ಬೆಂಗಳೂರು: ಕೆಎಸ್‌ಡಿಎಲ್ ಲಂಚ ಪ್ರಕರಣದಲ್ಲಿ ಮೊದಲ ಆರೋಪಿ ಎಂದು ಗುರುತಿಸಲಾಗಿರುವ ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಗುರುವಾರ ರಾತ್ರಿ ಪುತ್ರನ ಮೇಲೆ ಲೋಕಾಯುಕ್ತ ದಾಳಿ ನಡೆದ ಬೆನ್ನಿಗೇ ಅವರು ಚನ್ನಗಿರಿಯ ತಮ್ಮ ನಿವಾಸದಿಂದ ಇನ್ನೊಬ್ಬ ಪುತ್ರ ಮಲ್ಲಿಕಾರ್ಜುನ್ ಅವರ ಜತೆಗೆ ಕಾರಿನಲ್ಲಿ ತೆರಳಿದ್ದು ಎಲ್ಲಿಗೆ ಹೋಗಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಈ ನಡುವೆ ಅವರು ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷತೆಗೆ ರಾಜೀನಾಮೆ ನೀಡಿದ್ದಾರೆ. ಆದರೂ ಪೊಲೀಸರ ಕೈಗೆ ಸಿಕ್ಕಿಲ್ಲ.
ಬೆಂಗಳೂರು ಜಲಮಂಡಳಿ ಅಧಿಕಾರಿ ಮಾಡಾಳು ಪ್ರಶಾಂತ್ ಅವರು 40 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ (Lokayukta raid) ಬಿದ್ದಿರುವ ಹಿನ್ನೆಲೆಯಲ್ಲಿ ತೀವ್ರ ತನಿಖೆ ಮುಂದುವರಿಯುತ್ತಿದ್ದು, ಅದು ಅಂತಿಮವಾಗಿ ತಂದೆ ವಿರೂಪಾಕ್ಷಪ್ಪ ಅವರ ಕುತ್ತಿಗೆಗೇ ಬರುವುದು ಖಚಿತವಾಗಿದೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (ಕೆಎಸ್‌ಡಿಎಲ್) ಅಧ್ಯಕ್ಷರಾಗಿರುವ ವಿರೂಪಾಕ್ಷಪ್ಪ ಮಾಡಾಳು ಅವರ ಪರವಾಗಿಯೇ ಮಗ ಪ್ರಶಾಂತ್ ಲಂಚ ಸ್ವೀಕರಿಸಿದ್ದಾರೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ನಿಟ್ಟಿನಲ್ಲಿ ವಿರೂಪಾಕ್ಷಪ್ಪ ಮಾಡಾಳು ಅವರಿಗೆ ಲೋಕಾಯುಕ್ತ ನೋಟಿಸ್ ನೀಡಲಾಗುತ್ತಿದೆ. ಅದಕ್ಕೆ ಸೂಕ್ತ ಉತ್ತರ ಸಿಗದೆ ಹೋದರೆ ಬಂಧನ ಖಾತ್ರಿಯಾಗಿದೆ. ಆದರೆ, ಅವರು ನೋಟಿಸ್ ಕೂಡಾ ಸ್ವೀಕರಿಸಿಲ್ಲ.
ಪ್ರಶಾಂತ್ ಅವರು ಬಿಡಬ್ಲ್ಯುಎಸ್‌ಎಸ್‌ಬಿಯ ಅಧಿಕಾರಿಯಾಗಿದ್ದಾರೆ. ಅವರು ತಮ್ಮ ಇಲಾಖೆಗೆ ಸಂಬಂಧಿಸಿದ ವಿಚಾರದಲ್ಲಿ ಲಂಚ ಸ್ವೀಕರಿಸಿದ್ದಲ್ಲ, ತಮ್ಮ ಕಚೇರಿಯಲ್ಲೂ ಲಂಚ ಸ್ವೀಕರಿಸಿಲ್ಲ. ತಮ್ಮ ತಂದೆಯವರ ಕಚೇರಿಯಲ್ಲಿ ಲಂಚ ಸ್ವೀಕರಿಸಿದ್ದು. ಮತ್ತು ಇದು ಕೆಎಸ್‌ಡಿಎಲ್‌ಗೆ ಕಚ್ಚಾ ವಸ್ತುಗಳನ್ನು ಪೂರೈಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದ ಡೀಲ್ ಆಗಿರುವುದರಿಂದ ಇದೆಲ್ಲದಕ್ಕೂ ವಿರೂಪಾಕ್ಷಪ್ಪ ಮಾಡಾಳ್ ಜತೆ ನೇರ ಸಂಬಂಧವಿರುವುದು ಪಕ್ಕಾ ಎಂಬಂತಾಗಿದೆ.
ಶಾಸಕ ಸೂಚನೆ ಮೇರೆಗೆ ಹಣ ನೀಡಲು ಹೋಗಿದ್ದರು
ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಸೂಚನೆಯ ಮೇರೆಗೆ ಪ್ರಶಾಂತ್ ಅವರ ಕೈಗೆ ಹಣ ಕೊಡಲು ಹೋಗಿದ್ದಾಗಿ ದೂರು ನೀಡಲಾಗಿದೆ. ಇದು ವಿರೂಪಾಕ್ಷಪ್ಪ ಬಂಧನಕ್ಕೆ ಹೆಚ್ಚಿನ ಅವಕಾಶವನ್ನು ಒದಗಿಸಿದಂತಾಗಿದೆ.
ಬಂಧನಕ್ಕೆ ಕಾರಣವಾದ ಪ್ರಮುಖ ಅಂಶಗಳು ಇವು
1. ಮಾಡಾಳು ಪ್ರಶಾಂತ್ ಮತ್ತು ವಿರೂಪಾಕ್ಷಪ್ಪ ಅವರು ತಂದೆ ಮಗ.
2. ಪ್ರಶಾಂತ್ ಅವರು ಲಂಚ ಸ್ವೀಕರಿಸಿದ್ದು ವಿರೂಪಾಕ್ಷಪ್ಪ ಅವರ ಕಚೇರಿಯಲ್ಲಿ
3. ಟೆಂಡರ್ ಕರೆದಿರುವುದು ಕೆಎಸ್‌ಡಿಎಲ್ ಕಚ್ಚಾ ವಸ್ತು ಸರಬರಾಜು ಸಂಬಂಧ
4. ಪ್ರಶಾಂತ್ ಜಲಮಂಡಳಿ ಅಧಿಕಾರಿಯಾಗಿದ್ದು ಅವರಿಗೆ ಕೆಎಸ್‌ಡಿಎಲ್ ಜತೆ ಯಾವುದೇ ಸಂಬಂಧವಿಲ್ಲ.
5. ಹೀಗಾಗಿ ತಂದೆಯ ಪರವಾಗಿಯೇ ಹಣ ಸ್ವೀಕರಿಸುತ್ತಿರುವುದು ಪ್ರಾಥಮಿಕವಾಗಿ ದೃಢವಾಗಿದೆ.
ಈ ನಡುವೆ, ಮಾಡಾಳು ವಿರೂಪಾಕ್ಷಪ್ಪ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಪ್ರಯತ್ನದಲ್ಲಿದ್ದಾರೆ ಎಂಬ ಮಾಹಿತಿಯೂ ಇದೆ.
ಇದನ್ನೂ ಓದಿ : Lokayukta raid : ನಲವತ್ತು ನಲವತ್ತು ತೋಳ ಹಳ್ಳಕ್ಕೆ ಬಿತ್ತು, ಕಮಿಷನ್‌ಗೆ ದಾಖಲೆ ಸಿಕ್ತು: ಬಿಜೆಪಿಗೆ ಕಾಂಗ್ರೆಸ್ ಗೇಲಿ