Site icon Vistara News

Ganesh Chaturthi | ಅಕ್ಷರಗಳಲ್ಲೂ ಅರಳಿದ ವಿನಾಯಕ, ಈ ಕಲಾವಿದನ ಕೈಚಳಕ ಮನಮೋಹಕ

Pramod Sagar

ಬೆಂಗಳೂರು: ಪ್ರತಿ ವರ್ಷ ಗಣೇಶ ಚತುರ್ಥಿ ಬಂತೆಂದರೆ ಇಡೀ ದೇಶವೇ ಸಂಭ್ರಮಿಸುತ್ತದೆ. ವಿನಾಯಕನು ವಿಘ್ನ ನಿವಾರಣೆ ಮಾಡುವ, ಭಕ್ತರ ಪ್ರಾರ್ಥನೆ ಈಡೇರಿಸುವ, ಪ್ರತಿಯೊಂದು ಗಲ್ಲಿಗಳಲ್ಲೂ ಪ್ರತಿಷ್ಠಾಪನೆಯಾಗಿ ಸಂತಸ ಹರಡುವ ಜತೆಗೆ ಕಲಾವಿದರ ಬಾಳಿಗೆ ಬೆಳಕೂ ನೀಡುತ್ತಾನೆ. ಹಾಗಾಗಿ, ಗಣೇಶ ಚತುರ್ಥಿಯು (Ganesh Chaturthi) ಲಕ್ಷಾಂತರ ಕಲಾವಿದರಿಗೆ ತಮ್ಮ ಕಲೆ ಪ್ರದರ್ಶಿಸುವ, ಆ ಮೂಲಕ ಬದುಕಿನ ಬಂಡಿ ಸಾಗಿಸುವ ಬಹುದೊಡ್ಡ ಹಬ್ಬ. ಇದಕ್ಕೆ ದ್ಯೋತಕ ಎಂಬಂತೆ ಪ್ರಮೋದ್‌ ಸಾಗರ ಎಂಬ ಕಲಾವಿದರು “ಅಕ್ಷರ ಗಣಪ”ನನ್ನು ಬಿಡಿಸುವ ಮೂಲಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿಘ್ನ ನಿವಾರಕನ ಅಪ್ಪಟ ಭಕ್ತರಾಗಿರುವ ಪ್ರಮೋದ್‌ ಸಾಗರ ಅವರು ಕರ್ನಾಟಕ ಸೇರಿ ದೇಶದ ೨೯ ರಾಜ್ಯಗಳ ಅಕ್ಷರಗಳಲ್ಲಿ ಗಣಪತಿಯ ಚಿತ್ರಗಳನ್ನು ಬಿಡಿಸಿದ್ದಾರೆ. ಪ್ರತಿಯೊಂದು ರಾಜ್ಯಗಳ ಹೆಸರುಗಳಲ್ಲಿಯೂ ಗಣಪನಿರುವುದು ಇವರ ವಿಶೇಷ ಕಲೆಯಾಗಿದೆ. ಅಕ್ಷರಗಳಲ್ಲಿ ಗಣಪತಿಯ ಚಿತ್ರ ಬಿಡಿಸಿ ಜನರನ್ನು ಸಾಕ್ಷರರನ್ನಾಗಿ ಮಾಡುತ್ತಿರುವ ಇವರ ಕಲೆಗೆ ಜನ ಮಾರುಹೋಗಿದ್ದಾರೆ.

ನಾಲ್ಕು ವರ್ಷಗಳಿಂದ “ಅಕ್ಷರ” ಸೇವೆ

ಗಣಪತಿಯ ಆರಾಧಕರಾದ ಪ್ರಮೋದ್‌ ಸಾಗರ ಅವರು ಕಳೆದ ನಾಲ್ಕು ವರ್ಷಗಳಿಂದಲೂ ಅಕ್ಷರ ಸೇವೆ ಮಾಡುತ್ತಿದ್ದಾರೆ. ಪ್ರತಿಬಾರಿ ಗಣೇಶ ಚತುರ್ಥಿ ಬಂದಾಗಲೂ ಅಕ್ಷರಗಳಲ್ಲಿ ಗಣಪತಿಯನ್ನು ಒಡಮೂಡಿಸಿ, ಚೆಂದವಾಗಿ ಚಿತ್ರ ಬರೆಯುತ್ತಾರೆ. ಪ್ರತಿ ಬಾರಿಯೂ ವಿಶಿಷ್ಟವಾಗಿ ಚಿತ್ರ ಬಿಡಿಸುವುದರಿಂದ ಅಪಾರ ಜನಮನ್ನಣೆ ದೊರೆತಿದೆ. ಜನರು ತಮ್ಮ ಹೆಸರು, ಊರುಗಳಲ್ಲಿ ಗಣೇಶನ ಚಿತ್ರ ಬಿಡಿಸುವಂತೆ ಕೋರಿಕೆ ಸಲ್ಲಿಸುತ್ತಾರೆ. ಕಲಾ ಹೃದಯದ ಪ್ರಮೋದ್‌ ಅವರು ಜನರ ಇಚ್ಛೆಯನ್ನು ಪೂರೈಸುತ್ತಾರೆ.

ಕಲಾವಿದ ಪ್ರಮೋದ್‌ ಸಾಗರ.

ಅಂತಾರಾಷ್ಟ್ರೀಯ ದಾಖಲೆ ಬರೆದ ಕಲಾವಿದ

ಅಕ್ಷರಗಳಲ್ಲಿ ಗಣಪತಿಯ ಚಿತ್ರಗಳನ್ನು ಬಿಡಿಸಿಯೇ ಪ್ರಮೋದ್‌ ಸಾಗರ ಅವರು ಅಂತಾರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಊರುಗಳು, ರಾಜ್ಯಗಳು, ದೇಶದ ಹೆಸರುಗಳಲ್ಲಿ ಗಣೇಶನ ಚಿತ್ರ ಬಿಡಿಸಿದ್ದಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ “ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌” ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ “ಏಷ್ಯಾ ಬುಕ್‌ ಆಫ್‌ ರೆಕಾರ್ಡ್”‌ ದಾಖಲೆ ಬರೆದಿದ್ದಾರೆ.

ಒಟ್ಟಿನಲ್ಲಿ ವಿಘ್ನ ನಿವಾರಕ ಗಣಪತಿಯು ಅಕ್ಷರಗಳ ರೂಪ ತಾಳಿ, ಕಲಾವಿದನ ಖ್ಯಾತಿ ಹೆಚ್ಚಿಸುವ ಜತೆಗೆ ಜಾಗತಿಕ ಮಟ್ಟದಲ್ಲೂ ಗಣಪತಿಯನ್ನು ಅಕ್ಷರಗಳಲ್ಲಿ ಗುರುತಿಸುವಂತಾಗಿರುವುದು ಕಲೆ ಹಾಗೂ ಕಲಾವಿದನ ಕೈಚಳಕಕ್ಕೆ ಹಿಡಿದ ಕನ್ನಡಿಯಾಗಿದೆ. ಗಣೇಶ ಹಬ್ಬದಂದು ಕಲಾವಿದನ ಕುಂಚದಿಂದ ಇನ್ನಷ್ಟು ಚಿತ್ರಗಳು ಹೊರಹೊಮ್ಮಲಿ, “ಅಕ್ಷರ ಗಣಪ” ಅವರ ಬದುಕಿನಲ್ಲಿ ಮತ್ತಷ್ಟು ಚೈತನ್ಯ ತುಂಬಲಿ ಎಂದು ಹಾರೈಸೋಣ.

Exit mobile version