ತುಮಕೂರು: ತುಮಕೂರಿನ ಶಿರಾ ರಸ್ತೆಯ ಬಾಲೇನಹಳ್ಳಿ ಗೇಟ್ ಬಳಿ ಗುರುವಾರ ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ಲಾರಿ ಮತ್ತು ಕ್ರೂಸರ್ ನಡುವೆ ಡಿಕ್ಕಿ ಸಂಭವಿಸಿದ್ದು, 9 ಮಂದಿ ಮೃತಪಟ್ಟಿದ್ದಾರೆ. 12ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ.
ಕ್ರೂಸರ್‌ನಲ್ಲಿ ರಾಯಚೂರಿನಿಂದ ಬೆಂಗಳೂರಿಗೆ ಮರಳುತ್ತಿದ್ದ ರಾಯಚೂರು ಮೂಲದ ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಕ್ರೂಸರ್ ಸುಮಾರು 23 ಜನರನ್ನು ತುಂಬಿಕೊಂಡು ಬರುತ್ತಿತ್ತು. ಎಪಿ 21 ಟಿಯೂ 8456 ನಂಬರಿನ ಕ್ರೂಸರ್ ಹಾಗೂ ಟಿ.ಎನ್ 95 ಬಿ 7869 ನಂಬರಿನ ಲಾರಿ ಡಿಕ್ಕಿಯಾಗಿವೆ.
ಕ್ರೂಸರ್‌ನಲ್ಲಿ ಪ್ರಯಾಣಿಸುತ್ತಿದ್ದ ಮೃತರು ರಾಯಚೂರಿನ ಮಾನ್ವಿ ಮೂಲದವರು. ನಾಲ್ಕು ಜನ ಪುರುಷರು, ಮೂರು ಜನ ಮಹಿಳೆಯರು ಹಾಗೂ ನಾಲ್ಕು ವರ್ಷದ ಎರಡು ಹೆಣ್ಣು ಮಕ್ಕಳು ಕೂಡ ಮೃತಪಟ್ಟಿದ್ದಾರೆ. ಮೃತರಲ್ಲಿ ಕಷ್ಣಪ್ಪ, ಸುಜಾತ, ವಿನೋದ ಎಂಬವರಿದ್ದಾರೆ. ಗಾಯಾಳುಗಳನ್ನು ದುರ್ಗಮ್ಮ, ಬಾಲಾಜಿ, ಸಂದೀಪ್, ಉಮೇಶ್, ಯಲ್ಲಮ್ಮ, ಅನಿಲ್, ದೇವರಾಜು, ಮೋನಿಕಾ, ನಾಗಪ್ಪ, ವಸಂತ, ವೈಶಾಲಿ, ವಿರೂಪಾಕ್ಷ, ಲತಾ ಎಂದು ಗುರುತಿಸಲಾಗಿದೆ. ಇವರೆಲ್ಲ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಕಳೆದ ರಾತ್ರಿ ಬೆಂಗಳೂರಿನಿಂದ ರಾಯಚೂರಿಗೆ ತಮ್ಮ ಮನೆಗೆ ತೆರಳುತ್ತಿದ್ದರು.
ಅಪಘಾತಕ್ಕೆ ಒಳಗಾದ ಕ್ರೂಸರ್ ವಡವಟ್ಟಿ ಗ್ರಾಮದ ಕೃಷ್ಣಪ್ಪ ಎಂಬವರಿಗೆ ಸೇರಿದೆ. ಅಪಘಾತದಲ್ಲಿ ಕ್ರೂಸರ್‌ನ ಡ್ರೈವರ್ ಕಂ ಓನರ್ ಕೃಷ್ಣಪ್ಪ ಕೂಡ ಸಾವು ಕಂಡಿದ್ದಾರೆ. ಅದೇ ಗ್ರಾಮದ ಇನ್ನೊಬ್ಬ ಮಹಿಳೆ ಲಕ್ಷ್ಮೀ ಎಂಬವರೂ ಮೃತಪಟ್ಟಿದ್ದಾರೆ. ಇನ್ನೂ ಮೂರು ಜನ ಸಿರವಾರ ತಾಲೂಕಿನ ಕುರಕುಂದ ಗ್ರಾಮದ ನಿವಾಸಿಗಳು. ಇನ್ನಿಬ್ಬರು ಸಿರವಾರ ತಾಲೂಕಿನ ಶಾಂತಗಲ್ ಮೂಲದವರು. ಒಟ್ಟು ಸಿರವಾರ ತಾಲೂಕಿನ 7 ಜನರು ಸತ್ತಿದ್ದಾರೆ. ಘಟನೆ ಬೆನ್ನಲ್ಲೇ ಗ್ರಾಮಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಲು ರಾಯಚೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಿಖಿಲ್ ಸೂಚನೆ ನೀಡಿದ್ದಾರೆ.
ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮತ್ತು ಎಸ್ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯದ ಬಗ್ಗೆ ವಿಚಾರಿಸಿ ಧೈರ್ಯ ತುಂಬಿದ್ದಾರೆ. ಕಳ್ಳಂಬೆಳ್ಳ ಸಬ್ ಇನ್ಸ್ಪೆಕ್ಟರ್, ಶಿರಾ ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಸ್ಥಳ ಮಹಜರು ಹಾಗೂ ತುರ್ತು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಗೃಹ ಸಚಿವರ ಸಂತಾಪ
ತುಮಕೂರಿನ ಶಿರಾ ರಸ್ತೆಯ ಬಾಲೇನಹಳ್ಳಿ ಗೇಟ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂಬತ್ತು ಮಂದಿ ಮೃತರಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಇದೊಂದು ಅತ್ಯಂತ ದುರದೃಷ್ಟಕರ ಘಟನೆ. ತುಮಕೂರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಮಾತನಾಡಿದ್ದು, ಗಾಯಾಳುಗಳಿಗೆ, ಸೂಕ್ತ ಚಿಕಿತ್ಸೆ ಒದಗಿಸಲು, ನಿರ್ದೇಶನ ನೀಡಲಾಗಿದೆ ಎಂದು ಗೃಹ ಸಚಿವ, ತುಮಕೂರು ಜಿಲ್ಲೆ ಉಸ್ತುವಾರಿ ಸಚಿವರಾಗಿರುವ ಆರಗ ಜ್ಞಾನೇಂದ್ರ ಹೇಳಿದ್ದಾರೆ.