Site icon Vistara News

High court :‌ ಪತ್ನಿ, ಮಕ್ಕಳ ಪಾಲನೆ ಗಂಡನ ಧರ್ಮ ; ಜೀವನಾಂಶ ಕೊಡಲೊಪ್ಪದವನಿಗೆ ಕುರಾನ್‌ ಪಾಠ ಮಾಡಿದ ನ್ಯಾ. ದೀಕ್ಷಿತ್

Justice Krishna S Dixit

ಬೆಂಗಳೂರು: ಇತ್ತೀಚೆಗೆ ನಾಡಗೀತೆ ವಿವಾದ ಕಟಕಟೆಗೆ ಬಂದಾಗ ಕಿಕ್ಕೇರಿ ಕೃಷ್ಣಮೂರ್ತಿ ಅವರನ್ನು ಕರೆಸಿಕೊಂಡು ʻಜೈ ಭಾರತ ಜನನಿಯ ತನುಜಾತೆʼ ಹಾಡನ್ನು ಬೇರೆ ಬೇರೆ ರಾಗಗಳಲ್ಲಿ ಹಾಡಿಸಿ ಸುದ್ದಿಯಾಗಿದ್ದ ರಾಜ್ಯ ಹೈಕೋರ್ಟ್‌ನ (Karnataka High court) ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ (Justice Krishna S Deexit) ಅವರು ಇದೀಗ ಕುರಾನ್‌ ಪಾಠ (quran Lesson) ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಪತ್ನಿ ಹಾಗೂ ಮಕ್ಕಳನ್ನು (Wife and children) ಅದರಲ್ಲೂ ಮುಖ್ಯವಾಗಿ ಅವರು ಅಸಮರ್ಥರಾಗಿದ್ದ ಸಂದರ್ಭದಲ್ಲಿ ನೋಡಿಕೊಳ್ಳುವುದು ಪತಿಯ ಕರ್ತವ್ಯ ಎಂದು ಪವಿತ್ರ ಕುರಾನ್‌ ಹಾಗೂ ಹದೀಸ್‌ನಲ್ಲಿಯೂ (Quran and Hadees) ಹೇಳಲಾಗಿದೆ ಎಂದು ಅವರು ಮುಸ್ಲಿಂ ವ್ಯಕ್ತಿಯೊಬ್ಬನಿಗೆ ವಿವರಿಸಿದರು. ಪ್ರತ್ಯೇಕವಾಗಿ ವಾಸವಾಗಿರುವ ಪತ್ನಿಗೆ ಜೀವನಾಂಶ (Alimony) ಕೊಡಲು ನಿರಾಕರಿಸಿದ ವ್ಯಕ್ತಿಗೆ ಪಾಠ ಮಾಡಿದ ಅವರು ತಿಂಗಳಿಗೆ 25 ಸಾವಿರ ರೂ. ಕೊಡುವಂತೆ ಆದೇಶ ಹೊರಡಿಸಿದರು.

ಏನಿದು ಪ್ರಕರಣ? ಏನಿದು ಕುರಾನ್‌ ಪಾಠ?

ಆ ದಂಪತಿಗೆ ಇಬ್ಬರು ಗಂಡು ಮಕ್ಕಳು. ಗಂಡ ಮತ್ತು ಹೆಂಡತಿ ಯಾವುದೋ ಕಾರಣಕ್ಕೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮಕ್ಕಳಲ್ಲಿ ಮೊದಲನೆಯವನು ಅಂಗವಿಕಲನಾಗಿದ್ದು, ಎರಡನೆಯವನು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಮಕ್ಕಳಿರುವುದು ತಾಯಿಯೊಂದಿಗೆ. ಇಂಥ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಿದೆ. ಹೀಗಾಗಿ ಗಂಡನಾದವನು ನನಗೆ ತಿಂಗಳಿಗೆ 27000 ರೂ. ಜೀವನಾಂಶ ನೀಡಬೇಕು ಎಂದು ಆದೇಶಿಸಬೇಕು ಎಂದು ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಕೌಟುಂಬಿಕ ನ್ಯಾಯಾಲಯ ಮಹಿಳೆಯ ಅರ್ಜಿಯನ್ನು ಪರಿಗಣಿಸಿ 25000 ರೂ. ಮಾಸಿಕ ಜೀವನಾಂಶ ನೀಡುವಂತೆ 2019ರ ಡಿಸೆಂಬರ್‌ 16ರಂದು ಪತಿಗೆ ನಿರ್ದೇಶನ ಕೊಟ್ಟಿತ್ತು. ಆದರೆ ಆತ ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ. ಇದೀಗ ಹೈಕೋರ್ಟ್‌ ಈ ಅರ್ಜಿಯ ವಿಚಾರಣೆ ನಡೆಸಿ ಅದನ್ನು ವಜಾಗೊಳಿಸಿದೆ ಮತ್ತು ಕೌಟುಂಬಿಕ ನ್ಯಾಯಾಲಯ ಹೇಳಿದಷ್ಟು ಮೊತ್ತ ನೀಡಲು ಸೂಚಿಸಿದೆ. ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌, ಕುರಾನ್‌ ಮತ್ತು ಜೀವನ ಪಾಠ ಮಾಡಿದರು.

ಕೋರ್ಟ್‌ನ ಅಭಿಪ್ರಾಯಗಳು ಇವು

  1. ಪತ್ನಿಗೆ ಘೋಷಿಸಿರುವ ಮಾಸಿಕ 25 ಸಾವಿರ ರೂ. ಜೀವನಾಂಶ ಜಾಸ್ತಿಯಾಯಿತು ಎಂಬ ಅರ್ಜಿದಾರರ ವಾದವನ್ನು ರಕ್ತಕ್ಕಿಂತ ರೊಟ್ಟಿ ದುಬಾರಿಯಾಗಿರುವ ಈ ದಿನಗಳಲ್ಲಿ ಒಪ್ಪಲಾಗದು.
  2. ಮಾಸಿಕ 25 ಸಾವಿರ ರೂ. ಜೀವನಾಂಶ ಪಾವತಿಸುವಷ್ಟು ಆದಾಯವಿಲ್ಲ ಎನ್ನುವ ವಾದ ಸರಿಯಲ್ಲ. ಹೆಂಡತಿ, ಮಕ್ಕಳನ್ನು ನೋಡಿಕೊಳ್ಳುವುದು ಗಂಡನ ಜವಾಬ್ದಾರಿ.
  3. ಪತ್ನಿ ಉದ್ಯೋಗದಲ್ಲಿದ್ದಾಳೆ ಅಥವಾ ಆದಾಯದ ಮೂಲ ಹೊಂದಿದ್ದಾಳೆಂಬುದನ್ನು ಸಾಬೀತುಪಡಿಸುವ ದಾಖಲೆಗಳನ್ನು ಪತಿ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಒಂದೊಮ್ಮೆ ಇದ್ದರೂ ಮಾಸಾಶನ ಕೊಡಲೇಬೇಕು.
  4. ಪತ್ನಿ ಹಾಗೂ ಮಕ್ಕಳ ಅದರಲ್ಲೂ ಮುಖ್ಯವಾಗಿ ಅವರು ಅಸಮರ್ಥರಾಗಿದ್ದ ಸಂದರ್ಭದಲ್ಲಿ ಅವರನ್ನು ನೋಡಿಕೊಳ್ಳುವುದು ಪತಿಯ ಕರ್ತವ್ಯವಾಗಿರುತ್ತದೆ ಎಂದು ಪವಿತ್ರ ಕುರಾನ್‌ ಹಾಗೂ ಹದೀಸ್‌ನಲ್ಲೂ ಹೇಳಲಾಗಿದೆ.
  5. ಮದುವೆ ವೈಫಲ್ಯದಿಂದ ಪತ್ನಿ ನಿರ್ಗತಿಕಳಾಗಬಾರದು ಅಥವಾ ನೆಲೆ ಇಲ್ಲದಂತಾಗಬಾರದು ಎಂಬ ಉದ್ದೇಶದಿಂದ ಮಧ್ಯಂತರ ಅಥವಾ ಶಾಶ್ವತ ಜೀವನಾಂಶ ನೀಡಲಾಗುತ್ತದೆ.

ಇದನ್ನೂ ಓದಿ : Naadageethe row : ಕೋರ್ಟ್‌ ಕಟಕಟೆಯಲ್ಲಿ ಮೊಳಗಿದ ನಾಡಗೀತೆ; ಪಂಚ ರಾಗದಲ್ಲಿ ಹಾಡಿದ ಕಿಕ್ಕೇರಿ

Exit mobile version