ಬೆಂಗಳೂರು: ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ, ಕೆಎಎಸ್ ಅಧಿಕಾರಿ ಮಾಡಾಳು ಪ್ರಶಾಂತ್ ಅವರು ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿರುವ ಪ್ರಕರಣ ಕಾಂಗ್ರೆಸ್ ರೊಟ್ಟಿ ಕೈಯಿಂದ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ. ಕಾಂಗ್ರೆಸ್ ನಾಯಕರು ಬಿಜೆಪಿಯನ್ನು ಬಗೆ ಬಗೆಯಲ್ಲಿ ಗೇಲಿ ಮಾಡಲು ಆರಂಭ ಮಾಡಿದ್ದಾರೆ. ಗುರುವಾರ ರಾತ್ರಿಯಿಂದಲೇ ಆರಂಭವಾದ ಟ್ವೀಟ್ ವಿಡಂಬನೆಗಳು ಶುಕ್ರವಾರವೂ ಮುಂದುವರಿದಿದೆ.
40% ಕಮಿಷನ್ನಿಗೆ ದಾಖಲೆ ಕೊಡಿ ಎನ್ನುತ್ತಿದ್ದ ಬಸವರಾಜ ಬೊಮ್ಮಾಯಿಯವರೇ ಇಂದು ಲೋಕಾಯುಕ್ತ ದಾಳಿಯಲ್ಲಿ ಕಮಿಷನ್ ಕರ್ಮಕಾಂಡಕ್ಕೆ ದಾಖಲೆ ಸಿಕ್ಕಿತಲ್ಲವೇ? ಇದು ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಾಕ್ಷಿಯಲ್ಲವೇ? ಈಗ ಭ್ರಷ್ಟಾಚಾರಕ್ಕೆ ಹೊಣೆ ಹೊತ್ತು ರಾಜೀನಾಮೆ ಕೊಡುವಿರಾ? ನಿಮ್ಮದು 40% ಸರ್ಕಾರ ಎನ್ನಲು ಇನ್ನೇನು ಬೇಕು ಬಿಜೆಪಿಯವರೇ? – ಗುರುವಾರ ರಾತ್ರಿಯೇ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು.
ಶುಕ್ರವಾರವೂ ತನ್ನ ಲೇವಡಿ ಮುಂದುವರಿಸಿರುವ ಕಾಂಗ್ರೆಸ್ ಮತ್ತೊಂದು ಟ್ವೀಟ್ ಮಾಡಿದೆ.
ʻʻಕಮಿಷನ್ನಿನ ಪರ್ಸೆಂಟೂ ನಲವತ್ತು, ಪಡೆಯುತ್ತಿದ್ದ ಲಂಚವೂ ನಲವತ್ತು, ನಲವತ್ತು ನಲವತ್ತು, ತೋಳ ಹಳ್ಳಕ್ಕೆ ಬಿತ್ತು!! ಶಾಸಕರ ಪರವಾಗಿ ಶಾಸಕರ ಪುತ್ರ ಲಂಚ ಸ್ವೀಕರಿಸುವಾಗ ಸಿಕ್ಕಿಬೀಳುವ ಮೂಲಕ ಕರ್ನಾಟಕ ಬಿಜೆಪಿಯ ಕಮಿಷನ್ ದಂಧೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಂತಾಗಿದೆ. ಈಗ ಬೊಮ್ಮಾಯಿ ಅವರು ರಾಜೀನಾಮೆ ಕೊಡ್ತಾರಾ?- ಎಂದು ಕೇಳಿದೆ. ಇದಕ್ಕೆ ಕಾಂಗ್ರೆಸ್ #ElectionCollection ಎಂಬ ಹ್ಯಾಷ್ ಟ್ಯಾಗ್ ನೀಡಿದೆ.
ಇದನ್ನೂ ಓದಿ : Lokayukta raid : 2013ರ ಬಳಿಕ 2023ರಲ್ಲೂ ಕೈಗೆ ಸಿಕ್ತು ಭ್ರಷ್ಟಾಚಾರ ಅಸ್ತ್ರ; ಮಾಡಾಳು ಕೇಸ್ ಆಗುತ್ತಾ ಬ್ರಹ್ಮಾಸ್ತ್ರ?