ದಾವಣಗೆರೆ/ಬೆಂಗಳೂರು: ಜಲಮಂಡಳಿಯಲ್ಲಿ ಮುಖ್ಯಾಧಿಕಾರಿಯಾಗಿರುವ ಪುತ್ರ ಪ್ರಶಾಂತ್ ಮಾಡಾಳ್ ಅವರು ಲೋಕಾಯುಕ್ತ ಬಲೆಗೆ (Lokayukta Raid) ಬಿದ್ದ ಪ್ರಕರಣದಲ್ಲಿ ನಂಬರ್ ಒನ್ ಆರೋಪಿ ಎಂದು ಗುರುತಿಸಲಾಗಿರುವ ಚೆನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಗುರುವಾರ ಕೋರ್ಟ್ ಮುಂದೆ ಹಾಜರಾಗಲಿದ್ದಾರೆ.
ಕಳೆದ ವಾರ ಶಾಸಕರ ಕಚೇರಿಗೆ ದಾಳಿ ನಡೆದು ಪ್ರಶಾಂತ್ ಅವರು ಲಂಚವಾಗಿ ಸ್ವೀಕರಿಸುತ್ತಿದ್ದರು ಎನ್ನಲಾದ 40 ಲಕ್ಷ ರೂ. ಹಣವನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಕ್ಷಣದಿಂದಲೇ ನಾಪತ್ತೆಯಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಮಾರ್ಚ್ 7ರಂದು ಕೋರ್ಟ್‌ನಲ್ಲಿ ಜಾಮೀನು ದೊರೆಯುತ್ತಿದ್ದಂತೆಯೇ ಚೆನ್ನಗಿರಿಯಲ್ಲಿ ದೊಡ್ಡ ಮಟ್ಟದ ವಿಜಯೋತ್ಸವ ಮೆರವಣಿಗೆಯೊಂದಿಗೆ ಪ್ರತ್ಯಕ್ಷರಾಗಿದ್ದರು. ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತಾದರೂ 48 ಗಂಟೆಗಳ ಒಳಗೆ ಕೋರ್ಟ್ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಈ 48 ಗಂಟೆಗಳ ಅವಧಿ ಗುರುವಾರ ಮಧ್ಯಾಹ್ನದ ಹೊತ್ತಿಗೆ ಮುಕ್ತಾಯಗೊಳ್ಳಲಿದ್ದು, ಅದಕ್ಕೂ ಮುನ್ನ ಅವರು ಕೋರ್ಟ್‌ಗೆ ಹಾಜರಾಗಬೇಕಾಗಿದೆ.
ಇದೇವೇಳೆ, ಲೋಕಾಯುಕ್ತವು ಅವರನ್ನು ನಂಬರ್ ಒನ್ ಆರೋಪಿಯೆಂದು ಗುರುತಿಸಿದ ವಿಷಯವೂ ಸೇರಿದಂತೆ ಅವರ ಬಂಧನಕ್ಕೆ ಪೂರಕವಾಗಿ ತನ್ನಲ್ಲಿರುವ ಮಾಹಿತಿಯನ್ನು ಕೋರ್ಟ್‌ಗೆ ಸಲ್ಲಿಸಬೇಕಾಗುತ್ತದೆ. ಲೋಕಾಯುಕ್ತ ಈ ನಿಟ್ಟಿನಲ್ಲಿ ಸಿದ್ಧತೆಗಳನ್ನು ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಆದರೆ, ನಡುವೆ ತನಿಖಾಧಿಕಾರಿಗಳು ಬದಲಾದ ಹಿನ್ನೆಲೆಯಲ್ಲಿ ಕೋರ್ಟ್ ಮುಂದೆ ಲೋಕಾಯುಕ್ತ ವಕೀಲರು ಏನು ಹೇಳುತ್ತಾರೆ ಎಂದು ಕಾದು ನೋಡಬೇಕಾಗಿದೆ.
ಬೆಂಗಳೂರಿನ ಕಡೆಗೆ ಮಾಡಾಳ್
ಈ ನಡುವೆ, ಮಾಡಾಳ್ ವಿರೂಪಾಕ್ಷಪ್ಪ ಅವರು ಬುಧವಾರವೇ ಬೆಂಗಳೂರಿಗೆ ಬಂದು ಕೋರ್ಟ್‌ಗೆ ಹಾಜರಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಗುರುವಾರ ಕೋರ್ಟ್‌ಗೆ ಹೋಗುವುದಾಗಿ ಬಳಿಕ ಸ್ಪಷ್ಟನೆ ಬಂತು. ಒಂದು ಹಂತದಲ್ಲಿ ಯಾವುದೋ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೊರಟ ಮಾಡಾಳ್ ವಿರೂಪಾಕ್ಷಪ್ಪ ಅವರು ತಮ್ಮ ಆಡಿ ಕಾರಿನಲ್ಲಿ ನೇರವಾಗಿ ಬೆಂಗಳೂರಿಗೆ ಬಂದಿದ್ದಾರೆ ಎನ್ನಲಾಗಿದೆ.
ಸಾಮಾನ್ಯ ಕಾರಿನಲ್ಲಿ ಮನೆಯಿಂದ ಹೊರಟ ಅವರು ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ದರ್ಶನ ಪಡೆದು ಖಾಸಗಿ ಆಡಿ ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ. ದಾರಿ ಮಧ್ಯೆ ಅವರು ಗೌಪ್ಯ ಸ್ಥಳದಲ್ಲಿ ಕಾನೂನು ತಜ್ಞರ ಜತೆಗೆ ಸಮಾಲೋಚನೆ ನಡೆಸಿರುವ ಸಾಧ್ಯತೆ ಇದೆ.
ಪ್ರಶಾಂತ್ ಮಾಡಾಳು ಮನೆಯಲ್ಲಿ ಪರಿಶೀಲನೆ
ಇತ್ತ ಕಳೆದ ಏಳೆಂಟು ದಿನಗಳಿಂದ ಜೈಲಿನಲ್ಲಿರುವ ಮಾಡಾಳ್ ಪುತ್ರ ಪ್ರಶಾಂತ್ ಕೂಡಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರಾದರೂ ತ್ವರಿತ ವಿಚಾರಣೆಗೆ ಕೋರ್ಟ್ ಒಪ್ಪಲಿಲ್ಲ. ಲೋಕಾಯುಕ್ತರಿಗೆ ಆಕ್ಷೇಪ ಸಲ್ಲಿಕೆಗೆ ಅವಕಾಶ ಕೊಟ್ಟು ಮುಂದಿನ ವಿಚಾರಣೆಯನ್ನು ಮಾರ್ಚ್ 13ಕ್ಕೆ ನಿಗದಿಪಡಿಸಲಾಗಿದೆ.
ಇತ್ತ ಲೋಕಾಯುಕ್ತ ಅಧಿಕಾರಿಗಳು ಆರೋಪಿ ಪ್ರಶಾಂತ್ ಮಾಡಾಳ್ ಅವರ ಸಂಜಯ ನಗರ ಮನೆಗೆ ಪರಿಶೀಲನೆಗಾಗಿ ಭೇಟಿ ನೀಡಿದ್ದಾರೆ. ಲೋಕಾಯುಕ್ತ ಇನ್ಸ್ ಪೆಕ್ಟರ್ ಮಹದೇವಯ್ಯ ಅವರು ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿಯ ಡಿವಿಆರ್ ವಶಕ್ಕೆ ಪಡೆಯಲು ಬಂದಿದ್ದು ಮಹಜರು ಮಾಡಿ ಡಿವಿಆರ್ ವಶಕ್ಕೆ ಪಡೆದಿದ್ದಾರೆ.
ಪ್ರಶಾಂತ್ ಮನೆ ಇರುವ ಅಪಾರ್ಟ್‌ಮೆಂಟ್ ಸಿಸಿಟಿವಿಗಳ ಪರಿಶೀಲನೆ ನಡೆಸಲು ಮುಂದಾಗಿರುವ ಅಧಿಕಾರಿಗಳು ಇದಕ್ಕಾಗಿ ಇಬ್ಬರು ತಾಂತ್ರಿಕ ನಿಪುಣರನ್ನು ಕರೆತಂದಿದ್ದಾರೆ.
ಅಚ್ಚರಿ ಎಂದರೆ ಅಧಿಕಾರಿಗಳು ತಪಾಸಣೆಗೆ ಬಂದಿದ್ದ ಸಂದರ್ಭದಲ್ಲೇ ವಿರೂಪಾಕ್ಷಪ್ಪ ಅವರ ಹಿರಿಯ ಪುತ್ರ ಮಲ್ಲಿಕಾರ್ಜುನ್ ಮಾಡಾಳ್ ಅವರು ಕೂಡಾ ಆ ಮನೆಗೆ ಆಗಮಿಸಿದ್ದರು.
ಇನ್ನೊಂದು ಕಡೆ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಕೆಎಸ್‌ಡಿಎಲ್) ಕಚೇರಿಯಲ್ಲಿ ಲೋಕಾಯುಕ್ತರಿಂದ ಪರಿಶೀಲನೆ ಮುಂದುವರಿದಿದೆ. ಕಳೆದ ಮೂರು ದಿನದ ಹಿಂದೆ ದಾಖಲೆ ಪರಿಶೀಲಿಸಿದ್ದ ಲೋಕಾಯುಕ್ತ ಅಧಿಕಾರಿಗಳು ಮತ್ತೆ ಆಗಮಿಸಿದ್ದಾರೆ.
ಇದನ್ನೂ ಓದಿ : Lokayukta Raid: ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ನಿರೀಕ್ಷಣಾ ಜಾಮೀನು; ವಕೀಲರ ಸಂಘ ಆಕ್ಷೇಪ, ಸಿಜೆಐಗೆ ಪತ್ರ