ಬೆಂಗಳೂರು: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪ್ರಕರಣದಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಆದರೆ ಅವರು ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ ಎಂದು ಗೊತ್ತಾಗಿದೆ.
ಕೆಎಸ್ಡಿಎಲ್ ಟೆಂಡರ್ ಲಂಚ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದ್ದು, ಮಾಡಾಳು ಬಾಯಿ ಬಿಡದ ಹಿನ್ನೆಲೆಯಲ್ಲಿ ಅಧಿಕಾರಿಗಳು ಟೆಕ್ನಿಕಲ್ ಎವಿಡೆನ್ಸ್ ಮೊರೆ ಹೋಗಿದ್ದಾರೆ. ನಿನ್ನೆ ವಿರೂಪಾಕ್ಷಪ್ಪ ಅವರ ಮೊಬೈಲ್ ದೂರವಾಣಿಯನ್ನೂ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ಮೊಬೈಲ್‌ನಲ್ಲಿರಬಹುದಾದ ತಂದೆ-ಮಗನ ಮಾಹಿತಿಗಳ ಸೂಕ್ತ ಸಾಕ್ಷ್ಯಾಧಾರ ಕಲೆ ಹಾಕಲು ಲೋಕಾಯುಕ್ತ ಟೀಂ ಮುಂದಾಗಿದೆ.
ಆದರೆ ಮೊಬೈಲ್‌ನ ಬಹುತೇಕ ಡೇಟಾ ಸಂಪೂರ್ಣವಾಗಿ ಡಿಲೀಟ್ ಆಗಿದ್ದು, ಡಿಲೀಟ್ ಆದ ಡೇಟಾವನ್ನು ರಿಟ್ರೀವ್ ಮಾಡಲು FSLಗೆ ರವಾನಿಸಲಾಗುತ್ತಿದೆ. KSDL ಅಧಿಕಾರಿಗಳು, ಕೆಲವು ಟೆಂಡರ್ ಪಡೆದವರು ಹಾಗೂ ಮಗನ ಜೊತೆ ಮಾಡಿದ್ದ ಚಾಟ್ ಡಿಲೀಟ್ ಆಗಿವೆ. ವಾಟ್ಸಾಪ್ ಚಾಟ್, ಕರೆಗಳು, ರೆಗ್ಯುಲರ್ ಕರೆಗಳನ್ನು ತನಿಖೆಗೊಳಪಡಿಸಲಾಗುತ್ತಿದ್ದು, ಸುಮಾರು 6 ತಿಂಗಳ ಮೊಬೈಲ್ ಕಾಲ್ ಲಿಸ್ಟ್ ಪರಿಶೀಲಿಸಲಾಗುತ್ತಿದೆ.
ಜೊತೆಗೆ ದೂರುದಾರ ಶ್ರೇಯಸ್ ಕಶ್ಯಪ್ ಕೊಟ್ಟ ಸಾಕ್ಷ್ಯಾಧಾರಗಳನ್ನು ಮುಂದಿಟ್ಟುಕೊಂಡು ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಬಂಧನವಾಗಿರುವ ಮೂರು ಜನಗಳ ನಡುವಿನ ಸಂಪರ್ಕದ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಇವರಿಂದ ಶಾಸಕರಿಗೆ ಹೋದ ಕರೆಗಳು, ಟೆಂಡರ್ ಬಗ್ಗೆ ನಡೆದಿರಬಹುದಾದ ಮಾತುಕತೆ ಬಗ್ಗೆ ಪರಿಶೀಲಿಸಲಾಗುತ್ತಿದೆ. ಪ್ರಕರಣ ದಾಖಲಾದ ತಕ್ಷಣವೇ ಮೆಸೇಜ್‌ಗಳು ಡಿಲೀಟ್ ಆಗಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: Lokayukta Raid : ಶಾಸಕ ಮಾಡಾಳ್ ವಿರೂಪಾಕ್ಷಪ್ಪ 5 ದಿನ ಲೋಕಾಯುಕ್ತ ಕಸ್ಟಡಿಗೆ, ಕುಟುಂಬದ ಭೇಟಿ ಬಗ್ಗೆ ನಾಳೆ ನಿರ್ಧಾರ