ಕಾರವಾರ: ಉದ್ಯಮಿಯೊಬ್ಬರು (Business Man) ತನ್ನ ಪತ್ನಿ ಮತ್ತು ಮಗನನ್ನು ಕಾರವಾರ ಬಳಿ ನದಿಗೆ ತಳ್ಳಿ, ತಾನು ಗೋವಾದ ಕಾಡಿನಲ್ಲಿ ಆತ್ಮಹತ್ಯೆ (Family suicide) ಮಾಡಿಕೊಂಡಿದ್ದಾರೆ. ಇದೊಂದು ಸಾಮೂಹಿಕ ಆತ್ಮಹತ್ಯೆ ಪ್ರಕರಣವೆಂದು ಹೇಳಲಾಗಿದ್ದು, ಎಲ್ಲರೂ ಜತೆಯಾಗಿ ಸಾಯಲು ನಿರ್ಧರಿಸಿ ಈ ಕೃತ್ಯವೆಸಗಿದ್ದಾರೆ ಎಂದು ನಂಬಲಾಗಿದೆ.
ಮೃತರನ್ನು ಗೋವಾ ಮೂಲದ ಶ್ಯಾಮ್ ಪಾಟೀಲ್(45), ಪತ್ನಿ ಜ್ಯೋತಿ (38), ಇವರ ಮಗ ದಕ್ಷ (12) ಎಂದು ಗುರುತಿಸಲಾಗಿದೆ. ಪತ್ನಿ ಜ್ಯೋತಿ ಹಾಗೂ ಮಗ ದಕ್ಷನ ಮೃತದೇಹ ಕಾರವಾರ ತಾಲ್ಲೂಕಿನ ದೇವಭಾಗ ಬೀಚ್ ಬಳಿ ಪತ್ತೆಯಾಗಿದೆ. ಉದ್ಯಮಿ ಶ್ಯಾಮ ಪಾಟೀಲ್ ಮೃತದೇಹ ಗೋವಾದ ಕುಕ್ಕಳ್ಳಿಯ ಪಾಡಿ ಅರಣ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಉದ್ಯಮಿ ಶ್ಯಾಮ್ ಪಾಟೀಲ್ ಅವರು ಶ್ಯಾಮ್ ಇಂಡಸ್ಟ್ರೀಸ್ ಎಂಬ ಕಂಪನಿಯನ್ನು ಹೊಂದಿದ್ದು ಉದ್ಯಮಕ್ಕಾಗಿ ಕೋಟ್ಯಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಉದ್ಯಮದಲ್ಲಿ ಅಂದುಕೊಂಡಷ್ಟು ಲಾಭ ಸಿಗದೇ ನಷ್ಟ ಅನುಭವಿಸಿದ್ದು ಸಾಲ ಮರುಪಾವತಿಸಲು ಸಾಧ್ಯವಾಗಿಲ್ಲ. ಇದೇ ಕಾರಣಕ್ಕಾಗಿ ಸಾವಿನ ದಾರಿ ಹಿಡಿದಿದ್ದಾರೆ ಎಂದು ಹೇಳಲಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಅವರು ಗೋವಾದಿಂದ ಕಾರವಾರಕ್ಕೆ ಬಂದಿದ್ದರು ಎನ್ನಲಾಗಿದೆ. ಬುಧವಾರ ಸಂಜೆ ಕಾರವಾರದ ಕಾಳಿ ನದಿ ಸೇತುವೆಯ ಮೇಲೆ ಬಂದಿದ್ದ ಈ ಕುಟುಂಬ ಅಲ್ಲಿ ಆತ್ಮಹತ್ಯೆಗೆ ಪ್ಲ್ಯಾನ್ ಮಾಡಿತ್ತು. ಬಹುಶಃ ಎಲ್ಲರೂ ಸೇರಿ ಸೇತುವೆಯಿಂದ ಕೆಳಗೆ ಹಾರುವ ಯೋಚನೆ ಇದ್ದಿರಬೇಕು.
ಕಾರವಾರದ ಸೇತುವೆ ಬಳಿ ಬಂದ ಕುಟುಂಬ ಒಬ್ಬೊಬ್ಬರಾಗಿ ನೀರಿಗೆ ಹಾರಲು ಆರಂಭಿಸಿದ್ದಾರೆ. ಮೊದಲು ಮಗ ದಕ್ಷನನ್ನು ನದಿಗೆ ತಳ್ಳಿದ್ದು, ಬಳಿಕ ಪತ್ನಿ ಜ್ಯೋತಿ ಹಾರಿದ್ದರು. ಈ ನಡುವೆ, ಯಾರೋ ಈ ಘಟನೆಯನ್ನು ಗಮನಿಸುತಿದ್ದಾರೆ ಎಂದು ಅರಿತ ಉದ್ಯಮಿ ಶ್ಯಾಮ್ ಅವರು ಕಾರು ತೆಗೆದುಕೊಂಡು ಅಲ್ಲಿಂದ ಕಾಲು ಕಿತ್ತಿದ್ದರು ಎನ್ನಲಾಗಿದೆ.
ಇದಾದ ನಂತರ ಉದ್ಯಮಿ ಶ್ಯಾಮ್ ಗೋವಾದ ಕುಕ್ಕಳ್ಳಿ ಬಳಿ ಅರಣ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ. ಇತ್ತ ದೇವಭಾಗ ಕಡಲತೀರದ ಬಳಿ ಬೆಳಿಗ್ಗೆ ಬಾಲಕ ಹಾಗೂ ಮಹಿಳೆ ಮೃತದೇಹ ಪತ್ತೆಯಾಗಿದೆ.
ಎರಡೂ ಕಡೆ ಶವಗಳು ಪತ್ತೆಯಾದ ಹಿನ್ನೆಲೆಯಲ್ಲಿ ವಿದ್ಯಮಾನದ ಹಿಂದಿನ ಸಾಮೂಹಿಕ ಆತ್ಮಹತ್ಯೆಯ ಸುಳಿವು ಸ್ಪಷ್ಟವಾಗಿದೆ..
ಇದನ್ನೂ ಓದಿ: Murder Case : ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ, ತಹಸೀಲ್ದಾರ್ ಸಾವಿಗೆ ಟ್ವಿಸ್ಟ್! ಹೃದಯಾಘಾತವಲ್ಲ, ಕೊಲೆ?
ದೇವಭಾಗ ಕಡಲ ತೀರಕ್ಕೆ ಭೇಟಿ ನೀಡಿದ ಚಿತ್ತಾಕುಲ ಪೊಲೀಸರು ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಇರಿಸಿದ್ದಾರೆ. ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಗೋವಾದಲ್ಲಿ ಮೃತದೇಹ ಪತ್ತೆಯಾಗಿರುವುದರ ಕುರಿತು ಗೋವಾದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎರಡೂ ಠಾಣೆಗಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಾವಿನ ತನಿಖೆಯನ್ನು ನಡೆಸಲಿದ್ದಾರೆ.