ಶಿವಮೊಗ್ಗ: ಚುನಾವಣಾ ನೀತಿ ಸಂಹಿತೆ (Karnataka Election) ಜಾರಿಯಲ್ಲಿರುವಾಗ ಪ್ರಚಾರದ ವೇಳೆ ರಾಜಕೀಯ ಪಕ್ಷದ ಚಿಹ್ನೆ, ಧ್ವಜ ಬಳಸಬಾರದು ಎಂಬ ನಿಯಮವಿದೆ. ಹೀಗಾಗಿ ತಾಲೂಕಿನ ಸೋಗಾನೆ ವಿಮಾನ ನಿಲ್ದಾಣದ ಮೇಲೆ ಇರುವ ಕಮಲದ ಚಿಹ್ನೆ ಆಕಾರದ ಚಾವಣಿ ಬಟ್ಟೆಯಿಂದ ಸಂಪೂರ್ಣವಾಗಿ ಮುಚ್ಚಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನಿಯೋಗ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ನೇತೃತ್ವದ ನಿಯೋಗ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ. ಇತ್ತೀಚೆಗಷ್ಟೇ ಉದ್ಘಾಟನೆಯಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ಕಮಲದ ಆಕಾರದಲ್ಲಿದ್ದು, ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ಇದು ಮತದಾರರ ಗಮನ ಸೆಳೆಯುವ ಕಾರಣ ಟರ್ಮಿನಲ್ ಚಾವಣಿಯನ್ನು ಮುಚ್ಚಬೇಕು ಎಂದು ರಾಜ್ಯ ಚುನಾವಣಾ ಆಯುಕ್ತರಿಗೆ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮೂಲಕ ಕೈ ನಾಯಕರು ಮನವಿ ಸಲ್ಲಿಸಿದ್ದಾರೆ.
ನೂರಾರು ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಕಮಲದ ಚಿಹ್ನೆಯನ್ನು ಕಟ್ಟಡದ ಮೇಲೆ ನಿರ್ಮಾಣ ಮಾಡಲಾಗಿದೆ. ಅಲ್ಲದೇ, ಕೆ.ಎಸ್.ಆರ್.ಟಿ.ಸಿ. ಬಸ್‌ಗಳಲ್ಲೂ ಸರ್ಕಾರಿ ಜಾಹೀರಾತುಗಳಿದ್ದು, ಇದರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವರ ಫೋಟೊ ಹಾಕಲಾಗಿದೆ. ಇವುಗಳನ್ನು ಕೂಡ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಏರ್‌ಪೋರ್ಟ್ ಕಟ್ಟಡ ನಿರ್ಮಾಣ ಆರಂಭವಾದಾಗಲೇ ಕಾಂಗ್ರೆಸ್ ಸೇರಿ ಸಾರ್ವಜನಿಕರು, ವಿವಿಧ ಸಂಘಟನೆಗಳು ಕಟ್ಟಡ ವಿನ್ಯಾಸ ವಿರೋಧಿಸಿ ಹೋರಾಟ ಮಾಡಿದ್ದವು. ಆದರೂ ಕಮಲದ ಚಿಹ್ನೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಹೀಗಾಗಿ ಚುನಾವಣಾ ನೀತಿ ಸಂಹಿತೆಯ ಪ್ರಕಾರ ಚುನಾವಣಾಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಕಮಲದ ಚಿಹ್ನೆ ಇರುವ ಭಾಗವನ್ನು ಮುಚ್ಚಬೇಕು. ಒಂದು ವೇಳೆ ಜಿಲ್ಲಾಡಳಿತ ಅಥವಾ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಕೆಪಿಸಿಸಿ ವತಿಯಿಂದಲೇ ಅದನ್ನು ಮುಚ್ಚಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ನೇತೃತ್ವದ ನಿಯೋಗದಲ್ಲಿ ಅರ್ಚನಾ ನಿರಂಜನ್, ಸ್ಟೆಲಾ ಮಾರ್ಟಿನ್, ಕವಿತಾ ರಾಘವೇಂದ್ರ, ಮಧುಕುಮಾರ್, ಬಾಲಾಜಿ, ವಿನಯ್ ಮತ್ತಿತರರು ಇದ್ದರು.
ಫೆ.27ರಂದು ಉದ್ಘಾಟನೆಯಾಗಿತ್ತು ಏರ್‌ಪೋರ್ಟ್
ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಕನಸಿನ ಯೋಜನೆಯಾದ ಏರ್‌ಪೋರ್ಟ್ ಅನ್ನು ಅವರ 80ನೇ ಹುಟ್ಟುಹಬ್ಬದ ದಿನದಂದೇ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ್ದರು.
ಈ ವಿಮಾನ ನಿಲ್ದಾಣ ಹಲವು ವಿಶೇಷತೆಗಳನ್ನು ಹೊಂದಿದೆ. ಶಿವಮೊಗ್ಗದಿಂದ 14 ಕಿ.ಮೀ ದೂರದಲ್ಲಿರುವ ಸೋಗಾನೆಯಲ್ಲಿರುವ 663 ಎಕರೆ ಪ್ರದೇಶದಲ್ಲಿ 449.22 ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಇದು ಬೆಂಗಳೂರಿನ ಬಳಿಕ ಎರಡನೇ ಅತಿ ದೊಡ್ಡ ರನ್ ವೇ ಇರುವ ವಿಮಾನ ನಿಲ್ದಾಣವಾಗಿದೆ. ಇದರ ರನ್‌ವೇಯ ಉದ್ದ 3,200 ಮೀಟರ್ ಇದೆ. ಬೆಂಗಳೂರು ವಿಮಾನ ನಿಲ್ದಾಣದ ರನ್ ವೇ ಉದ್ದ 4000 ಮೀಟರ್ ಇದೆ. ಗಂಟೆಗೆ 300ರಷ್ಟು ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಶಿವಮೊಗ್ಗ ವಿಮಾನ ನಿಲ್ದಾಣವು ಬೋಯಿಂಗ್ 737 ಮತ್ತು ಏರ್ ಬಸ್ ಎ320 ಮಾದರಿಯ ವಿಮಾನಗಳನ್ನು ನಿರ್ವಹಿಸಬಲ್ಲ ಶಕ್ತಿ ಹೊಂದಿದೆ.