ಚಿಕ್ಕಮಗಳೂರು: ಕೊಪ್ಪ ಮೂಲದ ಮೊಹಮ್ಮದ್ ರೋಫ್ ಎಂಬಾತನ ವಿರುದ್ಧ ಲವ್ ಜಿಹಾದ್ (Love Jihad) ಮಾಡಿರುವ ಆರೋಪವೊಂದು ಕೇಳಿ ಬಂದಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯುವತಿಯ ಅಣ್ಣ ದೂರು ದಾಖಲಿಸಿದ್ದರು. ಈಗ ಯುವತಿ ಸಹ ತನ್ನ ಮೇಲೆ ಲವ್ ಜಿಹಾದ್ ಯತ್ನ ನಡೆದಿದೆ ಎಂದು ಹರಿಹರಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಚಿಕ್ಕಮಗಳೂರಿನಲ್ಲಿ ಲವ್ ಜಿಹಾದ್ ಕೂಗು ಕೇಳಿ ಬಂದಿದ್ದು, ಮುಸ್ಲಿಂ ಯುವಕನೊಬ್ಬ ಹಿಂದು ಯುವತಿಯ ಫೋಟೊ ಹರಿಬಿಟ್ಟಿದ್ದ. ಈ ಸಂಬಂಧ ಯುವತಿಯ ಅಣ್ಣ ಪೊಲೀಸರಿಗೆ ದೂರು ನೀಡಿದ್ದರು. ಈಗ ಸ್ವತಃ ಸಂತ್ರಸ್ತ ಹಿಂದು ಯುವತಿಯಾಗಿರುವ ಕೊಪ್ಪ ತಾಲೂಕಿನ ಶಾನುವಳ್ಳಿಯ ಮಾನಸ ತನ್ನ ಮೇಲೆ ಜೀವ ಬೆದರಿಕೆ ಹಾಗೂ ಲವ್ ಜಿಹಾದ್ ಮಾಡಲಾಗಿದೆ ಎಂದು ದೂರು ನೀಡಿದ್ದಾಳೆ.
ಮೊಹಮ್ಮದ್ ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಫೋಟೊ, ವಿಡಿಯೊ ಹರಿಬಿಟ್ಟಿದ್ದನ್ನು ಗಮನಿಸಿದ ಕುಟುಂಬದವರು, ಕೂಡಲೇ ಕೊಪ್ಪದ ಹರಿಹರಪುರದ ಠಾಣೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ, ಇದು ಸೂಕ್ಷ್ಮ ವಿಚಾರವಾದ ಕಾರಣ ಜತೆಗೆ ಸೈಬರ್ ಕ್ರೈಂ ವ್ಯಾಪ್ತಿಗೆ ಒಳಪಡುತ್ತದೆ ಎಂದು ಚಿಕ್ಕಮಗಳೂರಿನ ಸಿಇಎನ್ ಕ್ರೈಂ ಠಾಣೆಗೆ ದೂರು ನೀಡುವಂತೆ ತಿಳಿಸಿದ್ದರು.
ಈ ಸಂಬಂಧ ಅಕ್ಟೋಬರ್ 30ರಂದು ಸಿಇಎನ್ ಠಾಣೆಗೆ ಯುವತಿ ಅಣ್ಣ ಮನೋಜ್ ದೂರು ನೀಡಿದರು. ಆದರೆ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ದೂರು ನೀಡಿ ತಿಂಗಳು ಕಳೆದರೂ ಸಿಇಎನ್ ಠಾಣಾಧಿಕಾರಿ ಜಾಕೀರ್ ಹುಸೇನ್ ನೆಪ ಮಾತ್ರಕ್ಕೆ ಭರವಸೆ ನೀಡಿದ್ದರು ಎಂದು ಆರೋಪಿಸಿದ್ದರು. ಈಗ ಖುದ್ದು ಯುವತಿಯೇ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ನೊಂದ ಯುವತಿಯ ದೂರಿನಲ್ಲಿ ಏನಿದೆ?
ಕೊಪ್ಪದ ಮಹಮ್ಮದ್ ರೋಫ್ ಎಂಬ ವ್ಯಕ್ತಿ ನನಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾನೆ ಎಂದು ಆರೋಪಿಸಿರುವ ಯುವತಿ ಮಾನಸ, ಕಾರ್ಕಳ ತಾಲೂಕಿನ ಖಾಸಗಿ ಕಾಲೇಜಿನಲ್ಲಿ ತೃತೀಯ ವರ್ಷದ ಬಿಕಾಂ ಓದುತ್ತಿದ್ದ ನನಗೆ ಕಳೆದ ಮೂರು ವರ್ಷದ ಹಿಂದೆ ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ.
ಸ್ನೇಹಿತರಾಗೋಣ ಎಂದಿದ್ದ ಮಹಮ್ಮದ್ ಕಾಲೇಜಿಗೆ ಬಂದು ಭೇಟಿಯನ್ನು ಸಹ ಮಾಡಿದ್ದ. ಕೆಲ ದಿನಗಳ ನಂತರ ಸ್ನೇಹಿತರೊಂದಿಗೆ ಬಂದ ಮಹಮ್ಮದ್ ರೋಫ್, ʻಬಾ ನನ್ನ ಜತೆ ಊಟ ಮಾಡೋಣʼ ಎಂದು ಹೇಳಿ, ನಂತರದಲ್ಲಿ ಜ್ಯೂಸ್ ಕುಡಿಯಲು ಕೊಟ್ಟಿದ್ದಾನೆ. ಜ್ಯೂಸ್ ಕುಡಿದ ನಂತರ ನನಗೆ ಏನು ನಡೆಯಿತು ಎಂದು ತಿಳಿಯಲಿಲ್ಲ. ಸ್ವಲ್ಪ ಸಮಯದ ನಂತರ ನನ್ನನ್ನು ನಾನು ಇದ್ದ ಹಾಸ್ಟೆಲ್‌ನ ಸಮೀಪ ಬಿಟ್ಟು ಹೋಗಿದ್ದರು.
ಎಡಿಟ್ ಮಾಡಿದ ಖಾಸಗಿ ಫೋಟೊ ಹಾಕಿ ಬೆದರಿಕೆ
ಈ ಘಟನೆಯ ನಂತರ ಮತ್ತೆ ರೋಫ್ ಕರೆ ಮಾಡಿ ಕೊಪ್ಪದಿಂದ ನಿಟ್ಟೆಗೆ ಬಂದಿದ್ದೇನೆ. ನಿನ್ನ ಹಾಸ್ಟೆಲ್ ಬಳಿ ಇದ್ದೇನೆ, ತಕ್ಷಣ ಹಾಸ್ಟೆಲ್‌ನಿಂದ ಹೊರಕ್ಕೆ ಬಾ ನಾನು ನಿನ್ನನ್ನು ಭೇಟಿಯಾಗಬೇಕು ಎಂದಿದ್ದ. ಆದರೆ, ಹಾಸ್ಟೆಲ್ ವಾರ್ಡ್‌ನ್ ಹೊರಗೆ ಹೋಗಲು ಬಿಡುವುದಿಲ್ಲ ಎಂದಾಗ, ನನ್ನ ವಾಟ್ಸ್‌ಆ್ಯಪ್‌ಗೆ ಎಡಿಟ್ ಮಾಡಿದ ಖಾಸಗಿ ಫೋಟೊವನ್ನು ಕಳುಹಿಸಿ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ.
ಆಗ ನಾನು ಹೆದರಿ ಹೋಗಬೇಕಾಯಿತು, ಇದೇ ರೀತಿಯಲ್ಲಿ ಪ್ರತಿ ಬಾರಿಯೂ ನನ್ನನ್ನು ಬೆದರಿಸಿ ಹಾಗೂ ಅಮಲು ಬರುವ ಪದಾರ್ಥವನ್ನು ನೀರು, ಜ್ಯೂಸ್‌ಗಳಲ್ಲಿ ಹಾಕಿ ಕೊಡುತ್ತಿದ್ದರು. ಕುಡಿಯಲು ನಾನು ಒಪ್ಪದಿದ್ದಾಗ ಈತ ಹಾಗೂ ಆತನ ಸ್ನೇಹಿತರಾದ ಮಹಮ್ಮದ್ ಇರ್ಫಾನ್, ಸೈಫ್ ಮತ್ತು ಇತರರು ಸೇರಿ ಚಾಕು ತೋರಿಸಿ ಒತ್ತಾಯ ಪೂರ್ವಕವಾಗಿ ಕುಡಿಸಿ, ಫೋಟೊ ಹಾಗೂ ವಿಡಿಯೊ ಮಾಡಿಕೊಂಡಿದ್ದಾರೆ. ಇದೇ ವೇಳೆಯಲ್ಲಿ ನನಗೆ ತಿಳಿಯದ ಹಾಗೆ ತಾಳಿ ಕಟ್ಟುವ ಪೋಟೊವನ್ನು ಸಹ ತೆಗೆದಿಟ್ಟುಕೊಂಡಿದ್ದಾರೆ. ನನ್ನನ್ನು ದೈಹಿಕವಾಗಿ ಬಳಸಿಕೊಂಡ ವಿಡಿಯೊ ಹರಿಬಿಡುವ ಬೆದರಿಕೆಯನ್ನು ಹಾಕಿದ್ದಾರೆಂದು ಆರೋಪಿಸಿದ್ದಾರೆ.
ಮಹಮ್ಮದ್ ರೋಫ್ ಹಾಗೂ ಆತನ ಸ್ನೇಹಿತರು ಸೇರಿ ಕಳೆದ ಮೂರು ವರ್ಷದಿಂದ ಸತತವಾಗಿ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡು, ಮಾನಸಿಕ, ದೈಹಿಕ ಹಿಂಸೆ ನೀಡಿದ್ದಲ್ಲದೇ ಜೀವ ಬೆದರಿಕೆಯನ್ನು ಸಹ ಹಾಕಿದ್ದಾರೆ. ಚಾಕು, ಆ್ಯಸಿಡ್ ಹಾಕುವುದಾಗಿ ಬೆದರಿಕೆ ಹಾಕಿದ್ದರು. ನಾನು ಅವರ ಬೆದರಿಕೆ ಬಗ್ಗದ ಕಾರಣ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಮಹಮ್ಮದ್ ರೋಫ್ ಮತ್ತು ಆತನ ಸ್ನೇಹಿತರು ಸೇರಿ ಫೋಟೊ ಹರಿಬಿಟ್ಟಿದ್ದಾರೆ.
20 ದಿನ ಕಳೆದರೂ ಮಹಮ್ಮದ್ ರೋಫ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಫೋಟೊವನ್ನು ಸಹ ಡಿಲೀಟ್ ಮಾಡಿಲ್ಲ ಮತ್ತು ಇನ್ನೂ ಹೆಚ್ಚಿನ ಫೋಟೊವನ್ನು ಅಪ್‌ಲೋಡ್ ಮಾಡಿದ್ದಾನೆ ಹಾಗೂ ನನ್ನ ಅಣ್ಣನಾದ ಮನೋಜ್‌ಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಗಳನ್ನು ಹಾಕುತ್ತಿದ್ದಾನೆ. ಇದು ಲವ್ ಜಿಹಾದ್ ರೂಪದಲ್ಲಿಯೇ ಮಹಮ್ಮದ್ ರೋಫ್ ಹಾಗೂ ಆತನ ಸ್ನೇಹಿತರು ವರ್ತಿಸಿದ್ದು, ಇವರ ಮೇಲೆ ಕಾನೂನು ರೀತಿಯ ಕ್ರಮವನ್ನು ಜರುಗಿಸಬೇಕೆಂದು ದೂರು ನೀಡಿದ್ದಾರೆ.
ಇದನ್ನೂ ಓದಿ | Love Jihad | ಮುಸ್ಲಿಂ ಮಹಿಳೆಯ ಲವ್ ಜಿಹಾದ್ ಬಲೆಗೆ ಬಿದ್ದನೇ ಹಿಂದು ವ್ಯಕ್ತಿ? ಆತನ ಮೊದಲ ಪತ್ನಿ ಹೇಳುವುದೇನು?