ಬೆಂಗಳೂರು: ಭೂ ಮಾಪನ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಇಲಾಖೆಯ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಒಟ್ಟು 11 ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು (Lokayukta Raid) ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಸರ್ವೆಗಳಿಗೆ ಸಂಬಂಧಿಸಿದ ಕಡತಗಳ ವಿಲೇವಾರಿಯಲ್ಲಿನ ಅಕ್ರಮ, ಹಣಕ್ಕೆ ಬೇಡಿಕೆ ಬಗ್ಗೆ ದೂರುಗಳ ಹಿನ್ನೆಲೆಯಲ್ಲಿ ಭೂದಾಖಲೆ ನಿರ್ದೇಶಕರ ಕಚೇರಿ (ಡಿಡಿಎಲ್‌ಆರ್) ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ (ಎಡಿಎಲ್‌ಆರ್)ಗಳಲ್ಲಿ ಲೋಕಾಯುಕ್ತ ಕಾರ್ಯಾಚರಣೆ ಕೈಗೊಂಡಿದೆ. ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಮೇಲೆ ಖುದ್ದು ಲೋಕಾಯುಕ್ತ ನ್ಯಾ. ಬಿ. ಎಸ್. ಪಾಟೀಲ್ ನೇತೃತ್ವದ ತಂಡ ದಾಳಿ ನಡೆಸಿ ಪರಿಶೀಲಿಸಿದೆ.
ಲೋಕಾಯುಕ್ತ ದಾಳಿ ನಡೆದ ಸ್ಥಳಗಳು
- ಎಡಿಎಲ್‌ಆರ್, ದೊಡ್ಡಬಳ್ಳಾಪುರ
- ಡಿಡಿಎಲ್ಆರ್, ಬೆಂಗಳೂರು ಗ್ರಾಮಾಂತರ, ಡಿಡಿ ಕಚೇರಿ, ದೊಡ್ಡಬಳ್ಳಾಪುರ ರಸ್ತೆ, ಚಪ್ರಕಲ್ಲು
- ಎಡಿಎಲ್‌ಆರ್, ದೇವನಹಳ್ಳಿ
- ಎಡಿಎಲ್‌ಆರ್, ಆನೇಕಲ್
- ಎಡಿಎಲ್‌ಆರ್, ಕೆ.ಆರ್.ಪುರಂ
- ಉತ್ತರ ವಿಭಾಗದ ಎಡಿಎಲ್‌ಆರ್, ಕಂದಾಯ ಭವನ
- ಡಿಡಿಎಲ್ಆರ್, ಡಿಸಿ ಬೆಂಗಳೂರು ನಗರ, ಕಂದಾಯ ಭವನ
- ಎಡಿಎಲ್‌ಆರ್, ನೆಲಮಂಗಲ
- ಎಡಿಎಲ್‌ಆರ್ , ಹೊಸಕೋಟೆ
- ಎಡಿಎಲ್‌ಆರ್ ದಕ್ಷಿಣ, ಕಂದಾಯ ಭವನ
- ಎಡಿಎಲ್‌ಆರ್ ಯಲಹಂಕ
ಲೋಕಾಯುಕ್ತ ಬಿ.ಎಸ್. ಪಾಟೀಲ್ ಪ್ರತಿಕ್ರಿಯಿಸಿ, ನಗರದ ಎಲ್ಲಾ ಎಡಿಎಲ್‌ಆರ್ ಕಚೇರಿಗಳನ್ನು ಸರ್ಪ್ರೈಸ್ ವಿಸಿಟ್ ಮಾಡಲಾಗುತ್ತಿದೆ. ರಿಜಿಸ್ಟರ್ ಸಹ ಸರಿಯಾಗಿ ನಿರ್ವಹಣೆ ಮಾಡಿಲ್ಲ, ಸಾರ್ವಜನಿಕರ ಅರ್ಜಿಗಳನ್ನು ವಿನಾಕಾರಣ ರಿಜೆಕ್ಟ್ ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಂದಿದ್ದೇವೆ. ನಿಜವಾಗಲೂ ಸಮಸ್ಯೆ ಇದ್ದರೆ, ಅರ್ಜಿಗಳನ್ನು ರಿಜೆಕ್ಟ್ ಮಾಡಬಹುದು ಎಂದು ತಿಳಿಸಿದರು.
ಇದನ್ನೂ ಓದಿ | Theft Case : ಕಾಲು ಉಳುಕಿದೆ ಎಂದು ಮನೆಗೆ ಬಂದ; ಮನೆಯೊಡತಿಯ ಕತ್ತು ಕೊಯ್ದ ಕಳ್ಳ!
ಕಚೇರಿಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲ, ಕಚೇರಿಯೊಳಗೆ ಖಾಸಗಿ ವ್ಯಕ್ತಿ ಜೆರಾಕ್ಸ್ ಮಷಿನ್ ಇಟ್ಟಿದ್ದಾರೆ. ಅದಕ್ಕೆ ಅನುಮತಿ ನೀಡಿದವರು ಯಾರು ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ದುಡ್ಡು ವಸೂಲಿ ಮಾಡಿದ್ದ ಪ್ರೋಬೇಶನರಿ ಪಿಎಸ್ಐ ಬಂಧನ
ಬೆಂಗಳೂರು: ಯಾರದ್ದೋ ಮಾತು ಕೇಳಿ ದುಡ್ಡು ವಸೂಲಿ ಮಾಡಿದ್ದ ಪ್ರೋಬೇಶನರಿ ಪಿಎಸ್ಐ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸಿದ್ದಾರೂಢ ಬಿಜ್ಜಣ್ಣನವರ್ ಬಂಧಿತ ಪ್ರೋಬೆಶನರಿ ಪಿಎಸ್‌ಐ. ಇವರಿಗೆ ಸಹಕಾರ ನೀಡಿದ ಪೇದೆಗಳಾದ ರಾಜ್ ಕಿಶೋರ್ , ಅಲ್ಲಾಬಾಕಾಶ್ ಎಂಬುವರನ್ನು ಬಂಧಿಸಲಾಗಿದೆ.
ಈ ಹಿಂದೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಕರ್ತವ್ಯ ನಿರ್ವಹಿಸುತಿದ್ದರು. ಹಲವು ತಿಂಗಳ ಹಿಂದೆ ಪಿಎಸ್‌ಐಗೆ ತಾನೊಬ್ಬ ಹೋಮ್ ಗಾರ್ಡ್ ಎಂದು ರಾಜ್ ಕಿಶೋರ್ ಪರಿಚಯ ಮಾಡಿಕೊಂಡಿದ್ದ. ನಮ್ಮ ಅಣ್ಣನಿಗೆ ಹಣ ಬರಬೇಕು, ನೀವು ಬನ್ನಿ ಸಾರ್ ಕೊಡಿಸಿ ಎಂದು ಹೇಳಿದ್ದ. ಆಗ ಪಿಎಸ್‌ಐ ಸಿದ್ದಾರೂಢ ಮತ್ತು ಅಲ್ಲಾ ಬಾಕಾಶ್ ಸೇರಿ ಕಾರ್ತಿಕ್ ಎಂಬಾತನ್ನು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಕಿಡ್ನ್ಯಾಪ್ ಮಾಡಿದ್ದರು. ನಂತರ ಪಿ.ಎಸ್.ಐ. ತಂಡ 1.5 ಕೋಟಿ ಕ್ರಿಪ್ಟೊ ಕರೆನ್ಸಿ ಮತ್ತು 20 ಲಕ್ಷ ಬ್ಯಾಂಕ್‌ನಿಂದ ಹಣ ಡಿಮ್ಯಾಂಡ್ ಮಾಡಿತ್ತು.
ಇದನ್ನೂ ಓದಿ | Murugha Seer: ಮುರುಘಾಶ್ರೀಗೆ ಬಿಗ್ ರಿಲೀಫ್; ಬಿಡುಗಡೆಗೆ ಹೈಕೋರ್ಟ್ ಆದೇಶ
ಪಿ.ಎಸ್.ಐ ಟೀಂ ಬೆದರಿಕೆಗೆ ಹೆದರಿ ಕಾರ್ತೀಕ್ ಹಣ ನೀಡಿದ್ದ. ಜುಲೈ 25ರಂದು ಘಟನೆ ನಡೆದಿತ್ತು, ಬಳಿಕ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಕೆ.ಜಿ.ಹಳ್ಳಿಯಲ್ಲಿ ತನಿಖೆ ಸರಿಯಾಗಿ ನಡೆಯದ ಕಾರಣ ಕೇಸ್ ಸಿಸಿಬಿಗೆ ವರ್ಗಾವಣೆಯಾಗಿತ್ತು. ನಂತರ ತನಿಖೆ ನಡೆಸಿದ ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಇದೀಗ ಮೂವರು ಪೊಲೀಸನ್ನು ಅರೆಸ್ಟ್ ಮಾಡಿ, 20 ಲಕ್ಷ ಹಣ ಮತ್ತು ಕ್ರಿಪ್ಟೊ ಕರೆನ್ಸಿಯನ್ನು ವಶಕ್ಕೆ ಪಡೆದಿದ್ದಾರೆ.