Site icon Vistara News

Lorry Accident: ಕಾರ್ಕಳದಲ್ಲಿ ಲಾರಿ ಪಲ್ಟಿಯಾಗಿ ಇಬ್ಬರು ಕಾರ್ಮಿಕರ ಸಾವು

Lorry Accident

ಉಡುಪಿ: ಲಾರಿ ಪಲ್ಟಿಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ (Lorry Accident) ಜಿಲ್ಲೆಯ ಕಾರ್ಕಳ ತಾಲೂಕು ನಿಟ್ಟೆ ಭ್ರಾಮರಿ ಕ್ರಾಸ್‌ನಲ್ಲಿ ನಡೆದಿದೆ. ಕಲ್ಲು ತುಂಬಿದ್ದ ಲಾರಿ ಮಂಗಳೂರಿನ ಕಡೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದರಿಂದ ದುರ್ಘಟನೆ ನಡೆದಿದೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಿ ದೇವಲಾಪುರದ ಕರಿಯಪ್ಪ ಮತ್ತು ನರಿಯಪ್ಪ ಮೃತ. ಘಟನಾ ಸ್ಥಳಕ್ಕೆ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Murder case : ಕುಡಿದ ನಶೆಯಲ್ಲಿ ಗೆಳೆಯನ ಕೊಂದ; ಸೇಡಿಗಾಗಿ ಗ್ರಾ.ಪಂ ಸದಸ್ಯನ ಮನೆ ಮೇಲೆ ಅಟ್ಯಾಕ್‌

ಬೈಕ್‌ಗೆ ಟಿಪ್ಪರ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸವಾರರ ದುರ್ಮರಣ

ಕಲಬುರಗಿ: ಬೈಕ್‌ಗೆ ಟಿಪ್ಪರ್ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ ಹೊಂದಿರುವುದು (Road Accident) ಜಿಲ್ಲೆಯ ಅಫಜಲಪುರ ತಾಲೂಕಿನ ಅಳ್ಳಗಿ ಕ್ರಾಸ್ ಬಳಿ ನಡೆದಿದೆ. ಅಫಜಲಪುರ ತಾಲೂಕಿನ ಹೊಸೂರು ಗ್ರಾಮದ ದೇವಾನಂದ್ ಘತ್ತರಗಿ (25), ಬಸವರಾಜ್ ದುರ್ಗ (56) ಮೃತ ದುರ್ದೈವಿಗಳು.

ಚೌಡಾಪುರದಿಂದ ಸ್ವಗ್ರಾಮಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಟಿಪ್ಪರ್ ಡಿಕ್ಕಿಯಾಗಿದ್ದರಿಂದ ದುರಂತ ನಡೆದಿದೆ. ಅಪಘಾತ ನಡೆದ ಬಳಿಕ ಸ್ಥಳದಲ್ಲೇ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಅಫಜಲಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವೀರಭದ್ರೇಶ್ವರ ಜಾತ್ರೆಯಲ್ಲಿ ಉತ್ತತ್ತಿ ಆಯುವಾಗ ರಥದ ಚಕ್ರದಡಿ‌ ಸಿಲುಕಿ ಇಬ್ಬರ ಸಾವು

ಗದಗ: ಗದಗ ಜಿಲ್ಲೆ ರೋಣ ಪಟ್ಟಣದ ವೀರಭದ್ರೇಶ್ವರ ಜಾತ್ರೆಯಲ್ಲಿ (Veerabhadreswara Fair) ರಥದ ಚಕ್ರದಡಿ‌ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ರಥ ಎಳೆಯುವ ವೇಳೆ ಈ ಅವಘಡ ನಡೆದಿದೆ.

ಪ್ರತಿವರ್ಷ ಜರುಗುವ ಅದ್ಧೂರಿಯಾಗಿ ವೀರಭದ್ರೇಶ್ವರ ಜಾತ್ರೆ ನಡೆಯುತ್ತಾ ಬರುತ್ತಿದೆ. ಈ ವೇಳೆ ಹತ್ತಾರು‌ ಸಾವಿರ ಭಕ್ತರ ಸಮ್ಮುಖದಲ್ಲಿ ಜಯಘೋಷಗಳೊಂದಿಗೆ ರಥೋತ್ಸವ ನಡೆಯುತ್ತದೆ. ಶನಿವಾರ ರಥೋತ್ಸವದ ವೇಳೆ ಭಕ್ತರೆಲ್ಲರೂ ಸೇರಿ ರಥ ಎಳೆಯುವಾಗ ರಥದ ಚಕ್ರದಡಿ ಇಬ್ಬರು ಬಿದ್ದಿದ್ದಾರೆ. ಇದು ಗೊತ್ತಾಗದೇ ಎಳೆದಿದ್ದರಿಂದ ಇಬ್ಬರು ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಒಬ್ಬ ಭಕ್ತನ ತಲೆ‌ ಮೇಲೆ ರಥದ ಚಕ್ರ ಹತ್ತಿಳಿದಿದ್ದರಿಂದ ತಲೆಬುರುಡೆ ಅಪ್ಪಚ್ಚಿಯಾಗಿದೆ. ಮತ್ತೊಬ್ಬನ ಬೆನ್ನಿನ ಮೇಲೆ ಹಾದು ಹೋಗಿದೆ. ಹೀಗಾಗಿ ಆತನೂ ಅಲ್ಲಿಯೇ ಉಸಿರು ಚೆಲ್ಲಿದ್ದಾನೆ. ರಥೋತ್ಸವಕ್ಕೆ‌ ಎಸೆಯುವ ಉತ್ತುತ್ತೆಯನ್ನು ಆರಿಸುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ | Anjali Murder Case: ನನ್ನ ಮಗ ಮಾಡಿದ್ದು ತಪ್ಪು, ಕೋರ್ಟ್ ಅವನಿಗೆ ಯಾವ ಶಿಕ್ಷೆಯಾದ್ರೂ ಕೊಡಲಿ: ಆರೋಪಿ ಗಿರೀಶ್ ತಾಯಿ

ಮಲ್ಲಪ್ಪ ಲಿಂಗನಗೌಡರ (55) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮತ್ತೊಬ್ಬನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ರೋಣ ಪೊಲೀಸ್ ಠಾಣೆ‌ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.

Exit mobile version