ಬೆಂಗಳೂರು: ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ಕೇಂದ್ರ ಸಚಿವ ಅಮಿತ್ ಅವರ ಸಮಾವೇಶದ ವೇಳೆ ಜನ ತಂಪು ಪಾನೀಯದ ವಾಹನದ ಮೇಲೆ ಮುಗಿಬಿದ್ದು, ಕೂಲ್ ಡ್ರಿಂಕ್ಸ್ ಕುಡಿದ ಹಿನ್ನೆಲೆಯಲ್ಲಿ ನಷ್ಟ ಅನುಭವಿಸಿದ ಸಮೀರ್ ಹಸನ್ ಸಾಬ್ ಅವರಿಗೆ ಸಂಸದ ಪ್ರತಾಪ್ ಸಿಂಹ (Pratap Simha) ಅವರು ಹಣ ಪಾವತಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹೌದು, ಲಕ್ಷ್ಮೇಶ್ವರದಲ್ಲಿ ಅಮಿತ್ ಶಾ ಕಾರ್ಯಕ್ರಮದ ವೇಳೆ ಬಿಸಿಲಿನ ಬೇಗೆಗೆ ಜನ ಬೇಸತ್ತು ಹೋಗಿದ್ದರು. ತುಂಬ ಜನಕ್ಕೆ ಬಾಯಾರಿಕೆ ಆಗಿತ್ತು. ಇದೇ ವೇಳೆ ಸಮೀರ್ ಹಸನ್ ಸಾಬ್ ಎಂಬ ಕೂಲ್ ಡ್ರಿಂಕ್ಸ್ ವ್ಯಾಪಾರಿಯು ಸಮಾವೇಶದ ಸ್ಥಳಕ್ಕೆ ಆಗಮಿಸಿದ್ದಾರೆ. ಬಿಜೆಪಿಯವರೇ ಕೂಲ್ ಡ್ರಿಂಕ್ಸ್ ವಾಹನ ಕರೆಸಿರಬೇಕು ಎಂದು ಜನ ಸಮೀರ್ ವಾಹನಕ್ಕೆ ನುಗ್ಗಿ, ಕೂಲ್ ಡ್ರಿಂಕ್ಸ್, ನೀರು, ಜ್ಯೂಸ್ ಸೇರಿ ಎಲ್ಲ ಪಾನೀಯವನ್ನೂ ಕುಡಿದಿದ್ದರು.
ಪ್ರತಾಪ್ ಸಿಂಹ ಟ್ವೀಟ್
ಇದನ್ನೂ ಓದಿ: Karwar News | ಕೂಲ್ ಡ್ರಿಂಕ್ಸ್ ವಾಹನದಲ್ಲಿ ಗೋವಾ ಮದ್ಯ; ಇಬ್ಬರು ಆರೋಪಿಗಳ ಸೆರೆ
ವಾಹನದಲ್ಲಿದ್ದ ಎಲ್ಲ ಕೂಲ್ ಡ್ರಿಂಕ್ಸ್‌ಗಳನ್ನು ಕುಡಿದ ಹಿನ್ನೆಲೆಯಲ್ಲಿ 22 ವರ್ಷದ ಸಮೀರ್ ಹಸನ್ ಸಾಬ್ ಅವರಿಗೆ ಸುಮಾರು 35 ಸಾವಿರ ರೂಪಾಯಿ ನಷ್ಟವಾಗಿತ್ತು. ಸಮೀರ್ ಅವರು ವಾಹನದಲ್ಲಿಯೇ ಕುಳಿತು ಅತ್ತಿದ್ದ ವಿಡಿಯೊ ವೈರಲ್ ಆಗಿತ್ತು. ಮಾಧ್ಯಮಗಳೂ ವರದಿ ಮಾಡಿದ್ದವು. ಇದನ್ನು ಮನಗಂಡ ಪ್ರತಾಪ್ ಸಿಂಹ ಅವರು, ಸಮೀರ್ ಅವರಿಗೆ 35 ಸಾವಿರ ರೂಪಾಯಿಯನ್ನು ಆನ್‌ಲೈನ್ ಮೂಲಕ ವರ್ಗಾಯಿಸಿದ್ದಾರೆ. ಪ್ರತಾಪ್ ಸಿಂಹ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಕುರಿತು ಟ್ವೀಟ್ ಮಾಡಿದ ಪ್ರತಾಪ್ ಸಿಂಹ, “ಸಮೀರ್ ಹಸನ್ ಸಾಬ್‌ಗೆ ಹಣ ಕಳುಹಿಸಿದ್ದೇನೆ. ಸಾರಿ ಬ್ರದರ್, ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ. ಸಮೀರ್ ಸಾಬ್‌ಗೆ ನಷ್ಟವಾದ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈಗ ನಷ್ಟ ಪಾವತಿಸುವ ಮೂಲಕ ಪ್ರತಾಪ್ ಸಿಂಹ ಅವರು ಯುವಕನ ನೆರವಿಗೆ ನಿಂತಿದ್ದಾರೆ.