ಕಾರವಾರ: ಸರಕು ಸಾಗಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಲಾರಿಯೊಂದು ಸಂಪೂರ್ಣ ಹೊತ್ತಿ ಉರಿದ ಘಟನೆ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ವಜ್ರಳ್ಳಿ ಗ್ರಾಮದ ಬಳಿ ನಡೆದಿದೆ.
ಹುಬ್ಬಳ್ಳಿಯಿಂದ ಅಂಕೋಲಾ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ಲಾರಿ ಇದಾಗಿತ್ತು. ಹೆದ್ದಾರಿಯಲ್ಲಿ ಆಗಮಿಸುತ್ತಿದ್ದ ವೇಳೆ ಲಾರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕ ಲಾರಿಯನ್ನು ರಸ್ತೆಯಂಚಿಗೆ ಕೊಂಡೊಯ್ದು ನಿಲ್ಲಿಸಿದ್ದಾನೆ. ಅದೃಷ್ಟವಶಾತ್ ಲಾರಿ ಚಾಲಕ ಅಗ್ನಿ ಅವಘಡದಿಂದ ಪಾರಾಗಿದ್ದಾನೆ.
ಕ್ಷಣಮಾತ್ರದಲ್ಲಿ ಬೆಂಕಿ ಇಡೀ ಲಾರಿಯನ್ನು ವ್ಯಾಪಿಸಿದ್ದು, ಲಾರಿ ಸುಟ್ಟು ಕರಕಲಾಗಿದೆ. ಬೆಂಕಿಯ ತೀವ್ರತೆಗೆ ಲಾರಿ ಸುತ್ತಲಿನ ಪ್ರದೇಶದಲ್ಲೂ ಬೆಂಕಿ ವ್ಯಾಪಿಸಿದ್ದು ದಟ್ಟ ಹೊಗೆ ಆವರಿಸಿಕೊಂಡಿತ್ತು. ಈ ವೇಳೆ ಸ್ಥಳೀಯರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಹರಸಾಹಸ ಪಡುತ್ತಿದ್ದಾರೆ.
ಲಾರಿಯು ರಾಸಾಯನಿಕ ವಸ್ತುವನ್ನು ಹೊತ್ತು ಸಾಗುತ್ತಿತ್ತು ಎನ್ನಲಾಗಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಅವಘಡದಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸ್ಥಳದಲ್ಲಿದ್ದ ಪೊಲೀಸರು ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟಿದ್ದಾರೆ. ಘಟನೆ ಸಂಬಂಧ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Scooter on fire | ಚಲಿಸುತ್ತಿದ್ದಾಗಲೇ ಬೆಂಕಿಗೆ ಆಹುತಿಯಾದ ಸ್ಕೂಟರ್: ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ಕಾರಣ?