Site icon Vistara News

Love Case: ಹಾನಗಲ್‌ ಪೊಲೀಸರ ಟಾರ್ಚರ್‌ಗೆ ಯುವಕ ಬಲಿ?; ಅಣ್ಣನ ಪ್ರೀತಿ ಇವನ ಜೀವಕ್ಕೆ ಮುಳುವಾಯಿತೇ?

suicide case in haveri

ಹಾವೇರಿ: ಹಾನಗಲ್‌ನಲ್ಲಿ ಅಣ್ಣನ ಪ್ರೀತಿ (Love Case) ವಿಷಯಕ್ಕೆ ತಮ್ಮ ಬಲಿಯಾದಂತೆ ಆಗಿದೆ. ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ಕಡೆಯವರು ಕೊಟ್ಟ ದೂರಿನ ಮೇರೆ ತನಿಖೆ ಮಾಡಿದಾಗ ಅಣ್ಣ ಸಿಗದೇ ಇದ್ದ ಕಾರಣಕ್ಕೆ ತಮ್ಮನನ್ನು ಕರೆದು ವಿಚಾರಣೆ ನಡೆಸಲಾಗಿದ್ದು, ಈ ವೇಳೆ ನೀಡಿದ ಟಾರ್ಚರ್‌ಗೆ ತಮ್ಮ ಬಲಿಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ತಾಂಡದ ಯುವಕ ಸುರೇಶ ನಾಯ್ಕ ವಿಷಯ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಪೊಲೀಸರು ನೀಡಿದ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಕೋತಿಯೆಂದರೆ ಹನುಮಂತ; ಮೃತ ಮಂಗಕ್ಕೆ ಶಾಸ್ತ್ರೋಕ್ತ ಅಂತ್ಯ ಸಂಸ್ಕಾರ, ರಾತ್ರಿಯಿಡೀ ಭಜನೆ!

ಹಾನಗಲ್ ತಾಲೂಕಿನ ಬಾಳೂರು ತಾಂಡಾದ ಯುವತಿ ರಾಜೇಶ್ವರಿ ನಾಯ್ಕ ಎಂಬಾಕೆ ಜತೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ತಾಂಡದ ಯುವಕ ಮಂಜು ನಾಯ್ಕ ಪ್ರೀತಿ ಮಾಡುತ್ತಿದ್ದ. ಇವರಿಬ್ಬರ ಪ್ರೀತಿ ಕಳೆದ 8 ವರ್ಷಗಳಿಂದ ನಡೆಯುತ್ತಿತ್ತು ಎನ್ನಲಾಗಿದ್ದು, ಈಚೆಗೆ ಆಕೆ ಪ್ರೀತಿಯನ್ನು ನಿರಾಕರಣೆ ಮಾಡಿದ್ದಳು. ಇದರಿಂದ ಮಂಜು ನಾಯ್ಕ ಗಲಾಟೆ ಮಾಡಿದ್ದ ಎನ್ನಲಾಗಿದೆ.

ಇಷ್ಟರೊಳಗೆ ಕಳೆದ ನಾಲ್ಕು ದಿನಗಳ ಹಿಂದೆ ರಾಜೇಶ್ವರಿ ನಾಯ್ಕಳನ್ನು ಬೇರೊಬ್ಬ ಯುವಕನೊಂದಿಗೆ ವಿವಾಹ ಮಾಡಿ ಕೊಡಲಾಗಿತ್ತು. ಅಲ್ಲದೆ, ಮಂಜು ನಾಯ್ಕ ಗಲಾಟೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆತನ ವಿರುದ್ಧ ಹಾನಗಲ್‌ ಪೊಲೀಸ್‌ ಠಾಣೆಯಲ್ಲಿ ರಾಜೇಶ್ವರಿ ಕುಟುಂಬಸ್ಥರು ದೂರು ದಾಖಲು ಮಾಡಿದ್ದರು ಎನ್ನಲಾಗಿದೆ.

ಪೊಲೀಸರ ಟಾರ್ಚರ್?‌

ದೂರು ಪಡೆದ ಪೊಲೀಸರು ತನಿಖೆ ಶುರು ಮಾಡಿದ್ದರು. ಎಷ್ಟೇ ಶೋಧ ಮಾಡಿದರೂ ಮಂಜು ನಾಯ್ಕ ಮಾತ್ರ ಸಿಗಲೇ ಇಲ್ಲ. ಇದಕ್ಕಾಗಿ ಪೊಲೀಸರು ಆತನ ಕುಟುಂಬದವರ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಆಗ ಅವರಿಗೆ ಸಿಕ್ಕಿದ್ದೇ ತಮ್ಮ ಸುರೇಶ ನಾಯ್ಕನ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನಲ್ಲಿ ಕಾರು ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಸುರೇಶ ನಾಯ್ಕನನ್ನು ಕಾರು ಸಮೇತ ಪೊಲೀಸ್‌ ಠಾಣೆಗೆ ಎತ್ತೊಯ್ಯಲಾಗಿದೆ. ಈ ವೇಳೆ ವಿಚಾರಣೆ ನಡೆಸಿದ್ದು, ಅಣ್ಣ ಮಂಜು ನಾಯ್ಕನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕೊನೆಗೆ ಸುರೇಶನನ್ನು ಬಿಟ್ಟು ಕಳಿಸಿದರೂ, ನಿನ್ನ ಅಣ್ಣ ಸಿಗುವವರೆಗೆ ನಿನಗೆ ನಿನ್ನ ಕಾರನ್ನು ಕೊಡುವುದಿಲ್ಲ ಎಂದು ಹೇಳಿಕಳಿಸಿದ್ದಾರೆನ್ನಲಾಗಿದೆ.

ಕಾರನ್ನು ಪೊಲೀಸರು ಇಟ್ಟುಕೊಂಡಿರುವ ಕಾರಣ, ಅದೇ ಜೀವನಾಧಾರವಾಗಿದ್ದ ಸುರೇಶನಿಗೆ ದಿಕ್ಕು ತೋಚದಂತೆ ಆಗಿದ್ದು, ಹಂಸಬಾವಿಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಒಡಿಶಾ ರೈಲು ದುರಂತ; ಅಪಘಾತಕ್ಕೀಡಾದ ರೈಲಲ್ಲಿದ್ದ ಚಿಕ್ಕಮಗಳೂರು ಯಾತ್ರಾರ್ಥಿ ಹೇಳಿದ್ದೇನು?

ಡೆತ್‌ ನೋಟ್‌ ಬರೆದಿರುವ ಸುರೇಶ ನಾಯ್ಕ

ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

ನಾನು ಬಹಳಷ್ಟು ಮಂದಿ ಜತೆಗೆ ಸಾಲ ತೆಗೆದುಕೊಂಡಿದ್ದೇನೆ. ನನ್ನ ಸ್ನೇಹಿತನ ಜಾಮೀನಿನ ಮೇಲೆ ನಾನು ಬೇರೆಯವರೊಂದಿಗೆ 4500೦ ರೂಪಾಯಿಯನ್ನು ಸಾಲ ಮಾಡಿದ್ದೇನೆ. ಆ ಸಾಲವನ್ನು ಮರುಪಾವತಿ ಮಾಡಬೇಕು. ಅಲ್ಲದೆ, ನಾನು ಚಿಕ್ಕಪ್ಪನಿಂದ 80 ಸಾವಿರ ರೂಪಾಯಿಯನ್ನು ಸಾಲವಾಗಿ ಪಡೆದಿದ್ದೇನೆ. ಫೈನಾನ್ಸ್‌ನಲ್ಲಿ 42 ಸಾವಿರ ರೂಪಾಯಿ ಸಾಲ ಪಡೆದಿದ್ದೇನೆ, ಇನ್ನೊಂದು ಕಡೆ 6 ಲಕ್ಷ ರೂಪಾಯಿಯನ್ನು ಸಾಲವಾಗಿ ಪಡೆದಿದ್ದೇನೆ. ಆದರೆ, ನನಗೆ ಈ ಸಾಲವನ್ನು ತೀರಿಸಲು ಇರುವ ಮಾರ್ಗವೆಂದರೆ ನನ್ನ ದುಡಿಮೆ. ಆ ದುಡಿಮೆಯ ಭಾಗವಾದ ಕಾರನ್ನು ಪೊಲೀಸರು ಈಗ ಇಟ್ಟುಕೊಂಡಿದ್ದಾರೆ. ನನಗೆ ಹೀಗೆ ಕಿರುಕುಳ ನೀಡಲು ರಾಜೇಶ್ವರಿ ಕುಟುಂಬದವರು ಹಾಗೂ ಪೊಲೀಸರೇ ಕಾರಣ. ಈ ಹಿನ್ನೆಲೆಯಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾಲದ ಅಷ್ಟೂ ಮೊತ್ತವನ್ನು ಇವರಿಂದ ವಸೂಲಿ ಮಾಡಬೇಕು ಎಂದು ಡೆತ್‌ ನೋಟ್‌ನಲ್ಲಿ ಯುವಕ ಸುರೇಶ ನಾಯ್ಕ ಬರೆದಿಟ್ಟಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version