಲ್ಲಿ ಬೇರೆಡೆಗೆ ಕಳುಹಿಸಲಾಯಿತು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್‌, ಎಂ.ಎ. ಸಲೀಂ, ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುವ ತಂಡದ ನೇತೃತ್ವ ವಹಿಸಿದ್ದರು.

ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರ ಜತೆಗೂಡಿ ಸಿದ್ದರಾಮಯ್ಯ ಮತ್ತಿತರ ನಾಯಕರು ಸಿಎಂ ನಿವಾಸದತ್ತ ಮೆರವಣಿಗೆಯಲ್ಲಿ ಹೊರಟರೆ ಅವರನ್ನು ತಡೆಯಲೆಂದು ರೇಸ್‌ ಕೋರ್ಸ್‌ ರಸ್ತೆಯ ಆರಾಧ್ಯ ಸರ್ಕಲ್‌ನಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಸಿಎಂ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸುತ್ತಾ ಸಾಗಿದ ಕಾಂಗ್ರೆಸ್‌ ನಾಯಕರು ಬ್ಯಾರಿಕೇಡ್‌ಗಳನ್ನು ತಳ್ಳಿ ಮುಂದಕ್ಕೆ ಸಾಗಲು ಯತ್ನಿಸಿದರು.

ಪೊಲೀಸರು ಕಾಂಗ್ರೆಸ್‌ ನಾಯಕರನ್ನು ವಶಕ್ಕೆ ಪಡೆದುಕೊಳ್ಳಲು ಮುಂದಾದಾಗ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ತಳ್ಳಾಟ ನೂಕಾಟ ನಡೆಯಿತು. ಅಂತಿಮವಾಗಿ ಸಿದ್ದರಾಮಯ್ಯ, ಪ್ರಿಯಾಂಕ ಖರ್ಗೆ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. ಅಲ್ಲಿಗೆ ಕಾಂಗ್ರೆಸ್‌ ಪ್ರತಿಭಟನೆ ಮುಕ್ತಾಯವಾಯಿತು.

ಬೆಂಗಳೂರು ಮಾತ್ರವಲ್ಲ, ರಾಜ್ಯದ ಇನ್ನೂ ಕೆಲವು ಕಡೆ ಸಿಎಂ ಬೊಮ್ಮಾಯಿಯವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗಳು ನಡೆಯುತ್ತಿವೆ.

ಇದನ್ನೂ ಓದಿ : Lokayukta raid : ಮಾಡಾಳು ಚನ್ನಗಿರಿ ನಿವಾಸದಲ್ಲಿ 16.5 ಲಕ್ಷ ವಶ; 1.5 ಲಕ್ಷ ರೂ. ವಾಪಸ್‌ ಹೆಂಡ್ತಿ ಕೈಗೆ ಕೊಟ್ಟ ಪೊಲೀಸರು!

Exit mobile version