ಬೆಂಗಳೂರು: ಕೆಎಸ್‌ಡಿಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿ (Lokayukta Raid) ಬಂಧನ ಭೀತಿ ಎದುರಿಸುತ್ತಿದ್ದ ಬಿಜೆಪಿ ನಾಯಕ, ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ಏಳು ದಿನಗಳ ಹಿಂದೆ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಶಾಸಕರ ಕಚೇರಿಯಲ್ಲೇ ಕುಳಿತು 40 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಇದು ತಂದೆಯ ಪರವಾಗಿ ಮಗ ನಡೆಸಿದ ವ್ಯವಹಾರ ಎಂಬ ನಿರ್ಧಾರಕ್ಕೆ ಬಂದ ಲೋಕಾಯುಕ್ತರು ಈ ಪ್ರಕರಣದಲ್ಲಿ ಪ್ರಧಾನ ಆರೋಪಿಯಾಗಿ ವಿರೂಪಾಕ್ಷಪ್ಪ ಅವರನ್ನೇ ನಮೂದಿಸಿದ್ದರು.
ಆದರೆ, ಘಟನೆ ನಡೆದ ದಿನದಿಂದಲೇ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದರು. ಅವರಿಗಾಗಿ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದರು. ಇದರ ನಡುವೆಯೇ ಮಾಡಾಳ್ ವಿರೂಪಾಕ್ಷಪ್ಪ ಅವರು ನಿರೀಕ್ಷಣಾ ಜಾಮೀನಿಗಾಗಿ ಒಂದು ಅರ್ಜಿ ಮತ್ತು ತಮ್ಮ ಮೇಲಿನ ಎಫ್‌ಐಆರ್ ರದ್ದತಿ ಕೋರಿ ಇನ್ನೊಂದು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಕೋರ್ಟ್ ಮಾಡಾಳ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಜತೆಗೆ ಈ ವಿಚಾರದಲ್ಲಿ ಆಕ್ಷೇಪಣೆ ಸಲ್ಲಿಸಲು ಲೋಕಾಯುಕ್ತಕ್ಕೂ ಅವಕಾಶ ಒದಗಿಸಿದೆ.
ಟೆಂಡರ್‌ಗೂ ಮಾಡಾಳ್‌ಗೂ ಸಂಬಂಧವಿಲ್ಲ ಎಂದ ವಕೀಲರು
ನ್ಯಾಯಮೂರ್ತಿ ನಟರಾಜನ್ ಅವರನ್ನು ಒಳಗೊಂಡ ನ್ಯಾಯಪೀಠದಲ್ಲಿ ವಿಚಾರಣೆ ನಡೆದಿದ್ದು, ಮಾಡಾಳ್ ವಿರೂಪಾಕ್ಷಪ್ಪ ಪರವಾಗಿ ಹಾಜರಾದ ವಕೀಲ ಸಂದೀಪ್ ಪಾಟೀಲ್ ಅವರು, ಕಚ್ಚಾ ವಸ್ತುಗಳ ಟೆಂಡರ್‌ಗೂ ಕೆಎಸ್‌ಡಿಎಲ್ ಅಧ್ಯಕ್ಷರಾಗಿರುವ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೂ ಸಂಬಂಧವಿಲ್ಲ ಎಂದು ವಾದಿಸಿದರು.
ವಿರೂಪಾಕ್ಷಪ್ಪ ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಕೆಎಸ್‌ಡಿಎಲ್) ಅಧ್ಯಕ್ಷರಾಗಿದ್ದಾರೆ. ನಿಗಮದಲ್ಲಿ ಟೆಂಡರ್ ಪ್ರಕ್ರಿಯೆಯನ್ನು ನೋಡಿಕೊಳ್ಳಲು ಪ್ರತ್ಯೇಕ ಸಮಿತಿ ಇದೆ. ಹೀಗಾಗಿ ಅಧ್ಯಕ್ಷರಿಗೂ ಟೆಂಡರ್‌ಗೂ ಯಾವುದೇ ಸಂಬಂಧವಿಲ್ಲ. ಹಾಗಿದ್ದರೂ ವಿನಾಕಾರಣ ಲೋಕಾಯುಕ್ತ ಅಧಿಕಾರಿಗಳು ಅಧ್ಯಕ್ಷರ ಹೆಸರನ್ನು ಪ್ರಕರಣ ದಲ್ಲಿ ಮೊದಲ ಆರೋಪಿಯನ್ನಾಗಿ ಮಾಡಿದ್ದಾರೆ ಎಂದು ಮಾಡಾಳ್ ವಿರೂಪಾಕ್ಷಪ್ಪ ಪರ ವಕೀಲರು ನ್ಯಾಯಪೀಠದ ಮುಂದೆ ಹೇಳಿದರು.
ಬೆಂಗಳೂರು ಜಲ ಮಂಡಳಿ ಅಧಿಕಾರಿಯಾಗಿರುವ ವ್ಯಕ್ತಿ ಕೆಎಸ್‌ಡಿಎಲ್ ಪರವಾಗಿ ಹಣ ಪಡೆದಿದ್ದಾರೆಯೇ? ಜಲ ಮಂಡಳಿ ಮತ್ತು ಕೆಎಸ್‌ಡಿಎಲ್‌ಗೂ ಏನು ಸಂಬಂಧ? ವಿರೂಪಾಕ್ಷಪ್ಪ ಅವರಿಗಾಗಿ ಹಣ ಕೇಳಿದ್ದಾರೆಯೇ ಎಂಬ ಬಗ್ಗೆ ಸಾಕ್ಷ್ಯಗಳು ಇವೆಯೇ ಎಂದು ನ್ಯಾಯಾಧೀಶರು ಕೇಳಿದರು. ಆಗ ವಕೀಲರು ವಿರೂಪಾಕ್ಷಪ್ಪ ವಿರುದ್ಧ ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ಹೇಳಿದರು.
ಈ ಹಂತದಲ್ಲಿ ಐದು ಲಕ್ಷ ರೂ. ಶೂರಿಟಿ ಬಾಂಡ್ ಮತ್ತು ಇಬ್ಬರ ಶೂರಿಟಿ ಪಡೆದು ಜಾಮೀನು ನೀಡುವಂತೆ ಕೋರ್ಟ್ ಸೂಚನೆ ನೀಡಿತು. ಇದರ ಜತೆಗೆ 48 ಗಂಟೆಯೊಳಗೆ ತನಿಖಾಧಿಕಾರಿ ಮುಂದೆ ಹಾಜರಾಗಲು ಮಾಡಾಳ್ ವಿರೂಪಾಕ್ಷಪ್ಪಗೆ ಸೂಚನೆ ನೀಡಲಾಯಿತು.
ಇದನ್ನೂ ಓದಿ : Lokayukta Raid: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ MISSING: ನಗರದಲ್ಲೆಲ್ಲ ಪೋಸ್ಟರ್ ಅಂಟಿಸಿರುವ ಕಾಂಗ್ರೆಸ್