Site icon Vistara News

Lokayukta Raid : 1000 ಕೋಟಿ ಆಸ್ತಿಯ ಒಡೆಯ, ಭ್ರಷ್ಟ ತಹಸೀಲ್ದಾರ್‌ ಅಜಿತ್‌ ರೈ ಅರೆಸ್ಟ್‌!

Ajit rai arrested

ಬೆಂಗಳೂರು: ಕಂತೆ ಕಂತೆ ನೋಟು, ಹತ್ತಾರು ಮನೆಗಳು, ನೂರಾರು ಎಕರೆ ಆಸ್ತಿ, ಐಷಾರಾಮಿ ಕಾರುಗಳು, ಚಿನ್ನಾಭರಣ ಸಹಿತ ಲಂಚದ ಹಣದ ಹಣದಿಂದಲೇ ಸಾವಿರಾರು ಕೋಟಿ ಒಡೆಯನಾದ ಕೆ.ಆರ್‌. ಪುರದ ತಹಸೀಲ್ದಾರ್‌ ಅಜಿತ್‌ ರೈಯನ್ನು (Ajit Rai) ಪೊಲೀಸರು ಬಂಧಿಸಿದ್ದಾರೆ. ಬುಧವಾರ ಬೆಂಗಳೂರಿನ 10 ಸ್ಥಳಗಳಿಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು (Lokayukta Raid) ಅಜಿತ್‌ ರೈಯ ಸಮಸ್ತ ಅಕ್ರಮಗಳನ್ನು ಬಯಲಿಗೆ ಎಳೆದಿದ್ದರು.

ಬುಧವಾ ಬೆಳ್ಳಂಬೆಳಗ್ಗೆ ಅಜಿತ್ ರೈ ಗೆ ಸೇರಿದ 11 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದರು. ದಾಳಿ ವೇಳೆ ಅಪಾರ ಪ್ರಮಾಣದಲ್ಲಿ ಆಸ್ತಿ, ಭೂ ದಾಖಲೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ತಡರಾತ್ರಿವರೆಗೂ ಬೆಂಗಳೂರಿನ ಸಹಕಾರ ನಗರದಲ್ಲಿರುವ ನಿವಾಸದಲ್ಲಿ ಶೋಧ ಕಾರ್ಯ ಮುಂದುವರಿಸಿದ್ದರು.

ಗುರುವಾರ ಬೆಳಗ್ಗೆ ಮತ್ತೆ ಶೋಧ ಕಾರ್ಯ‌ಆರಂಭಿಸಿದ ಲೋಕಾಯುಕ್ತ ಅಧಿಕಾರಿಗಳು ಪತ್ತೆಯಾಗಿದ್ದ ಕಡತಗಳ ಪರಿಶೀಲನೆ ಮಾಡಿದ್ದು, ಪರಿಶೀಲನೆ ವೇಳೆ ಅಜಿತ್ ರೈ ಅಕ್ರಮ‌ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಸಾಕಷ್ಟು ಅಂಶಗಳು ಬೆಳಕಿಗೆ ಬಂದಿವೆ.

ಬುಧವಾರ ಕಾರ್ಯಾಚರಣೆ ವೇಳೆ 40 ಲಕ್ಷ ರೂ. ಹಣವನ್ನು ಸೀಜ್ ಮಾಡಿ 1. 90 ಕೋಟಿ ಮೌಲ್ಯದ ಆಸ್ತಿ ಪತ್ತೆಯಚ್ಚಿದ್ದ ಲೋಕಾ ಅಧಿಕಾರಿಗಳು, ಮುಂದುವರಿದ ಭಾಗವಾಗಿ ಆತನಿಂದ ವಶಪಡಿಸಿಕೊಳ್ಳಲಾದ ಐಷಾರಾಮಿ ಕಾರುಗಳು. ಥಾರ್ ಜೀಪ್ ಹಾಗೂ ಬೈಕ್‌ಗಳ ಮೌಲ್ಯ ಮಾಪನ ಮಾಡಿದ್ದಾರೆ. ಅಜಿತ್ ರೈ ಬಳಸುತ್ತಿದ್ದ ಕಾರುಗಳ ಅಂದಾಜು ಮೌಲ್ಯವೇ ಐದು ಕೋಟಿಗೂ ಅಧಿಕ ಎಂಬುದಾಗಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಮನೆಗಳ ಮುಂದೆ ಕಾರುಗಳನ್ನ ನಿಲ್ಲಿಸುವುದರಲ್ಲೂ ಒಂದು ವ್ಯವಸ್ಥಿತ ಪ್ಲ್ಯಾನ್‌ ಮಾಡಿದ್ದರಂತೆ. ಮನೆಯ ಕಾಂಪೌಂಡ್‌ನ ಗೇಟ್ ತೆರೆಯುತ್ತಿದ್ದಂತೆ ಮೊದಲು ಫಾರ್ಚ್ಯುನರ್ ಕಾರು, ಅದರ ಹಿಂದೆ ಥಾರ್ ಜೀಪ್ ನಿಲ್ಲಿಸಲಾಗುತ್ತಿತ್ತು. ಇದು ಎಲ್ಲ ಮನೆಗಳಲ್ಲೂ ಒಂದೇ ರೀತಿಯಲ್ಲಿ ಪಾಲನೆ ಆಗುತ್ತಿತ್ತು.

ಇದನ್ನೂ ಓದಿ: Lokayukta Raid: ಅಬ್ಬಬ್ಬಾ.. ತಹಸೀಲ್ದಾರ್‌ ಅಜಿತ್‌ ರೈ ಸಂಪತ್ತು ನೋಡಿ ಅಧಿಕಾರಿಗಳು ಸುಸ್ತೋ ಸುಸ್ತು!

ಫಾರ್ಮ್ ಹೌಸ್ ಪಕ್ಕದಲ್ಲೆ ರೆಡಿಯಾಗ್ತಿತ್ತು ಹಾರ್ಸ್ ರೈಡಿಂಗ್ ಸ್ಕೂಲ್

ಅಜಿತ್ ರೈ ಮನೆಯಲ್ಲಿ ಐಶಾರಾಮಿ ಕಾರ್ ಬೈಕ್ ಗಳ ಜೊತೆಗೆ ಭಾರಿ ಪ್ರಮಾಣದಲ್ಲಿ ಭೂ ದಾಖಲೆಗಳು ಪತ್ತೆಯಾಗಿವೆ.
ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ಬಳಿ 136 ಎಕರೆ ಜಮೀನು ಮಾಡಿಕೊಂಡಿದ್ದಾರೆ. ಅದರಲ್ಲಿ ಗೌರವ್ ಶೆಟ್ಟಿ, ಸೋದರ ಆಶೀತ್ ರೈ ಹೆಸರಲ್ಲಿ ಬೇನಾಮಿ‌ ಇದೆ ಅನ್ನುವುದು ಪತ್ತೆಯಾಗಿದೆ. ಇದರ ಮೌಲ್ಯ ಕನಿಷ್ಠವೆಂದರೂ 300 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನವರೆಗೂ ಅಂದರೆ ಸರಿ‌ಸುಮಾರು 30 ಗಂಟೆಗಳ ಕಾಲ‌ ಶೋಧ ನಡೆಸಿದ ಅಧಿಕಾರಿಗಳು ಪಂಚನಾಮೆ ಪ್ರಕ್ರಿಯೆ ಮುಗಿಸಿ, ಮುಂದಿನ ವಿಚಾರಣೆ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಅಜಿತ್ ರೈಯನ್ನು ಬಂಧಿಸಿ, ಕಚೇರಿಗೆ ಕರೆತಂದಿದ್ದಾರೆ.

ಸದ್ಯ ಲೋಕಾಯುಕ್ತ ಕಚೇರಿಯಲ್ಲಿ ಅಜಿತ್ ರೈ ಬಂಧನ ಪ್ರಕ್ರಿಯೆ ಮುಗಿಸಿರುವ ತನಿಖಾಧಿಕಾರಿಗಳು ಮುಂದಿನ 24 ಗಂಟೆಗಳಲ್ಲಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದು, ಕಸ್ಟಡಿಗೆ ಪಡೆಯುವ ಸಾಧ್ಯತೆ ಇದ್ದು, ತನಿಖೆಯಲ್ಲಿ ಮತ್ತಷ್ಟು ಅಕ್ರಮ ಆಸ್ತಿ ಬೆಳಕಿಗೆ ಬರಲಿದೆ.

ಇದನ್ನೂ ಓದಿ: Lokayukta Raid: 14 ಜಿಲ್ಲೆಗಳಲ್ಲಿ 15 ಭ್ರಷ್ಟರ ಮೇಲೆ ಲೋಕಾ ದಾಳಿ; 31.57 ಕೋಟಿ ರೂ. ನಗ, ನಗದು ವಶ

Exit mobile version