Site icon Vistara News

Lokayukta Raid : ಬೆಂಗಳೂರು, ದಾವಣಗೆರೆಯ ಬೀದಿಗಳಲ್ಲಿ ಮಾಡಾಳ್‌ ನಾಪತ್ತೆ ಪೋಸ್ಟರ್‌, ಹುಡುಕಿಕೊಡಲು ಮನವಿ!

Missing

#image_title

ಬೆಂಗಳೂರು/ದಾವಣಗೆರೆ: ಕೆಎಸ್‌ಡಿಎಲ್‌ ಲಂಚ ಪ್ರಕರಣದಲ್ಲಿ ಪ್ರಧಾನ ಆರೋಪಿ ಎಂದು ಗುರುತಿಸಲಾಗಿರುವ ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರಿಗಾಗಿ ಲುಕ್‌ ಔಟ್‌ ನೋಟಿಸ್‌ ಜಾರಿಗೊಳಿಸಲು ಲೋಕಾಯುಕ್ತರು (Lokayukta Raid) ಸಿದ್ಧತೆ ನಡೆಸುತ್ತಿರುವಾಗಲೇ ಬೆಂಗಳೂರು ಮತ್ತು ದಾವಣಗೆರೆಯ ಬೀದಿ ಬೀದಿಗಳಲ್ಲಿ ಮಾಡಾಳ್‌ ನಾಪತ್ತೆ ಪೋಸ್ಟರ್‌ ಕಾಣಿಸಿಕೊಂಡಿದೆ. ಮಾಡಾಳ್‌ ವಿರೂಪಾಕ್ಷಪ್ಪ ಅವರು ನಾಪತ್ತೆಯಾಗಿದ್ದಾರೆ, ಹುಡುಕಿ ಕೊಡಿ ಎಂಬರ್ಥದಲ್ಲಿ ಪೋಸ್ಟರ್‌ಗಳನ್ನು ರಸ್ತೆಗಳ ಗೋಡೆಗಳಲ್ಲಿ ಅಂಟಿಸಲಾಗಿದೆ. ಮಾತ್ರವಲ್ಲ ಅಲ್ಲಲ್ಲಿ ಎಸೆಯಲಾಗಿದೆ. ದಾವಣಗೆರೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಈ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಈ ರೀತಿ ಪೋಸ್ಟರ್‌ ಅಂಟಿಸಿದ್ಯಾರು ಎನ್ನುವುದು ಸ್ಪಷ್ಟವಾಗಿಲ್ಲ.

ದಾವಣಗೆರೆಯಲ್ಲಿ ಮಾಡಾಳು ಮಿಸ್ಸಿಂಗ್‌ ಪೋಸ್ಟರ್‌ ಹಿಡಿದುಕೊಂಡಿರುವ ಯುವ ಕಾಂಗ್ರೆಸ್‌ ಕಾರ್ಯಕರ್ತರು

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್‌ಡಿಎಲ್‌) ಕಚ್ಚಾ ಸಾಮಗ್ರಿ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು ಪ್ರಶಾಂತ್ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅದರಲ್ಲಿ 40 ಲಕ್ಷ ರೂ. ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದರು. ಪ್ರಶಾಂತ್‌ ಅವರ ತಂದೆ ಮಾಡಾಳ್‌ ವಿರೂಪಾಕ್ಷಪ್ಪ ಅವರು ಕೆಎಸ್‌ಡಿಎಲ್‌ ಅಧ್ಯಕ್ಷರಾಗಿದ್ದು, ಅವರ ಪರವಾಗಿಯೇ ಪ್ರಶಾಂತ್‌ ವ್ಯವಹಾರ ಕುದುರಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಘಟನೆಗೆ ಸಂಬಂಧಿಸಿ ಪ್ರಶಾಂತ್‌ ಮತ್ತು ಇತರ ಐವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರೆ ನಂಬರ್‌ ಒನ್‌ ಆರೋಪಿಯಾಗಿರುವ ಮಾಡಾಳ್‌ ವಿರೂಪಾಕ್ಷಪ್ಪ ಅವರು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಲೋಕಾಯುಕ್ತ ಪೊಲೀಸರು ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಿದ್ದಾರೆ. ಇದರ ನಡುವೆ ವಿರೂಪಾಕ್ಷಪ್ಪ ಅವರು ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ತಮ್ಮ ವಿರುದ್ಧದ ಎಫ್‌ಐಆರ್‌ ರದ್ದತಿಗೂ ಮನವಿ ಮಾಡಿದ್ದಾರೆ.

ತಲೆಮರೆಸಿಕೊಂಡಿರುವ ವಿರೂಪಾಕ್ಷಪ್ಪ ಮಾಡಾಳು ಅವರು ಬಿಜೆಪಿ ನಾಯಕರ ರಕ್ಷಣೆಯಲ್ಲಿದ್ದಾರೆ ಎನ್ನುವುದು ಕಾಂಗ್ರೆಸ್‌ನ ಗಂಭೀರ ಆರೋಪ. ಬಿಜೆಪಿ ತಮ್ಮ ಶಾಸಕನ ಬಂಧನವನ್ನು ತಪ್ಪಿಸುವುದಕ್ಕಾಗಿ ಏನೇನೋ ತಂತ್ರ ಹೆಣೆಯುತ್ತಿದೆ ಎಂದು ಕಾಂಗ್ರೆಸ್‌ ಆಪಾದಿಸಿದೆ.

ಇದೀಗ ದಾವಣಗೆರೆಯಲ್ಲಿ ಸ್ವತಃ ಯುವ ಕಾಂಗ್ರೆಸ್‌ ಕಾರ್ಯಕರ್ತರೇ ಶಾಸಕರನ್ನು ಹುಡುಕಿಕೊಡಿ ಎಂಬ ಪೋಸ್ಟರನ್ನು ಅಂಟಿಸುತ್ತಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಮಿಸ್ಸಿಂಗ್ ಪೋಸ್ಟರ್ ಹಚ್ಚಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಎಲ್ಲಿದ್ದರೂ ಹೊರತನ್ನಿ ಎಂಬ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ : Lokayukta Raid : ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ವಿರೂಪಾಕ್ಷಪ್ಪ ಮಾಡಾಳ್‌, ನಾಳೆಗೆ ಲಿಸ್ಟಿಂಗ್‌

Exit mobile version