Site icon Vistara News

Lokayukta Raid: ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಎಡಿಟಿಪಿ ಮನೆಯಲ್ಲಿತ್ತು 1.44 ಕೋಟಿ ರೂ.; ಬೆಂಗಳೂರಲ್ಲೇ ಇದೆ 12 ಫ್ಲ್ಯಾಟ್‌

bbmp ಗಂಗಾಧರಯ್ಯ

#image_title

ಬೆಂಗಳೂರು: ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿರುವ ಲೋಕಾಯುಕ್ತ ಅಧಿಕಾರಿಗಳು (Lokayukta Raid) ಸೋಮವಾರ ಬಿಬಿಎಂಪಿಯ ನಗರ ಯೋಜನೆ ಸಹಾಯಕ ನಿರ್ದೇಶಕ ಮನೆ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ 1 ಕೋಟಿ ರೂಪಾಯಿಗೂ ಅಧಿಕ ನೋಟು, ಚಿನ್ನಾಭರಣ, ನಿವೇಶನಗಳ ದಾಖಲೆಗಳು ಪತ್ತೆ ಆಗಿವೆ.

ಗಂಗಾಧರಯ್ಯ ಎಂಬಾತ ಬಿಬಿಎಂಪಿಯ ಯಲಹಂಕ ವಲಯದ ನಗರ ಯೋಜನೆ ಸಹಾಯಕ ನಿರ್ದೇಶಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಈತ ಆದಾಯಕ್ಕೂ ಮೀರಿ ಆಸ್ತಿ ಹೊಂದಿರುವುದು ಕಂಡು ಬಂದಿದೆ. ಸೋಮವಾರ (ಏ.24) ಬೆಳಗಿನ ಜಾವ 6 ಗಂಟೆ ಸುಮಾರಿಗೆ ಎಸ್‌ಪಿ ಅಶೋಕ್ ನೇತೃತ್ವದ 20ಕ್ಕೂ ಹೆಚ್ಚು ಅಧಿಕಾರಿಗಳು ಕುರುಬರಹಳ್ಳಿ ಬಳಿ ಇರುವ ಗಂಗಾಧರಯ್ಯನ ಮನೆ ಮೇಲೆ ದಾಳಿ ನಡೆಸಿದರು.

ಬಿಬಿಎಂಪಿಯ ಯಲಹಂಕ ವಲಯದ ನಗರ ಯೋಜನೆ ಸಹಾಯಕ ನಿರ್ದೇಶಕ ಗಂಗಾಧರಯ್ಯ

ಈ ವೇಳೆ ಮನೆಯಲ್ಲಿಯೇ 1.40 ಕೋಟಿ ರೂಪಾಯಿ ನಗದು, 1 ಕೋಟಿ ಮೌಲ್ಯದ ಚಿನ್ನಾಭರಣ, ವಿದೇಶಿ ಕರೆನ್ಸಿ ಇರುವುದು ಪತ್ತೆಯಾಗಿದೆ. ಅಲ್ಲದೆ ಯಲಹಂಕ, ಜೆ.ಸಿ ನಗರ ಮತ್ತು ಹೆಬ್ಬಾಳದಲ್ಲಿ ಒಂದೊಂದು ಮನೆ ಹಾಗೂ ನೆಲಮಂಗಲದಲ್ಲಿ 1.5 ಕೋಟಿ ರೂಪಾಯಿ ಮೌಲ್ಯದ 5 ಎಕರೆ ಜಮೀನು ಇದೆ. ಮಲ್ಲೇಶ್ವರಂನಲ್ಲಿ 3.65 ಕೋಟಿ ರೂಪಾಯಿ ಮೌಲ್ಯದ ನಿವೇಶನವನ್ನು ಹೊಂದಿದ್ದಾರೆ. ಈತನ ಶ್ರೀಮಂತಿಕೆ ಇಲ್ಲಿಗೇ ಮುಗಿಯುವುದಿಲ್ಲ, ಬೆಂಗಳೂರು ಒಂದರಲ್ಲೇ ಗಂಗಾಧರಯ್ಯ ಹೆಸರಲ್ಲಿ 12 ಫ್ಲ್ಯಾಟ್‌ಗಳು ಇವೆ.

ಗಂಗಾಧರಯ್ಯ ಕಳೆದ 18 ವರ್ಷದಿಂದ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ. ಈತನ ವಿರುದ್ಧ ಅಕ್ರಮ ಆಸ್ತಿ ಗಳಿಕೆ, ಲಂಚ ಪಡೆಯುವ ಕುರಿತು ನಿರಂತರವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: Karnataka Election: ಕುಮಾರಸ್ವಾಮಿ ಸಿಎಂ ಆಗಿ ಮುಸ್ಲಿಮರಿಗೆ ಶೇ.4 ಮೀಸಲಾತಿ ಮರು ಜಾರಿ ಮಾಡ್ತಾರೆ: ಸಿ.ಎಂ.ಇಬ್ರಾಹಿಂ

ಸದ್ಯ ಗಂಗಾಧರಯ್ಯ ಎಲ್ಲೆಲ್ಲ ಕೆಲಸ ನಿರ್ವಹಿಸಿದ್ದಾನೋ ಆ ಬಗ್ಗೆಯೂ ಲೋಕಾಯುಕ್ತ ಅಧಿಕಾರಿಗಳು ಈಗಾಗಲೇ ಮಾಹಿತಿ ಕಲೆ ಹಾಕಿದ್ದು, ಆ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ವಿವರಗಳನ್ನು ಸಹ ಕಲೆ ಹಾಕುತ್ತಿದ್ದಾರೆ.

Exit mobile version