ಬೆಂಗಳೂರು: ಮಸೀದಿ, ದೇಗುಲ, ಚರ್ಚ್ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಲೌಡ್ ಸ್ಪೀಕರ್ ಬಳಸಬೇಕು ಎಂದಾದರೆ ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು ಎಂಬ ರಾಜ್ಯ ಸರಕಾರದ ಆದೇಶಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಇದುವರೆಗೆ ಒಟ್ಟು 3,489 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ ಮಸೀದಿಗಳಿಂದ ಬಂದಿರುವ ಅರ್ಜಿಗಳೇ ಹೆಚ್ಚು.
ರಾಜ್ಯದಲ್ಲಿ ಆಜಾನ್-ಭಜನೆ ಸಂಘರ್ಷಕ್ಕೆ ಕಾರಣವಾಗಿದ್ದ ಧ್ವನಿವರ್ಧಕದ ವಿಚಾರದಲ್ಲಿ ರಾಜ್ಯ ಸರಕಾರ ಕೆಲವೊಂದು ನಿಯಮಾವಳಿಗಳನ್ನು ರೂಪಿಸಿದೆ. ಧ್ವನಿವರ್ಧಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲು ದರ ನಿಗದಿ ಮಾಡಿದೆ. ಜತೆಗೆ ಅನುಮತಿ ಪಡೆಯುವುದು ಕಡ್ಡಾಯ ಎಂದು ಹೇಳಿದೆ.
ರಾತ್ರಿ ಹತ್ತು ಗಂಟೆಯಿಂದ ಬೆಳಗ್ಗೆ ಆರು ಗಂಟೆಯವರೆಗೆ ಧ್ವನಿವರ್ಧಕ ಬಳಸಲು ಅನುಮತಿ ಇಲ್ಲ. ಮಸೀದಿಯಲ್ಲಿ ಕೂಗುವ ಆಜಾನ್ ಸೇರಿದಂತೆ ಯಾವುದೇ ಧರ್ಮದ ಧಾರ್ಮಿಕ ಕೇಂದ್ರಗಳಲ್ಲಿ ಬೆಳಗ್ಗೆ ಆರು ಗಂಟೆಗೆ ಮೊದಲು ಧ್ವನಿವರ್ಧಕ ಬಳಸಬಾರದು ಎಂದು ಕಡ್ಡಾಯಗೊಳಿಸಲಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಅಗತ್ಯವಿದ್ದರೆ ಅನುಮತಿ ನೀಡಲಾಗುವುದು. ಆದರೆ, ಸುಪ್ರೀಂಕೋರ್ಟ್ ನಿಗದಿಪಡಿಸಿದ ಡೆಸಿಬಲ್ ಧ್ವನಿಯನ್ನು ಮೀರುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಸ್ಥಳೀಯ ಸಕ್ಷಮ ಪ್ರಾಧಿಕಾರದಿಂದ ಧ್ವನಿವರ್ಧಕಗಳನ್ನು ಬಳಕೆಗೆ ಅನುಮತಿ ಕಡ್ಡಾಯಗೊಳಿಸಲಾಗಿತ್ತು. ಅನುಮತಿ ಪಡೆಯುವ ವೇಳೆ ವಿಧಿಸುವ ಶುಲ್ಕದ ಬಗ್ಗೆ ಮಾರ್ಗಸೂಚಿ ಹೊರಡಿಸಿದೆ. ಒಂದು ದಿನ ಸ್ಪೀಕರ್ ಬಳಕೆಗೆ 75 ರೂ. ನಿಗದಪಡಿಸಲಾಗಿದ್ದು, ಒಂದು ತಿಂಗಳಿಗಾದರೆ 450 ರು. ಶುಲ್ಕ ವಿಧಿಸಿದೆ.
ಎಷ್ಟು ಅರ್ಜಿ ಬಂದಿದೆ?
ರಾಜ್ಯದಲ್ಲಿ ಇದುವರೆಗೆ ಒಟ್ಟು 3,489 ಅರ್ಜಿಗಳ ಸಲ್ಲಿಕೆಯಾಗಿದೆ. ಮಸೀದಿಗಳು -2,788 , ದೇವಾಲಯಗಳು -481 , ಚರ್ಚ್- 88 ಹಾಗೂ ಇತರ -132 ಸೇರಿ 3,489 ಅರ್ಜಿಗಳು ಬಂದಿವೆ. ಇವುಗಳಿಗೆ ಯಾವ ರೀತಿ ಅನುಮತಿ ನೀಡಲಾಗುತ್ತದೆ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ: ಬಿಜೆಪಿ ಮುಸ್ಲಿಂ ವಿರೋಧಿ ಎಂಬ ತಪ್ಪು ಮಾಹಿತಿ ದೂರ ಮಾಡಿ: ಜಮಾಲ್ ಸಿದ್ದಿಕಿ