ಬೆಂಗಳೂರು: ಲೋಕಾಯುಕ್ತ ಪೊಲೀಸರು (Lokayukta police) ಭ್ರಷ್ಟ ಅಧಿಕಾರಿಗಳನ್ನು ಅವರಿರುವ ಕಚೇರಿಗೆ ಹೋಗಿ ರೆಡ್ ಹ್ಯಾಂಡಾಗಿ ಹಿಡಿಯುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಲೋಕಾಯುಕ್ತರು ತನ್ನ ಮೇಲೆ ದಾಳಿ (Lokayukta raid) ಮಾಡುತ್ತಾರೆ ಎಂಬ ಸುಳಿವು ಪಡೆದ ಫುಡ್ ಇನ್ಸ್‌ಪೆಕ್ಟರ್ ತಪ್ಪಿಸಿಕೊಂಡಿದ್ದಾನೆ. ಅದರೆ, ಲೋಕಾಯುಕ್ತ ಪೊಲೀಸರು ಮಾತ್ರ ಬಿಡಲಿಲ್ಲ. 15 ಕಿ.ಮೀ. ದೂರಕ್ಕೆ ಅವನನ್ನು ಚೇಸ್ (15 KM Chase) ಮಾಡಿಕೊಂಡು ಹೋಗಿ ಹಿಡಿದಿದ್ದಾರೆ. ಈ ನಡುವೆ, ಹಲವು ಸುತ್ತಿನ ಡ್ರಾಮಾಗಳೂ ನಡೆದಿವೆ!
ಹೀಗೆ ಭಾರಿ ಡ್ರಾಮಾ ಮಾಡಿದರೂ ಕೊನೆಗೆ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದ ಅಧಿಕಾರಿಯ ಹೆಸರು ಮಹಂತೇ ಗೌಡ. ಮಹಂತೇ ಗೌಡ ಬೆಂಗಳೂರು ಉತ್ತರ ತಾಲೂಕು ತಹಸಿಲ್ದಾರ್ ಕಚೇರಿಯಲ್ಲಿ ಫುಡ್ ಇನ್ಸ್ ಪೆಕ್ಟರ್. ಪಡಿತರ ಅಂಗಡಿಯೊಂದಕ್ಕೆ ಲೈಸೆನ್ಸ್ ನೀಡಲು ಒಂದು ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದ.
ಅವನು ಡಿಮ್ಯಾಂಡ್ ಮಾಡಿದ್ದು ರಂಗಧಾಮಯ್ಯ ಎಂಬವರಿಂದ. ರಂಗಧಾಮಯ್ಯ ಅವರು ಮಹಂತೇ ಗೌಡ ಲಂಚ ಕೇಳುತ್ತಿದ್ದಾನೆ ಎಂಬ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಈ ನಡುವೆ, ರಂಗಧಾಮಯ್ಯ ಅವರು ಅವನು ಕೇಳಿದ 1 ಲಕ್ಷ ರೂ.ಯಲ್ಲಿ 43,000 ರೂ.ವನ್ನು ಶುಕ್ರವಾರ ರಾತ್ರಿ ಕೊಡುವುದಾಗಿ ಸಮಯ ಫಿಕ್ಸ್ ಮಾಡಲಾಗಿತ್ತು. ಮಹಂತೇ ಗೌಡ ಹಣ ಸ್ವೀಕರಿಸಲು ಸಿದ್ಧನಾಗಿದ್ದ. ರಂಗಧಾಮಯ್ಯ ಕೂಡಾ ಬಂದಿದ್ದರು. ಲೋಕಾಯುಕ್ತ ಪೊಲೀಸರು ಕೂಡಾ ಬಲೆ ಬೀಸಿ ಕಾಯುತ್ತಿದ್ದರು.
ಈ ನಡುವೆ ಮಹಂತೇಗೌಡನಿಗೆ ತನ್ನನ್ನು ಟ್ರ್ಯಾಪ್ ಮಾಡಲು ಪ್ಲ್ಯಾನ್ ಆಗಿದೆ ಎಂಬ ಸುಳಿವು ಸಿಕ್ಕಿದೆ. ಆತ ಹಣ ಸ್ವೀಕರಿಸಲು ಬಂದವನೇ ಅದನ್ನು ಪಡೆದು ಅಧಿಕಾರಿಗಳ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಇತ್ತ ಲೋಕಾಯುಕ್ತ ಅಧಿಕಾರಿಗಳು ತಮ್ಮ ಕೈಗೆ ಸಿಕ್ಕಿದ ಮಿಕ ತಪ್ಪಿಸಿಕೊಳ್ಳುವುದನ್ನು ಅಷ್ಟು ಸುಲಭದಲ್ಲಿ ಬಿಡಲಿಲ್ಲ. ಮಹಂತೇಗೌಡ ಕಾರಿನಲ್ಲಿ ತಪ್ಪಿಸಿಕೊಂಡು ಹೋದ ದಾರಿಯಲ್ಲೇ ಲೋಕಾಯುಕ್ತರೂ ಕಾರನ್ನು ಓಡಿಸಿ ಅವನನ್ನು ಬೆನ್ನಟ್ಟಿದರು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಭ್ರಷ್ಟರಿಗೆ ಶಿಕ್ಷೆಯಾಗಲಿ, ಲೋಕಾಯುಕ್ತ ಬಲಿಷ್ಠವಾಗಲಿ
ಸುಮಾರು 15 ಕಿ.ಮೀ. ದೂರಕ್ಕೆ ಕಾರನ್ನು ಚೇಸ್ ಮಾಡಲಾಯಿತು. ರಾತ್ರಿಯ ಹೊತ್ತು ಆಗಿದ್ದರಿಂದ ಯಾವುದೇ ಅಡೆತಡೆಗಳು ಕಡಿಮೆ ಇದ್ದವು. ಮಹಂತೇಗೌಡ ವೇಗವಾಗಿಯೇ ಕಾರು ಓಡಿಸುತ್ತಿದ್ದ. ಸುಮಾರು 15 ಕಿ.ಮೀ. ಸಾಗಿದ ಬಳಿಕ ಕೊನೆಗೂ ಅವನ ಕಾರನ್ನು ಅಡ್ಡಗಟ್ಟಲಾಯಿತು. ಆದರೆ, ಆಗಲೂ ಮಹಂತೇ ಗೌಡ ತನ್ನ ಆಟಾಟೋಪವನ್ನು ನಿಲ್ಲಿಸಲಿಲ್ಲ. ತಡೆಗಟ್ಟಿದ ಅಧಿಕಾರಿಯ ಮೇಲೆಯೇ ತನ್ನ ಕಾರನ್ನು ಹತ್ತಿಸಿ ಎಸ್ಕೇಪ್ ಆಗಲು ಯತ್ನಿಸಿದ.
ಆದರೆ, ಪೊಲೀಸ್ ಅಧಿಕಾರಿಗಳ ಮುಂದೆ ಅವನ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಕೊನೆಗೂ ಆತನನ್ನು ಲಾಕ್ ಮಾಡಲಾಯಿತು. ಈ ಬಗ್ಗೆ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೋಕಾಯುಕ್ತ ಅಧಿಕಾರಿಗಳು ಈಗ ಆತನನ್ನು ವಶಕ್ಕೆ ಪಡೆದಿದ್ದು, ಅವನ ಎಲ್ಲ ಜನ್ಮ ಜಾತಕ ಜಾಲಾಡಲು ಮುಂದಾಗಿದ್ದಾರೆ.