ಬೆಂಗಳೂರು: ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಹಾಗೂ ಲಂಚ ಪಡೆಯುವ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ಎಡಿಜಿಪಿ ಸೇರಿದಂತೆ ಹಲವಾರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಬೆಂಗಳೂರು, ದಾವಣಗೆರೆ, ಬಳ್ಳಾರಿ, ಬೀದರ್, ಕೋಲಾರ ಮುಂತಾದೆಡೆ ದಾಳಿ ನಡೆದಿವೆ.
ಬಿಬಿಎಂಪಿಯಲ್ಲಿ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಗಂಗಾಧರಯ್ಯ ಎಂಬವರ ಯಲಹಂಕದಲ್ಲಿರುವ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಬಗ್ಗೆ ಬಂದ ದೂರುಗಳ ಹಿನ್ನೆಲೆಯಲ್ಲಿ ದಾಳಿ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ. ಮಹಾಲಕ್ಷ್ಮೀ ಲೇಔಟ್‌ನಲ್ಲಿ ಇರುವ ಅವರ ಇನ್ನೊಂದು ಮನೆಗೂ 15 ಜನ ಲೋಕಾಯುಕ್ತ ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ. ಒಬ್ಬರು ಎಸ್ಪಿ, ಇಬ್ಬರು ಡಿವೈಎಸ್ಪಿ ಮತ್ತು ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮನೆ ಹಾಗೂ ವಾಹನಗಳ ಇಂಚಿಂಚನ್ನೂ ಬಿಡದೆ ಪರಿಶೀಲಿಸಲಾಗುತ್ತಿದೆ.
ಕೋಲಾರದಲ್ಲಿ ಇಒ ಮನೆ ಮೇಲೆ ದಾಳಿ
ಕೋಲಾರ: ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಎನ್.ವೆಂಕಟೇಶಪ್ಪ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಂಗಾರಪೇಟೆ ಪಟ್ಟಣದಲ್ಲಿ ಮೂರು ಕಡೆ, ಮುಳಬಾಗಿಲು ತಾಲ್ಲೂಕು ತಿಪ್ಪದೊಡ್ಡಿಯಲ್ಲಿ ಎರಡು ಕಡೆ ಹೀಗೆ ಐದು ಕಡೆ ವೆಂಕಟೇಶಪ್ಪಗೆ ಸೇರಿದ ಐದು ಆಸ್ತಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಕಳೆದ ಎಂಟು ವರ್ಷಗಳಿಂದ ಬಂಗಾರಪೇಟೆ ತಾಲ್ಲೂಕು ಪಂಚಾಯತ್ ಇಓ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶಪ್ಪಗೆ ಎರಡು ದಿನಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಗೆ ವರ್ಗಾವಣೆಯಾಗಿತ್ತು. ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮಹತ್ವದ ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಬಳ್ಳಾರಿ ಜೆಸ್ಕಾಂ ಎಇಇ ಮನೆ ಮೇಲೆ ದಾಳಿ
ಬಳ್ಳಾರಿ: ಜೆಸ್ಕಾಂ ಎಇಇ ಆಗಿರುವ ಹುಸೇನ್ ಸಾಬ್ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಇಂದು ಬೆಳಗ್ಗೆ ಬೆಂಗಳೂರು ಮತ್ತು ಬಳ್ಳಾರಿಯ ಲೋಕಾಯುಕ್ತ ತಂಡಗಳು ಬಳ್ಳಾರಿ ಬುಡಾ ಕಾಂಪ್ಲೆಕ್ಸ್‌ನಲ್ಲಿರುವ ಕಚೇರಿ, ರಾಘವೇಂದ್ರ ಕಾಲೋನಿಯಲ್ಲಿರುವ ಮನೆ ಮತ್ತು ಹುಟ್ಟೂರು ಶಿಡಿಗಿನಮೊಳದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದವು.
ಬೀದರ್‌ನಲ್ಲಿ ಆರು ಕಡೆ ದಾಳಿ
ಬೀದರ್: ಗಡಿ ಜಿಲ್ಲೆ ಬೀದರ್‌ನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್ ನೀಡಿದೆ. ಜಿಲ್ಲೆಯಾದ್ಯಂತ 6 ಕಡೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಉಪ ತಹಶೀಲ್ದಾರ್ ವಿಜಯಕುಮಾರ್ ಸ್ವಾಮಿ ಅವರ ಬೀದರ್‌ನ ಆನಂದ್ ನಗರ ಹಾಗೂ ಬಸವಕಲ್ಯಾಣ ಪಟ್ಟಣದಲ್ಲಿರುವ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ಬಸವಕಲ್ಯಾಣ ಮುಡಬಿ ಕಚೇರಿ ಹಾಗೂ ಬಸವಕಲ್ಯಾಣ ಪಟ್ಟಣದ ಗ್ಯಾರೇಜ್‌ನಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ. ಬಸವಕಲ್ಯಾಣ ತಾಲೂಕಿನ ಮುಡಬಿಯಲ್ಲಿ ಉಪ ತಹಶೀಲ್ದಾರ್ ಆಗಿ ಸ್ವಾಮಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಕ್ಸಿಕ್ಯುಟಿವ್ ಇಂಜಿನಿಯರ್ ಸುರೇಶ್ ಮೇದಾ ಅವರ ಗುರುನಗರದ ನಿವಾಸ ಹಾಗೂ ನೌಬಾದ್‌ನಲ್ಲಿರುವ ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ.
ಇಬ್ಬರು ಅಧಿಕಾರಿಗಳ ಮೇಲೆ ದಾಳಿ
ದಾವಣಗೆರೆ: ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ನಿವೃತ್ತ ಡಿಸಿಎಫ್ ನಾಗರಾಜ್ ಹಾಗೂ ಹೊಳಲ್ಕೆರೆ ತಹಸೀಲ್ದಾರ್ ನಾಗರಾಜ್ ಅವರ ಶಿವಮೊಗ್ಗದ ಮನೆ ಹಾಗೂ ಶಿಕಾರಿಪುರದ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಅವರ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಬಳಿಯ ತೋಟದ ಮನೆಯ ಮೇಲೂ ದಾಳಿ ನಡೆದಿದೆ. ಇಬ್ಬರು ಅಧಿಕಾರಿಗಳ ಏಳು ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತೃತ್ವದಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ: Lokayukta Raid: ರಾಯಚೂರಿನಲ್ಲಿ 45 ಸಾವಿರ ರೂ. ಲಂಚ ಸ್ವೀಕಾರ; ನಗರಸಭೆ ಅಭಿಯಂತರ ಲೋಕಾಯುಕ್ತ ಬಲೆಗೆ