Site icon Vistara News

Lokayukta Raid: ‌ಕೆ.ಜಿ ಕೆ.ಜಿ ಚಿನ್ನ, ಕೋಟಿ ಕೋಟಿ ಹಣ; ಲೋಕಾ ಬಲೆಗೆ ಬಿದ್ದ ಅಧಿಕಾರಿಗಳ ಮನೆಯಲ್ಲಿ ಬಗೆದಷ್ಟೂ ಆಸ್ತಿ

Cash gold jewellery

#image_title

ಬೆಂಗಳೂರು: ರಾಜ್ಯದ ವಿವಿಧೆಡೆ 8ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ದಾಳಿ ನಡೆಸಲಾಗಿದ್ದು, ಅಧಿಕಾರಿಗಳ ಮನೆಗಳಲ್ಲಿ ನಗದು, ಚಿನ್ನಾಭರಣ ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ತುಮಕೂರಿನ ಕೆಐಎಡಿಬಿ ಅಧಿಕಾರಿ ಮನೆಯಲ್ಲಿ 8 ಲಕ್ಷ ರೂ, 1 ಕೆ.ಜಿ ಚಿನ್ನ ಪತ್ತೆ

ತುಮಕೂರು: ನಗರದ ಆರ್.ಟಿ. ನಗರದಲ್ಲಿರುವ ಕೆ.ಐ.ಎ.ಡಿ.ಬಿ ಅಧಿಕಾರಿ ನರಸಿಂಹಮೂರ್ತಿ ಮನೆ ಮೇಲೆ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಡಿಎಸ್‌ಪಿಗಳಾದ ಮಂಜುನಾಥ್ ಹಾಗೂ ಹರೀಶ್ ತಂಡದಿಂದ ದಾಳಿ ನಡೆಸಿದ್ದು, ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಲೋಕಾಯುಕ್ತ ಎಸ್‌ಪಿ ವಲೀ ಬಾಷಾ ಮಾತನಾಡಿ, ಒಟ್ಟು 6 ಲೋಕಾಯುಕ್ತ ಅಧಿಕಾರಿಗಳಿಂದ ಶೋಧ ಕಾರ್ಯ ನಡೆಯುತ್ತಿದೆ. ಈವರೆಗೂ ಸುಮಾರು 8 ಲಕ್ಷ ರೂ. ಹಣ ಸಿಕ್ಕಿದೆ. ನರಸಿಂಹಮೂರ್ತಿ ಅವರಿಗೆ ನಗರದಲ್ಲಿ ಸಾಕಷ್ಟು ನಿವೇಶನಗಳಿರುವುದು ಪತ್ತೆಯಾಗಿದೆ. 1 ಕೆ.ಜಿ.ಗೂ ಹೆಚ್ಚು ಚಿನ್ನ ಸಿಕ್ಕಿದೆ ಎಂದು ಮಾಹಿತಿ ನೀಡಿದರು.

ಶಿವಮೊಗ್ಗದ ಅಧಿಕಾರಿ ನಿವಾಸದಲ್ಲಿ 3.5 ಕೆ.ಜಿ ಚಿನ್ನ, 24 ಕೆ.ಜಿ ಬೆಳ್ಳಿ ಪತ್ತೆ

ಶಿವಮೊಗ್ಗ: ನಗರದ ತುಂಗಾ ಮೇಲ್ದಂಡೆ ಯೋಜನೆ ಇಇ ಪ್ರಶಾಂತ್ ಹಾಗೂ ಶಿಕಾರಿಪುರ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಶಂಕರ್ ನಾಯ್ಕ ಮನೆ ದಾಳಿ ನಡೆಸಲಾಗಿದೆ. ತುಂಗಾ ಮೇಲ್ದಂಡೆ ಯೋಜನೆ ಇಇ ಪ್ರಶಾಂತ್ ಅವರ ಶಿವಮೊಗ್ಗದ ಶರಾವತಿ ನಗರದ ನಿವಾಸ, ಶೆಟ್ಟಿಹಳ್ಳಿ ತೋಟದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ಶಿಕಾರಿಪುರ ಜಿ.ಪಂ. ಎಂಜಿನಿಯರ್ ಶಂಕರ್ ನಾಯ್ಕ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.

ತುಂಗಾ ಮೇಲ್ದಂಡೆ ಯೋಜನೆ ಎಂಜಿನಿಯರ್ ಪ್ರಶಾಂತ್ ಮನೆಯಲ್ಲಿ 25 ಲಕ್ಷ ರೂ. ನಗದು, 3.5 ಕೆ.ಜಿ ಚಿನ್ನ, 24 ಕೆ.ಜಿ ಬೆಳ್ಳಿ, 300 ಜೊತೆ ಶೂ, 50 ವಿದೇಶಿ ಮದ್ಯದ ಬಾಟಲ್, ಬೆಂಗಳೂರಿನಲ್ಲಿ ಎರಡು ನಿವೇಶನ, 6 ಎಕರೆ ಕೃಷಿ ಜಮೀನುಗಿದೆ. ಇನ್ನು ಶಿಕಾರಿಪುರದ ಶಂಕರ್ ನಾಯ್ಕ ಮನೆಯಲ್ಲಿ 350 ಗ್ರಾಂ ಚಿನ್ನಾಭರಣ, 3 ಕೆ.ಜಿ. ಬೆಳ್ಳಿ, 10 ಎಕರೆ ಕೃಷಿ ಭೂಮಿ ಪತ್ತೆಯಾಗಿದೆ.

ಇದನ್ನೂ ಓದಿ | New Education Policy: ಕರ್ನಾಟಕಕ್ಕೆ ಪ್ರತ್ಯೇಕ ಶಿಕ್ಷಣ ನೀತಿ: ಎನ್‌ಇಪಿ ತಿರಸ್ಕಾರ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್‌

ರಾಣೇಬೆನ್ನೂರಿನ ಎಂಜಿನಿಯರ್ ಮನೆಯಲ್ಲಿ 4.75 ಕೋಟಿ ರೂ. ಆಸ್ತಿ ಜಪ್ತಿ

ಹಾವೇರಿ: ರಾಣೇಬೆನ್ನೂರು ನಗರದಲ್ಲಿರುವ ನಿರ್ಮಿತಿ ಕೇಂದ್ರದ ಎಂಜಿನಿಯರ್ ವಾಗೀಶ್ ಬಿ.ವಿ ಶೆಟ್ಟರ್ ನಿವಾಸದ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಲಾಗಿದೆ. 500 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ, 18.30 ಲಕ್ಷ ರೂಪಾಯಿ, 10 ಇಂಚಿನ ಜಿಂಕೆ ಕೊಂಬು ಸಮೇತ ಒಟ್ಟು 4.75 ಕೋಟಿ ರೂಪಾಯಿ ಆಸ್ತಿ ಪತ್ತೆಯಾಗಿದೆ. ಪರಿಶೀಲನೆ ವೇಳೆ ಹಣ ಎಣಿಕೆ ಮಾಡುವ ಮಷಿನ್, 3 ಕಾರು, 2 ಟ್ರ್ಯಾಕ್ಟರ್, 2 ಬೈಕ್, 8 ಮನೆ, ರಾಜ್ಯದ ವಿವಿಧ ಭಾಗಗಳಲ್ಲಿ ಒಟ್ಟು 16 ಸೈಟ್, 65 ಎಕರೆ ಭೂಮಿ ಹೊಂದಿರುವ ದಾಖಲೆ ಪತ್ತೆಯಾಗಿದೆ.

ಕೆಆರ್‌ಐಡಿಎಲ್ ಎಂಜಿನಿಯರ್ ಮನೆ‌, ಕಚೇರಿ ಮೇಲೆ ದಾಳಿ

ಕಲಬುರಗಿ: ಕೆಆರ್‌ಐಡಿಎಲ್ ಕಲಬುರಗಿ ಮತ್ತು ಕೊಪ್ಪಳದ ಇಂಚಾರ್ಜ್ ಸುಪರಿಂಟೆಂಡೆಂಟ್ ಎಂಜಿನಿಯರ್ ಝರಣಪ್ಪ ಚಿಂಚೋಳಿಕರ್ ಅವರ ಕಲಬುರಗಿ ಮನೆ ಮತ್ತು ಕಚೇರಿ ದಾಳಿ ನಡೆಸಲಾಗಿದೆ. ಇನ್ನು ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ಕಲಬುರಗಿಯ ಲಕ್ಷ್ಮೀ ನಗರದಲ್ಲಿ ಹೊಸ ಮನೆ ನಿರ್ಮಾಣದ ಬಗ್ಗೆಯು ಪರಿಶೀಲನೆ ನಡೆಸಲಾಗಿದೆ. ಅದೇ ರೀತಿ ವೀರೇಂದ್ರ ಪಾಟೀಲ್ ಬಡಾವಣೆಯ 3ನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ಮನೆ ಬಗ್ಗೆ ಕೂಡ ಪರಿಶೀಲನೆ ಮಾಡಲಾಗಿದೆ.

ಬೀದರ್ ಜಿಲ್ಲೆಯ ಹುಮನಬಾದ್ ತಾಲೂಕಿನ ಚಿಟಗುಪ್ಪ ನಿವಾಸಿಯಾದ ಝರಣಪ್ಪ ಚಿಂಚೋಳಿಕರ್ ಕಲಬುರಗಿಯ ಕೆಆರ್‌ಐಡಿಎಲ್ ಜೆ.ಡಿ ಪ್ರಭಾರ ಹಾಗೂ ಕೊಪ್ಪಳ ಜಿಲ್ಲೆಯ ಕೆಆರ್‌ಐಡಿಎಲ್ ಇಇ ಆಗಿದ್ದಾರೆ. ಇವರ ಬೀದರ್ ನಗರದ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮೈಸೂರಿನ ಮೂವರು ಅಧಿಕಾರಿಗಳ ಮನೆಯಲ್ಲಿ ಪರಿಶೀಲನೆ

ಮೈಸೂರು: ನಗರದ ಮೂವರು ಅಧಿಕಾರಿಗಳ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಉಪ ಆಯುಕ್ತ ಮಹೇಶ್ ಕುಮಾರ್, ನಂಜನಗೂಡು ತಾಲೂಕು ಸಬ್ ರಿಜಿಸ್ಟ್ರಾರ್ ಶಿವಶಂಕರ ಮೂರ್ತಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಸಿಸ್ಟೆಂಟ್ ಎಂಜಿನಿಯರ್ ನಾಗೇಶ್ ಸೇರಿ ನಾಲ್ವರು ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಮೈಸೂರು ಮಹಾನಗರ ಪಾಲಿಕೆ ಅಧಿಕಾರಿ ಮಹೇಶ್ ಕುಮಾರ್ ನಿವಾಸದ ಮೇಲೆ ದಾಳಿ ನಡೆದಿದೆ. ನಿವೇದಿತಾ ನಗರ ಸಂಕ್ರಾಂತಿ ವೃತ್ತದ ಮನೆಯಲ್ಲಿ ಪರಿಶೀಲನೆ ನಡೆಸಲಾಗಿದ್ದು, ತೋಟದ ಮನೆ ಸೇರಿ ಹಲವು ಕಡೆ 13 ಅಧಿಕಾರಿಗಳ ತಂಡದಿಂದ ಏಕಕಾಲಕ್ಕೆ‌ ಕಾರ್ಯಾಚರಣೆ ನಡೆಸಲಾಗಿದೆ.

ಇದನ್ನೂ ಓದಿ | Ballari News : ಬಳ್ಳಾರಿಯಲ್ಲಿ ಜನರ ಗಮನ ‌ಬೇರೆಡೆ ಸೆಳೆದು ಕಳವು; ‌ಮೂವರ ಬಂಧನ

ಮಂಗಳೂರಿನಲ್ಲಿ ಗಣಿ, ಭೂ ವಿಜ್ಞಾನ ಇಲಾಖೆ ಅಧಿಕಾರಿ ನಿವಾಸದ ಮೇಲೆ ದಾಳಿ

ಮಂಗಳೂರು: ಬೆಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಯ ನಗರದ ಅಪಾರ್ಟ್ಮೆಂಟ್ ಮತ್ತು ಲ್ಯಾಬ್‌ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಡಿಡಿ ಆಗಿದ್ದ ನಿರಂಜನ್, ಇತ್ತೀಚೆಗೆ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರು. ಇವರ ಪಂಪ್‌ವೆಲ್‌ನಲ್ಲಿರೋ ಅಪಾರ್ಟ್‌ಮೆಂಟ್, ಪತ್ನಿ ಒಡೆತನದ ಡಯಾಗ್ನೋಸ್ಟಿಕ್ ಲ್ಯಾಬ್‌ನಲ್ಲಿ ತನಿಖೆ ನಡೆಸಲಾಗಿದೆ. ಹಾಗೆಯೇ ಇವರ ಕುಶಾಲನಗರ ಮತ್ತು ಪಿರಿಯಾಪಟ್ಟಣದ ಮನೆಯಲ್ಲೂ ಶೋಧ ನಡೆಸಲಾಗಿದೆ.

Exit mobile version