ಬೆಂಗಳೂರು: ಕೆಎಸ್‌ಡಿಎಲ್ ಲಂಚ ಪ್ರಕರಣದಲ್ಲಿ ಲೋಕಾಯುಕ್ತ (Lokayukta raid) ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ. ಗುರುವಾರ ಸಂಜೆ 4 ಗಂಟೆಯ ವೇಳೆಗೆ ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾದ ಮಾಡಾಳ್ ಅವರನ್ನು ಸುಮಾರು ಮೂರು ಗಂಟೆ ಕಾಲ ವಿಚಾರಣೆ ನಡೆಸಿದ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಕೆಲವು ದಾಖಲೆಗಳನ್ನು ನೀಡಲು ಮಾಡಾಳ್ ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ.
ಪುತ್ರ ಮಾಡಾಳ್ ಪ್ರಶಾಂತ್ ಅವರನ್ನು 40 ಲಕ್ಷ ರೂ. ಲಂಚದ ಹಣದೊಂದಿಗೆ ರೆಡ್ ಹ್ಯಾಂಡ್ ಆಗಿ ಹಿಡಿದ ಲೋಕಾಯುಕ್ತರು ಪ್ರಕರಣದ ಮೊದಲ ಆರೋಪಿಯಾಗಿ ಶಾಸಕ, ಕೆಎಸ್‌ಡಿಎಲ್ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಮೊದಲ ಆರೋಪಿಯಾಗಿ ಗುರುತಿಸಿ ಬಂಧನಕ್ಕೆ ಅಣಿಯಾಗಿದ್ದರು. ಆದರೆ, ಮಾಡಾಳ್ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿ, ಎರಡು ದಿನಗಳ ಮಧ್ಯಂತರ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಮಾರ್ಚ್ 7ರಂದು ಜಾಮೀನು ಮಂಜೂರು ಮಾಡಿದ್ದ ಕೋರ್ಟ್ 48 ಗಂಟೆಯ ಒಳಗೆ ಲೋಕಾಯುಕ್ತರ ಮುಂದೆ ಹಾಜರಾಗಬೇಕು ಎಂಬ ಷರತ್ತು ವಿಧಿಸಿದ್ದರು. ಅದರಂತೆ ಮಾಡಾಳ್ ವಿರೂಪಾಕ್ಷಪ್ಪ ಅವರು ಬುಧವಾರವೇ ಚನ್ನಗಿರಿಯಿಂದ ಬೆಂಗಳೂರಿಗೆ ಬಂದಿದ್ದರು.
ಮಾಡಾಳ್ ವಿರೂಪಾಕ್ಷ ಅವರು ಬೆಳಗ್ಗೆ ವಕೀಲರನ್ನು ಸಂಪರ್ಕಿಸಿ, ಲೋಕಾ ತನಿಖೆಯನ್ನು ಯಾವ ರೀತಿ ಎದುರಿಸಬೇಕು, ಅವರು ಕೇಳುವ ಪ್ರಶ್ನೆಗಳಿಗೆ ಯಾವ ರೀತಿ ಉತ್ತರಿಸಬೇಕೆಂದು ಸುಮಾರು ಒಂದು ಗಂಟೆಗಳ ಕಾಲ ಚರ್ಚಿಸಿದರು. ಬಳಿಕ ಕೊನೆಗೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಲೋಕಾಯುಕ್ತ ತನಿಖಾಧಿಕಾರಿಗಳಾದ ಆಂಥೋಣಿ ಜಾನ್ ಹಾಗೂ ಬಾಲಾಜಿ ಬಾಬು ಮುಂದೆ ಹಾಜರಾದರು.
ಹಾಗೆ ಹಾಜರಾದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮೊದಲಿಗೆ ಕೋರ್ಟ್ ಆದೇಶದಂತೆ ತನಿಖಾಧಿಕಾರಿಗಳ ಮುಂದೆ ಐದು ಲಕ್ಷ ರೂ. ಬಾಂಡ್ ಹಾಗೂ ಇಬ್ಬರ ಜಾಮೀನು ಸೇರಿದಂತೆ ಕೆಲ ದಾಖಲೆಗಳನ್ನು ಸಲ್ಲಿಸಿ ನಿರೀಕ್ಷಣಾ ಜಾಮೀನು ಪ್ರಕ್ರಿಯೆ ಮುಗಿಸಿದರು. ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಪ್ರಶ್ನಾವಳಿ ಸಿದ್ಧಪಡಿಸಿಕೊಂಡಿದ್ದ ಅಧಿಕಾರಿಗಳ ಮುಂದೆ ಹಾಜರಾದರು. ತನಿಖಾಧಿಕಾರಿಗಳು ಶಾಸಕರು ಹೇಳುವ ಹೇಳಿಕೆಗಳನ್ನು ಲಿಖಿತವಾಗಿ ಹಾಗೂ ವಿಡಿಯೋಗ್ರಫಿ ಮೂಲಕ ದಾಖಲಿಸಿಕೊಂಡಿದ್ದಾರೆ.
ಏನೇನು ಪ್ರಶ್ನೋತ್ತರ?
ವಿಚಾರಣೆ ನಡೆಸಿದ ಅಧಿಕಾರಿಗಳು ಪ್ರಕರಣದ ದೂರುದಾರರಾದ ಶ್ರೇಯಸ್ ಕಶ್ಯಪ್ ಯಾರು ಅಂತಾ ನಿಮಗೆ ಗೊತ್ತಾ..?, ಕೆಮಿಕ್ಸಿಲ್ ಕಂಪನಿಯವರು ಟೆಂಡರ್ ಗಾಗಿ ನಿಮ್ಮ ಬಳಿ ಬಂದಿದ್ರಾ?, ಕೆಮಿಕ್ಸಿಲ್ ಕಂಪನಿಯ 2 ಕೋಟಿ ಟೆಂಡರ್ ಪ್ರಕ್ರಿಯೆ, ಶ್ರೇಯಸ್ ಕಶ್ಯಪ್ ಬಳಿ ಎರಡು ಕೋಟಿ ಟೆಂಡರ್ ಗೆ 1.20 ಕೋಟಿ ಲಂಚ ಕೇಳಿದ್ದು, ಫೈನಲಿ 81 ಲಕ್ಷಕ್ಕೆ ಒಪ್ಪಿಕೊಂಡಿದ್ದರು ಎಂಬ ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದರು ಎನ್ನಲಾಗಿದೆ. ತನ್ನ ಮೇಲಿನ ಆರೋಪಗಳನ್ನು ಮಾಡಾಳ್ ನಿರಾಕರಿಸಿದರು ಎನ್ನಲಾಗಿದೆ.
ಅಷ್ಟೇ ಅಲ್ಲದೇ ದಾಳಿ ವೇಳೆ ಸಿಕ್ಕಿ ಬಿದ್ದಿರುವ ಸುರೇಂದರ್, ಸಿದ್ದೇಶ್, ವಿಕ್ಟರ್ ನಿಕೋಲಸ್ ಹಾಗು ಗಂಗಾಧರ್ ಬಗ್ಗೆಯು ವಿಚಾರ ಮಾಡಿದ್ದು, ನನಗೆ ಯಾರು ಗೊತ್ತಿಲ್ಲ ಎಂದು ಮಾಡಾಳ್ ವಿರೂಪಾಕ್ಷಪ್ಪ ಉತ್ತರಿಸಿದ್ದಾರಂತೆ. ಅದರ ಜೊತೆಗೆ ಕೆಮಿಕ್ಸಿಲ್ ಕಂಪನಿಯ ಜೊತೆಗೆ ಕರ್ನಾಟಕ ಅರೋಮ ಕಂಪನಿ ಹಾಗು ಮತ್ತೊಂದು ಕಂಪನಿಯವರು ಟೆಂಡರ್ ಡೀಲ್ ಗೆ ಬಂದಿದ್ರಾ ಎಂದು ಕೇಳಿದ್ದು ಅದಕ್ಕೆ ಇಲ್ಲ ಎಂದು ಉತ್ತರಿಸಿದ್ದಾರಂತೆ.
ಉಳಿದಂತೆ ನಿಮ್ಮ ಪುತ್ರನ ಕಚೇರಿಯಲ್ಲಿ 2.8 ಕೋಟಿ ಹಣ ಹಾಗೂ ಮನೆಯಲ್ಲಿ ಸಿಕ್ಕ ಹಣದ ಬಗ್ಗೆ ವಿಚಾರಿಸಿದ್ದು, ಕಚೇರಿಯಲ್ಲಿ ಪತ್ತೆಯಾದ ಹಣದ ಬಗ್ಗೆ ಗೊತ್ತಿಲ್ಲ. ಮನೆಯಲ್ಲಿ ಸಿಕ್ಕ ಹಣ ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹೀಗೆ ಸರಿ ಸುಮಾರು ಮೂರು ಗಂಟೆಗಳ ಕಾಲ ತನಿಖಾಧಿಕಾರಿಗಳ ತನಿಖೆ ಎದುರಿಸಿದ ಮಾಡಾಳ್ ಕೆಲ ದಾಖಲೆ ಸಲ್ಲಿಸಲು ಕಾಲಾವಕಾಶ ಕೇಳಿ ಲೋಕಾಯುಕ್ತ ಕಚೇರಿಯಿಂದ ತೆರಳಿದ್ದಾರೆ.
ಇದನ್ನೂ ಓದಿ : Lokayukta Raid: ಬಿಜೆಪಿ ಟಿಕೆಟ್ ಆಕಾಂಕ್ಷೆಗೂ ಸಿಜೆಐ ಪತ್ರಕ್ಕೂ ಸಂಬಂಧವಿಲ್ಲ: ಮಾಡಾಳ್ ಪ್ರಕರಣದ ಕುರಿತು ವಿವೇಕ್ ರೆಡ್ಡಿ ಹೇಳಿಕೆ