ಗದಗ: ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಸಮಾವೇಶದ ವೇಳೆ ಜನ ತಂಪು ಪಾನೀಯ ವಾಹನವೊಂದರ ಮೇಲೆ ಮುಗಿಬಿದ್ದು, ಕೂಲ್ ಡ್ರಿಂಕ್ಸ್ ಕುಡಿದ ಹಿನ್ನೆಲೆಯಲ್ಲಿ ವ್ಯಾಪಾರಿ ಸಮೀರ್ ಹಸನ್ ಸಾಬ್ ನಷ್ಟ ಅನುಭವಿಸಿದ್ದರು. ಹೀಗಾಗಿ ಅವರಿಗೆ ಸಂಸದ ಪ್ರತಾಪ್ ಸಿಂಹ (Pratap Simha) ಅವರು ಹಣ ಪಾವತಿಸುವ ಮೂಲಕ ಮಾನವೀಯತೆ ಮೆರೆದಿರುವ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಮೀರ್, ನನಗೆ ಪ್ರತಾಪ್ ಸಿಂಹ ಅವರು ಹಣ ನೀಡಿರುವುದು ಖುಷಿಯಾಗಿದೆ. ಈಗಾಗಲೇ ಕಾಂಗ್ರೆಸ್‌ನವರೂ ಹಣ ಕೊಟ್ಟಿದ್ದಾರೆ. ಈಗ ಪ್ರತಾಪ್ ನೀಡಿದ ಹಣದಲ್ಲಿ ನಷ್ಟವನ್ನು ಕಳೆದು ಉಳಿಕೆ ಹಣವನ್ನು ವೃದ್ಧಾಶ್ರಮಕ್ಕೆ ಕೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತೇನೆ ಎಂದು ಹೇಳಿದ್ದಾರೆ.
ಅಂದು ಲಕ್ಷ್ಮೇಶ್ವರದಲ್ಲಿ ಅಮಿತ್ ಶಾ ಕಾರ್ಯಕ್ರಮದ ವೇಳೆ ಬಿಸಿಲಿನ ಬೇಗೆಗೆ ಜನ ಬೇಸತ್ತು ಹೋಗಿದ್ದರು. ತುಂಬ ಜನರಿಗೆ ಬಾಯಾರಿಕೆ ಆಗಿತ್ತು. ಇದೇ ವೇಳೆ ಸಮೀರ್ ಹಸನ್ ಸಾಬ್ ಸಮಾವೇಶದ ಸ್ಥಳಕ್ಕೆ ಕೂಲ್ ಡ್ರಿಂಕ್ಸ್ ಸಮೇತ ಆಗಮಿಸಿದ್ದಾರೆ. ಬಿಜೆಪಿಯವರೇ ಕೂಲ್ ಡ್ರಿಂಕ್ಸ್ ವಾಹನ ಕರೆಸಿರಬೇಕು ಎಂದು ಜನ ಸಮೀರ್ ವಾಹನಕ್ಕೆ ನುಗ್ಗಿ, ಕೂಲ್ ಡ್ರಿಂಕ್ಸ್, ನೀರು, ಜ್ಯೂಸ್ ಸೇರಿ ಎಲ್ಲ ಪಾನೀಯವನ್ನೂ ಕುಡಿದು ತೇಗಿದ್ದರು. ಇದರಿಂದ ಸಮೀರ್‌ಗೆ ಸಾಕಷ್ಟು ನಷ್ಟವಾಗಿತ್ತು.
ವಾಹನದಲ್ಲಿದ್ದ ಎಲ್ಲ ಕೂಲ್ ಡ್ರಿಂಕ್ಸ್‌ಗಳನ್ನು ಕುಡಿದ ಹಿನ್ನೆಲೆಯಲ್ಲಿ ಸಮೀರ್ ಹಸನ್ ಸಾಬ್ ಅವರಿಗೆ ಸುಮಾರು 35 ಸಾವಿರ ರೂಪಾಯಿ ನಷ್ಟವಾಗಿತ್ತು. ಸಮೀರ್ ಅವರು ವಾಹನದಲ್ಲಿಯೇ ಕುಳಿತು ಅತ್ತಿದ್ದ ವಿಡಿಯೊ ವೈರಲ್ ಆಗಿತ್ತು. ಮಾಧ್ಯಮಗಳೂ ವರದಿ ಮಾಡಿದ್ದವು. ಇದನ್ನು ಮನಗಂಡ ಪ್ರತಾಪ್ ಸಿಂಹ ಅವರು, ಸಮೀರ್ ಅವರಿಗೆ 35 ಸಾವಿರ ರೂಪಾಯಿಯನ್ನು ಆನ್‌ಲೈನ್ ಮೂಲಕ ವರ್ಗಾಯಿಸಿದ್ದಾರೆ. ಪ್ರತಾಪ್ ಸಿಂಹ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಕಾಂಗ್ರೆಸ್‌ನವರೂ ದುಡ್ಡು ಕೊಟ್ಟಿದ್ದಾರೆ- ಸಮೀರ್
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವ್ಯಾಪಾರಿ ಸಮೀರ್ ಹಸನ್ ಸಾಬ್, ಅಮಿತ್ ಶಾ ಕಾರ್ಯಕ್ರಮಕ್ಕೆ ಪೌಚ್ ಬೇಕಾಗಿದೆ ಅಂತ ಆರ್ಡರ್ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಗದ್ದಲ ಇದ್ದಿದ್ದರಿಂದ ಅಲ್ಲಿಗೆ ಹೋಗಿರಲಿಲ್ಲ. ಆದರೆ, ಬಿಜೆಪಿ ಮುಖಂಡರು ಪದೇ ಪದೆ ಕಾಲ್ ಮಾಡಿದ್ದಕ್ಕೆ ನಾನು ಹೋಗಬೇಕಾಯಿತು. ಆದರೆ, ಅಲ್ಲಿಗೆ ಹೋಗುತ್ತಿದ್ದಂತೆ ಕೂಲ್ ಡ್ರಿಂಕ್ಸ್ ಎಲ್ಲ ಫ್ರೀ ಬಂದಾವು ಅಂತ ಜನರೆಲ್ಲ ತೆಗೆದುಕೊಂಡು ಹೋದರು. ನನಗೆ ಸುಮಾರು 35 ಸಾವಿರ ರೂಪಾಯಿ ನಷ್ಟ ಆಗಿತ್ತು. ಈ ವಿಷಯ ತಿಳಿದ ಕಾಂಗ್ರೆಸ್ ಮುಖಂಡರು ಅಂದು ರಾತ್ರಿಯೇ ನನ್ನ ಬಳಿಗೆ ಬಂದು 20 ಸಾವಿರ ರೂಪಾಯಿ ನೀಡಿದರು.
ಕೂಲ್ ಡ್ರಿಂಕ್ಸ್ ವ್ಯಾಪಾರಿ ನೀಡಿದ ಸಂಪೂರ್ಣ ಹೇಳಿಕೆಯ ವಿಡಿಯೊ ಇಲ್ಲಿದೆ
35 ಸಾವಿರ ರೂಪಾಯಿ ಹಾಕಿದ ಪ್ರತಾಪ್ ಸಿಂಹ
ಇದಾದ ಬಳಿಕ ತುಂಬಾ ಜನ ನನಗೆ ಕರೆ ಮಾಡಿ ವಿಚಾರಿಸಿದ್ದಾರೆ. ನನಗೆ ಸಹಾಯ ಮಾಡಲು ಮುಂದಾದರು. ಆದ್ರೆ ನಾನು ಯಾರ ಬಳಿಯೂ ದುಡ್ಡು ತೆಗೆದುಕೊಂಡಿಲ್ಲ. ಆದರೆ, ಭಾನುವಾರ ಪ್ರತಾಪ್ ಸಿಂಹ ಅವರು ಫೋನ್ ಮಾಡಿ ಎಷ್ಟು ಲಾಸ್ ಆಗಿದೆ ಎಂದು ವಿಚಾರಿಸಿದರು. ಹಾಗೇ 35 ಸಾವಿರ ರೂಪಾಯಿಯನ್ನು ನಿನಗೆ ಹಾಕಿದ್ದೇನೆ ಎಂದೂ ಹೇಳಿದರು. ಆದರೆ ನನಗೆ ಎಷ್ಟು ಲಾಸ್ ಆಗಿದೆಯೋ ಅಷ್ಟನ್ನು ಮಾತ್ರ ನಾನು ತೆಗೆದುಕೊಳ್ಳುತ್ತೇನೆ. ಉಳಿದ ಹಣವನ್ನು ಬಡವರಿಗೋ ಇಲ್ಲವೇ ವೃದ್ಧಾಶ್ರಮಕ್ಕೋ ನೀಡಿ ಅದರ ಬಗ್ಗೆ ಪೋಸ್ಟ್ ಮಾಡುತ್ತೇನೆ ಎಂದು ಸಮೀರ್ ಹಸನ್ ಸಾಬ್ ಹೇಳಿದರು.
ಇದನ್ನೂ ಓದಿ: Karnataka Election 2023: ಬಿಜೆಪಿ ಕದ್ದಿರುವ ಹಣ ಮತ್ತೆ ಜನರಿಗೇ ವಾಪಸ್ ಕೊಡುತ್ತೇವೆ : ರಾಹುಲ್ ಗಾಂಧಿ ಭರವಸೆ
ಪ್ರತಾಪ್ ಸಹಾಯಕ್ಕೆ ಖುಷಿ
ಸಂಸದ ಪ್ರತಾಪ್ ಸಿಂಹ ಅವರು ನನಗೆ ಕರೆ ಮಾಡಿ ಹಣ ಹಾಕಿದರು. ಇದರಿಂದ ನನಗೆ ತುಂಬಾ ಖುಷಿಯಾಯಿತು. ಉಳಿದ ಹಣವನ್ನು ನಾನು ವೃದ್ಧಾಶ್ರಮಕ್ಕೆ ಹಾಕುತ್ತೇನೆ ಎಂದು ಸಮೀರ್ ಹಸನ್ ಸಾಬ್ ಹೇಳಿದರು.