ಬೆಂಗಳೂರು: ಮಗ ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಬೆನ್ನಲ್ಲೇ ಮಾಡಾಳು ವಿರೂಪಾಕ್ಷಪ್ಪ ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ನೀಡಿದ ಬೆನ್ನಲ್ಲೇ ಮಾಡಾಳು ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ಬೆಂಗಳೂರು ಜಲಮಂಡಳಿ ಅಧಿಕಾರಿ ಮಾಡಾಳು ಪ್ರಶಾಂತ್ ಅವರು 40 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ (Lokayukta raid) ಬಿದ್ದಿರುವ ಹಿನ್ನೆಲೆಯಲ್ಲಿ ತೀವ್ರ ತನಿಖೆ ಮುಂದುವರಿಯುತ್ತಿದ್ದು, ಅದು ಅಂತಿಮವಾಗಿ ಅದು ವಿರೂಪಾಕ್ಷಪ್ಪ ಅವರ ಕುತ್ತಿಗೆಗೇ ಬರುವುದು ಖಚಿತವಾಗಿದೆ. ಹೀಗಾಗಿ ಮುಜುಗರದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ರಾಜೀನಾಮೆ ನೀಡಿ ತನಿಖೆ ಎದುರಿಸುವಂತೆ ಸಿಎಂ ಅವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (ಕೆಎಸ್‌ಡಿಎಲ್) ಅಧ್ಯಕ್ಷರಾಗಿರುವ ವಿರೂಪಾಕ್ಷಪ್ಪ ಮಾಡಾಳು ಅವರ ಪರವಾಗಿಯೇ ಮಗ ಪ್ರಶಾಂತ್ ಲಂಚ ಸ್ವೀಕರಿಸಿದ್ದಾರೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ನಿಟ್ಟಿನಲ್ಲಿ ವಿರೂಪಾಕ್ಷಪ್ಪ ಮಾಡಾಳು ಅವರಿಗೆ ಲೋಕಾಯುಕ್ತ ನೋಟಿಸ್ ನೀಡಲಾಗುತ್ತಿದೆ. ಅದಕ್ಕೆ ಸೂಕ್ತ ಉತ್ತರ ಸಿಗದೆ ಹೋದರೆ ಬಂಧನ ಖಾತ್ರಿ ಎಂದು ಹೇಳಲಾಗಿದೆ.
ಪ್ರಶಾಂತ್ ಅವರು ಬಿಡಬ್ಲ್ಯುಎಸ್‌ಎಸ್‌ಬಿಯ ಅಧಿಕಾರಿಯಾಗಿದ್ದಾರೆ. ಅವರು ತಮ್ಮ ಇಲಾಖೆಗೆ ಸಂಬಂಧಿಸಿದ ವಿಚಾರದಲ್ಲಿ ಲಂಚ ಸ್ವೀಕರಿಸಿದ್ದಲ್ಲ, ತಮ್ಮ ಕಚೇರಿಯಲ್ಲೂ ಲಂಚ ಸ್ವೀಕರಿಸಿಲ್ಲ. ತಮ್ಮ ತಂದೆಯವರ ಕಚೇರಿಯಲ್ಲಿ ಲಂಚ ಸ್ವೀಕರಿಸಿದ್ದು. ಮತ್ತು ಇದು ಕೆಎಸ್‌ಡಿಎಲ್‌ಗೆ ಕಚ್ಚಾ ವಸ್ತುಗಳನ್ನು ಪೂರೈಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದ ಡೀಲ್ ಆಗಿರುವುದರಿಂದ ಇದೆಲ್ಲದಕ್ಕೂ ವಿರೂಪಾಕ್ಷಪ್ಪ ಮಾಡಾಳ್ ಜತೆ ನೇರ ಸಂಬಂಧವಿರುವುದು ಪಕ್ಕಾ ಎಂಬಂತಾಗಿದೆ.
ಇತ್ತ ಕಾಂಗ್ರೆಸ್ ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿ ಬಿಜೆಪಿ ಮೇಲೆ ನಿರಂತರವಾಗಿ ದಾಳಿ ನಡೆಸಲು ಆರಂಭಿಸಿದ್ದಾರೆ. ಮುಂದೆ ವಿಧಾನಸಭೆ ಚುನಾವಣೆ ಎದುರಿಸಬೇಕಾಗಿರುವ ಹಿನ್ನೆಲೆಯಲ್ಲಿ ಮುಜುಗರವಾಗುವ ಹಿನ್ನೆಲೆಯಲ್ಲಿ ಸಿಎಂ ಕೆಎಸ್‌ಡಿಎಲ್ ಅಧ್ಯಕ್ಷತೆಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ರಾಜೀನಾಮೆ ಪತ್ರದಲ್ಲಿ ಏನಿದೆ?
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಅಧ್ಯಕ್ಷ ಸ್ಥಾನಕ್ಕೆ ಮಾಡಾಳ್ ವಿರೂಪಾಕ್ಷಪ್ಪ ಅವರು ರಾಜೀನಾಮೆ ನೀಡಿದ ಪತ್ರದಲ್ಲಿ ʻಲೋಕಾಯುಕ್ತಾ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಮತ್ತು ಕುಟುಂಬದ ವಿರುದ್ದ ಷಡ್ಯಂತ್ರ ನಡೆಯುತ್ತಿದೆ. ನನ್ನ ಮೇಲೆ ಆಪಾದನೆ ಇರುವುದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸುತ್ತಿದ್ದೇನೆʼʼ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಇದನ್ನೂ ಓದಿ : Lokayukta raid : ಮಗನ ಮೂಲಕ ಲಂಚಾವತಾರ; ಯಾವುದೇ ಕ್ಷಣದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನ ಸಾಧ್ಯತೆ