Site icon Vistara News

Kerala Lottery : ಲಾಟರಿಯಲ್ಲಿ 25 ಕೋಟಿ ರೂ. ಗೆದ್ದ ಮಂಗಳೂರಿನ ಯುವಕ; ಶುಭಾಶಯಗಳ ಮಹಾಪೂರಕ್ಕೆ ಕಂಗಾಲು! ಯಾಕೆ?

Kerala lottery

ಉಳ್ಳಾಲ (ಮಂಗಳೂರು): ಕೇರಳ ರಾಜ್ಯ ಸರ್ಕಾರದ ಲಾಟರಿಯಲ್ಲಿ ದಕ್ಷಿಣ ಕನ್ನಡ ಭಾಗದ ಅನೇಕ ಯುವಕರಿಗೆ ಅದೃಷ್ಟ ಖುಲಾಯಿಸಿದ್ದನ್ನು (KeralaLottery) ನೀವು ಕೇಳಿದ್ದೀರಿ, ಓದಿದ್ದೀರಿ. ಹಾಗೆಯೇ ಮಂಗಳೂರಿನ ಮಂಜನಾಡಿಯ ಯುವಕನಿಗೂ ಕೇರಳ ರಾಜ್ಯ ಲಾಟರಿಯಲ್ಲಿ (Kerala state Lottery) 25 ಕೋಟಿ ಬಂದಿದೆ (Mangalorean wins 25 Crores in lottery). ಆದರೆ, ಈ ಸುದ್ದಿ ಆತನಿಗೆ ಭಾರಿ ಕಿರಿಕಿರಿಯಾಗಿದೆ. ಶುಭಾಶಯಗಳ ಮಹಾಪೂರದಿಂದ (Heavy rains of wishes) ಆತ ಕಂಗಾಲಾಗಿ ಹೋಗಿದ್ದಾನೆ. ಯಾಕೆ ಕಂಗಾಲಾಗಿದ್ದು? ಏನು ಕಥೆ?

ಮಂಜನಾಡಿ ಮೊಂಟೆಪದವು ನಿವಾಸಿ ಆಸೀಫ್ ಎಂಬ ಯುವಕ ಬೆಂಗಳೂರಿನಲ್ಲಿ ಮೊಬೈಲ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಎರಡು ದಿನಗಳ ಹಿಂದಷ್ಟೇ ಡ್ರಾ ಆದ ಕೇರಳದ ರೂ.25 ಕೋಟಿ ಲಾಟರಿ ಒಲಿದಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಆರಂಭದಲ್ಲಿ ಈ ವಿಷಯ ಆಸಿಫ್‌ ಅವರಿಗೆ ಗೊತ್ತೇ ಆಗಿರಲಿಲ್ಲ. ಆಸಿಫ್‌ ಬೆಂಗಳೂರಿನಿಂದ ಕಾರಿನಲ್ಲಿ ಊರಿಗೆ ಬರುತ್ತಿದ್ದಾಗ ಮೊಬೈಲ್ ಗೆ ಕರೆಗಳ ಮೇಲೆ ಕರೆಗಳು ಬರುತ್ತಲೇ ಇತ್ತು.

ಕರೆ ಸ್ವೀಕರಿಸಿದಾಗ ಶುಭಾಶಯಗಳ ಸುರಿಮಳೆ ಎದುರಾಗಿತ್ತು. ಕೆಲವು ಫೋನ್‌ ಮಾಡಿದ್ದರೆ, ಇನ್ನು ಕೆಲವರು ಮೆಸೇಜ್‌ ಮಾಡಿದ್ದರು. ಆದರೆ, ಇದ್ಯಾಕೆ ಎನ್ನುವುದು ಆಸಿಫ್‌ಗೆ ಹೊಳೆಯಲಿಲ್ಲ. ಈ ಬಗ್ಗೆ ಆಸೀಫ್ ಸ್ನೇಹಿತರಲ್ಲಿ ಯಾಕೆ ಶುಭಾಶಯ ಎಂದು ವಿಚಾರಿಸಿದರು. ನಿನಗೆ 25 ಕೋಟಿ ರೂ. ಲಾಟರಿ ಬಡಿದಿದೆ ಎಂದು ಅವರು ತಿಳಿಸಿದಾಗ ಆಸಿಫ್‌ಗೂ ಓ ಹೌದಾ ಎಂಬಂಥ ಭಾವ ಆವರಿಸಿತು.

ಇಡೀ ರಾತ್ರಿ ನಿರಂತರವಾಗಿ ಆಸಿಫ್‌ಗೆ ಕರೆಗಳು ಬರುತ್ತಲೇ ಇದ್ದವು. ಅಬ್ಬಾ 25 ಕೋಟಿ ರೂ. ಲಾಟರಿ ಹೊಡೆದರೆ ಹಣ ಏನು ಮಾಡುವುದಪ್ಪಾ ಎನ್ನುವ ಯೋಚನೆಯೂ ಸರಿದುಹೋಯಿತು. ಲಾಟರಿ ಒಲಿದರೆ ಸಂಬಂಧಿಕರು, ಗೆಳೆಯರು ತಮಗೆ ಹಣ, ತಮಗೆ ಹಣ ಎಂದು ಕೇಳುವುದರಿಂದ ತಪ್ಪಿಸಿಕೊಳ್ಳಲಾಗದಿದ್ದರೆ ಎಂಬ ಭಯವೂ ಕಾಡಿತು. ಹೀಗೆ ಕಿರಿಕಿರಿಗೆ ಒಳಗಾದ ಯುವಕನೊಬ್ಬ ನನಗೆ ಈ ಜನ್ಮದಲ್ಲಿ ಲಾಟರಿ ಹೊಡೆಯದಿರಲಿ ಎನ್ನುವ ಪ್ರಾರ್ಥನೆ ಮಾಡಿದ್ದೂ ನೆನಪಾಯಿತು.

ಇಷ್ಟರ ಮಧ್ಯೆಯೇ ಅವರಿಗೆ ಬಹುವಾಗಿ ಕಾಡಿದ ಇನ್ನೊಂದು ಪ್ರಶ್ನೆ.. ನಾನು ಲಾಟರಿ ಟಿಕೆಟೇ ಖರೀದಿಸಿಲ್ಲ. ಹಾಗಿರುವಾಗ ಲಾಟರಿ ಹೊಡೆದದ್ದು ಹೇಗೆ? ನಿಜಕ್ಕೂ ಆಸಿಫ್‌ ಯೋಚಿಸುತ್ತಿದ್ದ ಮೂಲ ಪ್ರಶ್ನೆ ಅದೇ ಆಗಿತ್ತು.

ಹಾಗಿದ್ದರೆ ನಿಜಕ್ಕೂ ನಡೆದಿದ್ದೇನು? ಆಸಿಫ್‌ಗೆ ಲಾಟರಿ ಒಲಿದಿಲ್ವಾ?

ಈ ಕುರಿತು ಆಸೀಫ್ ಸ್ನೇಹಿತರೊಬ್ಬರಲ್ಲಿ ವಿಚಾರಿಸಿದಾಗ ಅಸಲಿಯತ್ತು ಬೆಳಕಿಗೆ ಬಂದಿದೆ. ವಾಟ್ಸ್ ಅಪ್ ಮೂಲಕ ಬಂದಿದ್ದ ಲಾಟರಿ ಗೆದ್ದವರ ಲಿಂಕ್ ಬಳಸಿ ತಮ್ಮ ಸ್ನೇಹಿತರ ಭಾವಚಿತ್ರ ಹಾಗೂ ಹೆಸರನ್ನು ಹಾಕಿ ಮಜಾ ತೆಗೆದುಕೊಳ್ಳುವ ತಂಡ ಈ ಕೆಲಸ ಮಾಡಿದೆ.

ಇದನ್ನೂ ಓದಿ: Kerala Lottery: ಅಬ್ಬಾ ಲಾಟರಿ; 250 ರೂ. ಟಿಕೆಟ್‌ ಖರೀದಿಸಿದ ಕೇರಳದ 11 ಮಹಿಳಾ ಪೌರ ಕಾರ್ಮಿಕರು ಈಗ ಕೋಟ್ಯಧೀಶೆಯರು!

ಕೇರಳದ ಲಾಟರಿ ಗಳಿಸಿದವರ ಪತ್ರಕೆಯಲ್ಲಿ ಪ್ರಕಟವಾದ ಚಿತ್ರವನ್ನು ಬಳಸಿ ಬೇರೆ ಫೋಟೊ ಅಂಟಿಸಿ ಸಾಮಾಜಿಕ ಜಾಲತಾಣದಲ್ಲಿ ರವಾನಿಸುತ್ತಿರುವ ವಿಚಾರವೂ ಬೆಳಕಿಗೆ ಬಂದಿದೆ. ಈ ಹಿಂದೆಯೂ ಜಿಲ್ಲೆಯ ವಿವಿಧೆಡೆ ಇಂತಹ ಪ್ರಕರಣಗಳು ನಡದಿರುವುದಾಗಿಯು ತಿಳಿದುಬಂದಿದೆ.

Exit mobile version