ಬೆಂಗಳೂರು: ಬೆಂಗಳೂರು ಸೇರಿ ಗುರುವಾರ ಮುಂಜಾನೆ ರಾಜ್ಯದ 18ಕ್ಕೂ ಅಧಿಕ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ (Lokayukta Raid) ನಡೆಸಿದ್ದು, ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಚಿತ್ರದುರ್ಗ, ದಾವಣಗೆರೆ, ಕೊಡಗು ಸೇರಿ ಹಲವು ಕಡೆ ದಾಳಿ ನಡೆದಿದೆ.
ರಾಜಧಾನಿಯಲ್ಲಿ ನಾಲ್ಕು ಎಫ್‌ಐಆರ್‌ಗಳಿಗೆ ಸಂಬಂಧಿಸಿ ಹತ್ತು ಕಡೆ ಲೋಕಾಯುಕ್ತ ದಾಳಿ ನಡೆದಿದೆ. ವಿವಿಧ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಮಹದೇವಪುರ ವಲಯದ RI ನಟರಾಜ್ ಮನೆ ಮೇಲೆ ದಾಳಿ ನಡೆಸಲಾಗಿದೆ. ನಟರಾಜ್ ಈ ಹಿಂದೆ ಹಣ ಪಡೆಯುವಾಗ ಟ್ರಾಪ್ ಆಗಿದ್ದರು. ಅವರ ಬನಶಂಕರಿಯ ಮನೆ ಮೇಲೆ ದಾಳಿ ಮಾಡಲಾಗಿದೆ.
ಚಿತ್ರದುರ್ಗ: ಕೋಟೆ ನಾಡಿನಲ್ಲಿ ಚಿತ್ರದುರ್ಗದ ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಕೆ.ಮಹೇಶ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಕೆ.ಮಹೇಶ್ ಪತ್ನಿ ಬಿಬಿಎಂಪಿ AE ಹೆಚ್. ಭಾರತಿ ಮನೆ ಮೇಲೆಯೂ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ದೂರಿನ ಮೇರೆಗೆ ದಾವಣಗೆರೆಯ ಜಯನಗರದಲ್ಲಿನ ಮಹೇಶ್ ಮನೆ ಮೇಲೆ ಬೆಳಗ್ಗೆ 6 ಗಂಟೆಗೆ ದಾಳಿ ನಡೆಸಲಾಗಿದ್ದು, ಲೋಕಾಯುಕ್ತ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆದಿದೆ. ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆದಿದೆ.
ಬೀದರ್: ಚಿಟಗುಪ್ಪ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿ ವಿಜಯಕುಮಾರ್ ಅವರಿಗೆ ಸೇರಿದ ಹುಮ್ನಾಬಾದ ಪಟ್ಟಣದ ಟೀಚರ್ ಕಾಲೋನಿ ಹಾಗೂ ಹುಚಕನಳ್ಳಿ ಗ್ರಾಮದ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಅಕ್ರಮದ ಆಸ್ತಿ ಗಳಿಕೆ ಆರೋಪದ ಮೇಲೆ ಡಿವೈಎಸ್ಪಿ ಓಲೇಕಾರ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆ ಪರಿಶೀಶಿಲನೆ ನಡೆಸುತ್ತಿದ್ದಾರೆ.
ಮಡಿಕೇರಿ: ಕೊಡಗು ಎಡಿಸಿ ನಂಜುಂಡೇಗೌಡ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಡಿವೈಎಸ್ಪಿ ಪವನ್ ಕುಮಾರ್ ನೇತೃತ್ವದಲ್ಲಿ ಮೂವರು ಇನ್ಸ್‌ಪೆಕ್ಟರ್ ಮತ್ತು 10ಕ್ಕೂ ಹೆಚ್ಚು ಸಿಬ್ಬಂದಿಗಳಿಂದ ದಾಳಿ ಹಾಗೂ ಹುಡುಕಾಟ ನಡೆದಿದೆ. ಕೊಡಗು ಮತ್ತು ಮೈಸೂರು ಜಿಲ್ಲೆ ಲೋಕಾಯುಕ್ತ ಪೊಲೀಸರ ಜಂಟಿ ಕಾರ್ಯಾಚರಣೆ ಇದಾಗಿದ್ದು, ಮಡಿಕೇರಿಯಲ್ಲಿರುವ ನಂಜುಂಡೇಗೌಡರ ಕ್ವಾರ್ಟ್ರಸ್ ಮೇಲೆ ದಾಳಿ ನಡೆದಿದೆ.
ದಾವಣಗೆರೆ: ಚನ್ನಗಿರಿ ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿ ಆರ್.ಎಫ್.ಒ ಸತೀಶ್ ಮನೆ ಮೇಲೆ ಲೋಕಾಯುಕ್ತ ಎಸ್ಪಿ ಕೌಲಾಪುರೆ ನೇತೃತ್ವದಲ್ಲಿ ದಾಳಿ ನಡೆದಿದೆ. ಚನ್ನಗಿರಿ ಆರಣ್ಯ ಇಲಾಖೆಯ ಕ್ವಾರ್ಟ್ರಸ್ ಮನೆಯ ಮೇಲೆ ದಾಳಿ ನಡೆದಿದೆ.
ಇದನ್ನೂ ಓದಿ: Lokayukta Raid : ಬಿಬಿಎಂಪಿ ರೆವಿನ್ಯೂ ಕಚೇರಿಗಳ ಮೇಲೆ ಲೋಕಾಯುಕ್ತ ಮೆಗಾ ರೇಡ್!