Site icon Vistara News

Lokayukta Raid | ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

Lokayukta Raid

ಕಾರವಾರ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಅಧಿಕಾರಿಗಳು (Lokayukta Raid), ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಅಂಕೋಲಾ ಹಾಗೂ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಅಧಿಕಾರಿಗಳನ್ನು ಬಂಧಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ ಜಮೀನೊಂದರ ಬದಲಿ ನಕ್ಷೆ ತಯಾರಿಸಿಕೊಡಲು ಸರ್ವೆ ಅಧಿಕಾರಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತಾಲೂಕು ಭೂ ದಾಖಲೆ ಮತ್ತು ಸರ್ವೆ ಇಲಾಖೆಯ ಸಹಾಯಕ ನಿರ್ದೇಶಕ ಪುಟ್ಟಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಯಾಗಿದ್ದಾರೆ.

ಜಮೀನು ನಕ್ಷೆಗಾಗಿ ರಮೇಶ ನಾಯಕ ಎಂಬುವವರು ಅರ್ಜಿ ಸಲ್ಲಿಸಿದ್ದರು. ಅವರಿಗೆ ನಕ್ಷೆ ಬದಲಿಸಿ ಕೊಡಲು 50 ಸಾವಿರ ರೂಪಾಯಿ ನೀಡುವಂತೆ ಅಧಿಕಾರಿ ಪುಟ್ಟಸ್ವಾಮಿ ಬೇಡಿಕೆಯಿಟ್ಟಿದ್ದರು. ಈ ಮೊದಲು 5 ಸಾವಿರ ರೂಪಾಯಿ ಪಡೆದುಕೊಂಡಿದ್ದರು. ಈ ಬಗ್ಗೆ ರಮೇಶ ನಾಯಕ ಕಾರವಾರ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ | Accidental death : ಶೀಟ್‌ ಮನೆ ಮೇಲೆ ಪಕ್ಕದ ಮನೆ ಪಿಲ್ಲರ್ ಬಿದ್ದು ವ್ಯಕ್ತಿ ದಾರುಣ ಸಾವು

ಅದರಂತೆ ಪಟ್ಟಣದ ಖಾಸಗಿ ಹೊಟೇಲ್‌ನಲ್ಲಿ 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಲೋಕಾಯುಕ್ತ ಡಿ.ವೈ.ಎಸ್.ಪಿ ರಾಜು ನೇತೃತ್ವದ ತಂಡ ದಾಳಿ ನಡೆಸಿ, ಅಧಿಕಾರಿಯನ್ನು ವಶಕ್ಕೆ ಪಡೆದಿದೆ. ಕಾರವಾರ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಅಧಿಕಾರಿಯ ಬಂಧನ
ಬೆಂಗಳೂರಿನ ರಾಜಾಜಿನಗರದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿ, ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ. ನಾರಾಯಣಪ್ಪ ಬಂಧಿತ ಅಧಿಕಾರಿ. ಪ್ರೇರಣಾ ಯೋಜನೆಯಡಿ ಸಾಲ ಪಡೆಯಲು ವ್ಯಕ್ತಿಯೊಬ್ಬರು ಅರ್ಜಿ ಹಾಕಿದ್ದರು. ಸಾಲ ಮಂಜೂರಾತಿಗೆ ಬಂದಿದ್ದ ಕಡತಗಳನ್ನು ವಿಲೇವಾರಿ ಮಾಡಲು ಅಧಿಕಾರಿ 3 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಅದರಂತೆ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಳು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ವಹಿಸಿದ್ದಾರೆ.

ಇದನ್ನೂ ಓದಿ | Car Theft | ಲೋನ್​ ಕಟ್ಟಲಾಗದೇ ಕಾರು ಕಳ್ಳತನದ ಸುಳ್ಳು ದೂರು ಕೊಟ್ಟವ ಸೆರೆಮನೆ ಸೇರಿದ!

Exit mobile version