Site icon Vistara News

Love Case : ರೊಟ್ಟಿ ಮಾರೋ ಆಂಟಿ- ಡ್ರೈವರ್‌ ಅಂಕಲ್‌ ಲವ್‌ ಸ್ಟೋರಿಗೆ ಬಿತ್ತು ಬೆಂಕಿ!

Aunty uncle love story Ballary

ಬಳ್ಳಾರಿ: ಇದು ಒಂದು ರೊಟ್ಟಿಯಿಂದ ಹುಟ್ಟಿದ ಲವ್‌ ಸ್ಟೋರಿ. ಆಂಟಿ ಮತ್ತು ಅಂಕಲ್‌ ಸೇರಿ ರೊಟ್ಟಿಗೆ (Aunty Uncle Love story) ಪ್ರೀತಿಯ ಎಣ್ಣೆಗಾಯಿ ಇಟ್ಟು ಖುಷಿ ಖುಷಿಯಾಗಿ ತಿಂದಿದ್ದರು. ಆದರೆ, ಈಗ ರೊಟ್ಟಿ ಸುಟ್ಟು ಹೋಗಿದೆ. ಅಂಕಲ್‌ ಕಳೆದುಕೊಂಡ ರೊಟ್ಟಿಗಾಗಿ ಹುಡುಕುತ್ತಾ ಬೀದಿ ಬೀದಿ ಅಲೆಯುತ್ತಾ ಈಗ ಪೊಲೀಸ್‌ ಠಾಣೆ (Ballary police Station) ಮೆಟ್ಟಿಲು ಹತ್ತಿದ್ದಾರೆ. ನನ್ನ ಪ್ರೇಯಸಿಯನ್ನು ಹುಡುಕಿಕೊಡಿ (Love Case) ಎಂದು ಕೇಳುತ್ತಿದ್ದಾರೆ!

ಅವಳ ಹೆಸರು ಸುಜಾತಾ. ಅವಳು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ರೊಟ್ಟಿ ಮಾರುತ್ತಿದ್ದಳು. ಆಕೆಗೆ ಮದುವೆಯಾಗಿ ಒಂದು ಮಗುವನ್ನು ಹೊಂದಿದ್ದಾಳೆ. ಅವನು ಸಿದ್ದಗೊಂಡ ಸೌದತ್ತಿ. ಅವರು ಸಾಂಗ್ಲಿಯ ಜತ್ತ ತಾಲೂಕಿನ ಮುಚ್ಚಂಡಿ ಗ್ರಾಮದವನು. ವೃತ್ತಿಯಲ್ಲಿ ಲಾರಿ ಡ್ರೈವರ್‌. ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಅವನಿಗೆ.

ಲಾರಿ ಚಾಲಕನಾಗಿ ರೊಟ್ಟಿ ತಿನ್ನಲು ಹೋಗುತ್ತಿದ್ದಾಗ ಸುಜಾತಾಳ ರೊಟ್ಟಿ ಅಂಗಡಿಗೆ ಹೋಗಿದ್ದ. ಅಲ್ಲಿ ರೊಟ್ಟಿಯ ಜತೆ ಜತೆಗೇ ಅವರು ಪ್ರೀತಿಯ ಕದ ತಟ್ಟಿದ್ದರು. ರೊಟ್ಟಿಯ ಜತೆಗೆ ಸುಜಾತಾ ಒಂದಿಷ್ಟು ಹೆಚ್ಚೇ ಎಂಬಂತೆ ಪಲ್ಯವನ್ನೂ ಹಾಕಿದ್ದಳು. ಹಾಗಾಗಿ ಬಹು ಬೇಗನೆ ಪ್ರೀತಿ ರೊಟ್ಟಿಯಂತೆ ಗಟ್ಟಿಯಾಯಿತು.

ಅದೊಂದು ದಿನ ಸುಜಾತಾ ಮೇಲೆ ಸಿದ್ದಗೊಂಡ ಸೌದತ್ತಿಗೆ ಲವ್‌ ಹೆಚ್ಚಾಯಿತು. ಊರು ಬಿಟ್ಟು ಓಡಿ ಹೋಗೋಣ್ವಾ ಎಂದು ಎಳೆಯ ಪ್ರೇಮಿಗಳಂತೆ ಕೇಳಿದ. ಆಕೆಯೂ ಮಗುವನ್ನು ಬಿಟ್ಟು ಬರಲು ರೆಡಿ ಇದ್ದಳು.

Aunty uncle love story Ballary

ಹಾಗೆ ಓಡಿ ಬಂದ ಸುಜಾತಾ ಮತ್ತು ಸಿದ್ದಗೊಂಡ ಇಬ್ಬರೂ ಬಳ್ಳಾರಿಯ ಗೌಳರಹಟ್ಟಿಯಲ್ಲಿ ವಾಸವಾಗಿದ್ದರು. ತಮಗೆ ಮೊದಲೊಂದು ಮದುವೆಯಾಗಿದೆ, ತಮಗೆ ಮಕ್ಕಳಿದ್ದಾರೆ ಎಂಬುದನ್ನು ಮರೆತ ಅವರಿಬ್ಬರೂ ಅಪ್ಪಟ ಯುವ ಜೋಡಿಯಂತೆ, ನವವಿವಾಹಿತರಂತೆ ಸಂಸಾರ ಶುರು ಮಾಡಿದ್ದರು.

ಸುಮಾರು ಆರು ತಿಂಗಳ ಕಾಲ ಅವರಿಬ್ಬರೂ ಪ್ರೇಮ ಪಕ್ಷಿಗಳಂತೆ ಓಡಾಡಿದ್ದರು. ಖುಷಿಯಾಗಿದ್ದರು. ಈ ನಡುವೆ ಸುಜಾತಾಳ ಗಂಡ ಪತ್ನಿ ಕಾಣೆಯಾಗಿದ್ದಾಳೆ ಎಂದು ಮಹಾರಾಷ್ಟ್ರದ ಸಾಂಗ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಸಾಂಗ್ಲಿ ಪೊಲೀಸರು ಆಕೆ ಬಳ್ಳಾರಿಯಲ್ಲಿರುವುದನ್ನು ಪತ್ತೆ ಹಚ್ಚಿ ನೋಟಿಸ್‌ ಕಳುಹಿಸಿದ್ದರು. ಸುಜಾತಾ ಸಾಂಗ್ಲಿ ಪೊಲೀಸ್‌ ಠಾಣೆಗೆ ಹೋಗಿ ಬಂದಿದ್ದಳು.

ಅಲ್ಲಿ ನಡೆದ ಪಂಚಾಯಿತಿಕೆಯಲ್ಲಿ ತಾನು ಸಿದ್ದಗೊಂಡ ಸೌದತ್ತಿ ಜತೆಗೇ ಹೋಗುವುದಾಗಿ ಸುಜಾತಾ ಹೇಳಿದ್ದಾಳೆ. ಸಾಂಗ್ಲಿ ಪೋಲಿಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದು ಕೊಟ್ಟ ಸುಜಾತಾಳನ್ನು ಮತ್ತೆ ಬಳ್ಳಾರಿಗೆ ಕರೆದುಕೊಂಡು ಬಂದಿದ್ದ ಲಾರಿ ಡ್ರೈವರ್ ಸಿದ್ದಗೊಂಡ ಸೌದತ್ತಿ. ಅದಾದ ಬಳಿಕ ಸುಜಾತಾಳಿಗೆ ಬೇಕಾದ್ದು ಕೊಡಿಸಿ ಖುಷಿಯಾಗಿ ಇಟ್ಟಿದ್ದ!

Aunty uncle love story Ballary

ಇದನ್ನೂ ಓದಿ: Love Case : ಪ್ರೀತಿಸಿ ಕೈಕೊಟ್ಟ ಕಾನ್ಸ್‌ಟೇಬಲ್‌; ಮದ್ವೆ ಆಗುವಂತೆ ಸ್ಟೇಷನ್‌ ಮುಂದೆ ಪ್ರೊಟೆಸ್ಟ್‌

ಈ ನಡುವೆ ಸುಜಾತಾ ಕಳೆದ ಎರಡು ತಿಂಗಳಿನಿಂದ ತನ್ನ ಸಂಬಂಧಿಯಾದ ಸುರೇಶ್‌ ಎಂಬಾತನ ಜತೆಗೆ ಸಂಪರ್ಕ ಸಾಧಿಸಿದ್ದಾಳೆ. ಅವರಿಬ್ಬರು ತುಂಬಾ ಹೊತ್ತು ಮಾತನಾಡುತ್ತಿದ್ದುದನ್ನು ಕಂಡು ಸಿದ್ದಗೊಂಡ ರೇಗಿದ್ದಾನೆ. ಇದೆಲ್ಲ ಕಾಮನ್‌ ಎಂದುಕೊಳ್ಳುತ್ತಿರುವಾಗಲೇ ಒಂದು ದಿನ ಸಿದ್ದಗೊಂಡ ಲಾರಿ ಕೆಲಸ ಮುಗಿಸಿ ಮನೆಗೆ ಬಂದು ಮಲಗಿಕೊಂಡಿದ್ದಾನೆ. ಎದ್ದು ನೋಡಿದರೆ ಸುಜಾತಾ ಮನೆಯಲ್ಲಿಲ್ಲ.!

ಆಕೆ ನಾಪತ್ತೆಯಾದ ಬಳಿಕ ಸಿದ್ದಗೊಂಡ ಸೌದತ್ತಿ ಹುಚ್ಚನಂತಾಗಿದ್ದಾನೆ. ನನಗೆ ನನ್ನ ಪ್ರೇಯಸಿ ಬೇಕು ಎಂದು ರೈಲು, ಬಸ್ ನಿಲ್ದಾಣ, ದೇವಸ್ಥಾನದಲ್ಲಿ ಹುಡುಕಿದ್ದಾನೆ. ಕೊನೆಗೆ ಈಗ ಪ್ರೇಯಸಿಗಾಗಿ ಬಳ್ಳಾರಿ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾನೆ. ಸುಜಾತಾ ಮರಳಿ ಬರುತ್ತಾಳಾ?

Exit mobile version