Site icon Vistara News

Love Jihad | ಲವ್‌ ಜಿಹಾದ್‌ ನಿಗ್ರಹ ಪೊಲೀಸ್‌ ಪಡೆ ಸ್ಥಾಪನೆಗೆ ಹಿಂದೂ ಸಂಘಟನೆಗಳ ಮನವಿ

MOHAN gowda

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ (Love Jihad) ಪ್ರಕರಣಗಳ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿ ವಿಶೇಷ ಪೊಲೀಸ್ ದಳ ಸ್ಥಾಪಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಹಾಗೂ ದುರ್ಗಾ ವಾಹಿನಿ ಸಂಘಟನೆಗಳ ಪ್ರಮುಖರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ಅವರು ಮಾತನಾಡಿ, ʻʻದಿಲ್ಲಿಯ ಜಿಹಾದಿ ಅಪ್ತಾಬ್‌ ಹಿಂದೂ ಯುವತಿ ಶ್ರದ್ಧಾಳನ್ನು ಬರ್ಬರವಾಗಿ ಹತ್ಯೆ ಮಾಡಿದಂತೆ ರಾಜ್ಯದಲ್ಲಿ ಸಹ ಲವ್ ಜಿಹಾದ್ ಕೃತ್ಯಗಳು ಹೆಚ್ಚು ಹೆಚ್ಚು ನಡೆಯುತ್ತಿದೆ. ಕಳೆದ ವಾರ ರಾಯಚೂರಿನಲ್ಲಿ ಇಬ್ಬರು ಹಿಂದೂ ಯುವತಿಯರು ಲವ್ ಜಿಹಾದ್‌ಗೆ ಒಳಗಾಗಿ ಇಸ್ಲಾಮ್‌ಗೆ ಮತಾಂತರವಾಗಿದ್ದಾರೆ. ಪೋಷಕರು ದೂರು ನೀಡಿದರೂ ಪೋಲಿಸರು ಆರೋಪಿಗಳನ್ನು ಬಂಧಿಸಿಲ್ಲ. ಈ ಪ್ರಕರಣವನ್ನು ಮತಾಂತರ ನಿಷೇಧ ಕಾಯಿದೆ ಅಡಿ ದಾಖಲಿಸಿಲ್ಲ. ಮಾರ್ಚ್ 2022ರಂದು ಗದಗದಲ್ಲಿ ಯುವತಿಯೊಬ್ಬಳನ್ನು ಇಸ್ಲಾಮ್‌ಗೆ ಮತಾಂತರ ಮಾಡಿ, ನಂತರ ಆಕೆಯ ಹತ್ಯೆ ಮಾಡಲು ಪ್ರಯತ್ನ ನಡೆಯಿತು. ಮಂಗಳೂರು, ಉಡುಪಿ, ಶಿವಮೊಗ್ಗ, ಕೊಡಗು ಮತ್ತು ಬೆಂಗಳೂರಿನಲ್ಲಿ ಮುಸ್ಲಿಂ ಯುವತಿಯರ ಶಾಹಿನ್ ಗ್ಯಾಂಗ್ ಲವ್ ಜಿಹಾದ್ ಮಾಡಲು ಕಾರ್ಯನಿರತವಾಗಿದೆ. ಅವರು ಹಿಂದೂ ಯುವತಿಯರನ್ನು ಮುಸಲ್ಮಾನ ಯುವಕರನ್ನು ಪರಿಚಯಿಸಿ ಲವ್ ಜಿಹಾದ್ ಮಾಡಿಸುತ್ತಾರೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಇದ್ದರೂ ವ್ಯಾಪಕವಾಗಿ ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಇಸ್ಲಾಮ್‌ಗೆ ಮತಾಂತರ ಮಾಡುವ ಘಟನೆಗಳು ನಡೆಯುತ್ತಿವೆ. ಇದನ್ನು ತಡೆಯಲು ‘ಲವ್ ಜಿಹಾದ್ ವಿರೋಧಿ ಪೊಲೀಸ್ ದಳ’ ಸ್ಥಾಪನೆ ಮಾಡಬೇಕುʼʼ ಎಂದು ಹೇಳಿದರು.

ಹಿಂದು ಸಂಘಟನೆಗಳ ಕಾರ್ಯಕರ್ತರಿಂದ ಗೃಹ ಸಚಿವರಿಗೆ ಮನವಿ.

ʻʻಲವ್ ಜಿಹಾದ್‌ಗೆ ಪ್ರಚೋದನೆ ನೀಡುವ ಮಸೀದಿ,‌ ಮದರಸಾ, ಮೌಲ್ವಿಗಳ ಗುಂಪು ಮತ್ತು ಶಾಹಿನ್ ಗ್ಯಾಂಗ್‌ ಮೇಲೆ ಕ್ರಮ ಜರುಗಿಸಬೇಕು. ರಾಜ್ಯದಲ್ಲಿ 21,000 ಯುವತಿಯರು ಕಾಣೆಯಾಗಿದ್ದಾರೆ. ಇದರ ಹಿಂದೆ ಲವ್ ಜಿಹಾದ್ ಮಾಫಿಯಾದ ಸಂಚು ಇದೆಯಾ ಎಂಬ ಬಗ್ಗೆ ಪರಿಶೀಲನೆ‌ ನಡೆಸಬೇಕುʼʼ ಎಂದು ಅವರು ಆಗ್ರಹಿಸಿದರು.

ಮನವಿಗೆ ಸ್ಪಂದಿಸಿದ ಗೃಹ ಸಚಿವರು, ಇದರ ಬಗ್ಗೆ ಸರಕಾರದಲ್ಲಿ ಚರ್ಚೆ ಮಾಡುತ್ತೇವೆ. ಮತಾಂತರ ಉದ್ದೇಶದಿಂದ ನಡೆಯುವ ಲವ್ ಜಿಹಾದ್ ಪ್ರಕರಣಗಳನ್ನು ಮತಾಂತರ ನಿಷೇಧ ಕಾಯಿದೆ ಅಡಿಯಲ್ಲಿ ದಾಖಲಿಸಲು ಪೊಲೀಸ್ ಇಲಾಖೆಯ ಸಭೆಯಲ್ಲಿ ಸೂಚಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ರಣರಾಗಿಣಿ ಮಹಿಳಾ‌‌ ಶಾಖೆಯ ಭವ್ಯ ಗೌಡ, ದುರ್ಗಾ ವಾಹಿನಿಯ ನಂದಿನಿ ರಾಜ್, ಶ್ರೀರಾಮ ಸೇನೆಯ ಸುಂದರೇಶ್‌, ಅಮರನಾಥ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ | Love Jihad | ಬಾಲಕಿಯಿಂದಲೇ ಮನೆಯವರಿಗೆ ನಿದ್ದೆ ಮಾತ್ರೆ ಕೊಡಿಸಿದ; ಮನೆಗೆ ಬಂದು ಅತ್ಯಾಚಾರ ಮಾಡಿದ!

Exit mobile version