Site icon Vistara News

Lokayukta raid : ಮಾಡಾಳು ಚನ್ನಗಿರಿ ನಿವಾಸದಲ್ಲಿ 16.5 ಲಕ್ಷ ವಶ; 1.5 ಲಕ್ಷ ರೂ. ವಾಪಸ್‌ ಹೆಂಡ್ತಿ ಕೈಗೆ ಕೊಟ್ಟ ಪೊಲೀಸರು!

Davanagere house

#image_title

ದಾವಣಗೆರೆ: ಲೋಕಾಯುಕ್ತ ದಾಳಿಯ (Lokayukta raid) ಸುಳಿಯಲ್ಲಿ ಸಿಕ್ಕಿಬಿದ್ದಿರುವ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಚನ್ನಗಿರಿ ನಿವಾಸಕ್ಕೆ ಶುಕ್ರವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಒಟ್ಟು 16.5 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ. ಈ ನಡುವೆ, ಅದರಲ್ಲಿ 1.5 ಲಕ್ಷ ರೂ.ಯನ್ನು ಮನೆಯಲ್ಲೇ ಬಿಟ್ಟು ಬಂದಿದ್ದಾರೆ!

ಶಾಸಕರ ಮನೆಯಲ್ಲಿ ಶುಕ್ರವಾರ ಬೆಳಗ್ಗಿನಿಂದ ರಾತ್ರಿವರೆಗೆ ಪೊಲೀಸರು ದಾಳಿ ನಡೆಸಿದರು. ಬೆಡ್‌ ರೂಂ ಸೇರಿದಂತೆ ಎಲ್ಲ ಕಡೆ ಅಡಗಿಸಿಟ್ಟಿದ್ದ ಹಣವನ್ನು ವಶಕ್ಕೆ ಪಡೆದಿದ್ದರು. ಈ ದಾಳಿಗೆ ಮುನ್ನವೇ ಮಾಡಾಳು ವಿರೂಪಾಕ್ಷಪ್ಪ ಮತ್ತು ಅವರ ಪುತ್ರ ಮಲ್ಲಿಕಾರ್ಜುನ್‌ ಮನೆ ಬಿಟ್ಟು ಹೋಗಿರುವುದರಿಂದ ಅವರು ದೊಡ್ಡ ಮೊತ್ತದ ಹಣವನ್ನು ತೆಗೆದುಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿದ್ದು, ಈ ನಿಟ್ಟಿನಲ್ಲಿ ಸಿಸಿಟಿವಿ ಫೂಟೇಜ್‌ಗಳನ್ನು ಕೂಡಾ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ.

ಇತ್ತ ಪೊಲೀಸರು ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಮಾಡಾಳು ವಿರೂಪಾಕ್ಷಪ್ಪ ಅವರ ಪತ್ನಿ ನೀಲಮ್ಮ ಅವರಿಗೆ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಕುಟುಂಬದ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಲಾಗಿದೆ. ಅವರಿಗೆ ರಕ್ತದೊತ್ತಡ ಮತ್ತು ಸಕ್ಕರೆ ಪ್ರಮಾಣದಲ್ಲಿ ವ್ಯತ್ಯಯವಾಗಿತ್ತು.

ಈ ನಡುವೆ, ಲೋಕಾಯುಕ್ತ ರೇಡ್ ನಲ್ಲಿ ಸಿಕ್ಕ 16.5 ಲಕ್ಷ ಹಣದಲ್ಲಿ 1.5 ಲಕ್ಷ ರೂ.ವನ್ನು ಅಧಿಕಾರಿಗಳು ಮಾಡಾಳ್ ಕುಟುಂಬಕ್ಕೆ ವಾಪಸ್ ಕೊಟ್ಟಿದ್ದಾರೆ. ನಗದು ಹಣವನ್ನು ವಿರೂಪಾಕ್ಷಪ್ಪ ಪತ್ನಿ ನೀಲಮ್ಮ ಅವರಿಗೆ ನೀಡಿದ್ದಾರೆ. ಮತ್ತು ಹಣ ಕೊಟ್ಟಿರುವ ಬಗ್ಗೆ ಸಹಿ ಮಾಡಿಸಿಕೊಂಡು ದಾಖಲೆ ಪಡೆದಿದ್ದಾರೆ. ದಾಳಿ ವೇಳೆ ಸಿಕ್ಕ 20 ಕೆ.ಜಿ. ಬೆಳ್ಳಿ, 2.8 ಕೆಜಿ ಬಂಗಾರವನ್ನು ಮಹಜರ್ ನಲ್ಲಿ ತೋರಿಸಿ ಅದನ್ನು ಕೂಡಾ ಮರಳಿಸಿದ್ದಾರೆ.

1.5 ಲಕ್ಷ ರೂ. ಮರಳಿಸಿದ್ದು ಯಾಕೆ?

ಮನೆಯಲ್ಲಿ ವಿರೂಪಾಕ್ಷಪ್ಪ ಅವರ ಪತ್ನಿ ನೀಲಮ್ಮ ಮತ್ತು ಇನ್ನು ಕೆಲವರಿದ್ದಾರೆ. ಅವರ ನಿತ್ಯದ ಖರ್ಚು ನಿಭಾವಣೆ ಮತ್ತು ಆರೋಗ್ಯವೂ ಕೆಟ್ಟಿರುವುದರಿಂದ ಸಂಪೂರ್ಣ ಹಣ ಕೊಂಡು ಹೋದರೆ ಕಷ್ಟ ಎಂದು ಹಣವನ್ನು ಮರಳಿಸಲಾಗಿದೆ.

ಮನೆಯಲ್ಲಿ ಈಗ ಮಾಡಾಳು ಅವರ ಮೂರನೇ ಮಗ ಪ್ರವೀಣ್‌ ಮತ್ತು ಅವರ ಪತ್ನಿ ಕೂಡಾ ಇದ್ದಾರೆ.

ಇದನ್ನೂ ಓದಿ : Lokayukta Raid: ಶಾಸಕರ ಪುತ್ರ ತಂದ ಕಳಂಕ, ರಾಜ್ಯ ನಾಯಕರ ವಿರುದ್ಧ ಅಮಿತ್ ಶಾ ಸಿಡಿಮಿಡಿ, ಮೋದಿ ನೇತೃತ್ವದಲ್ಲಿ ಚುನಾವಣೆ?

Exit mobile version