ಮಂಗಳೂರು: ತಂದೆ-ತಾಯಿ, ಹಿಂದೂ ಸಂಘಟನೆಗಳ (Hindu outfits) ಪ್ರತಿಭಟನೆ- ಹೋರಾಟದ ಬಳಿಕವೂ ಮನೆ ಬಿಟ್ಟು ಹೋದ ಹಿಂದೂ ಯುವತಿ, ತಾನು ಪ್ರೇಮಿಸಿದ ಕೇರಳದ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದಾಳೆ. ಕ್ರಿಮಿನಲ್ ಆರೋಪ ಹೊಂದಿರುವ ಈತ ಲವ್ ಜಿಹಾದ್‌ನಲ್ಲಿ (Love Jihad) ತೊಡಗಿದ್ದಾನೆ ಎಂದು ವಿಶ್ವ ಹಿಂದೂ ಪರಿಷತ್ (Vishwa Hindu Parishat) ಆರೋಪಿಸಿದೆ. ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್ (Sharan Pumpwell) ಸೋಶಿಯಲ್ ಮೀಡಿಯಾದಲ್ಲಿ (Social media) ಯುವತಿಯ ತಂದೆಯ ಕ್ಷಮೆ ಕೋರಿದ್ದಾರೆ.
ʼಕ್ಷಮಿಸಿ ವಿನೋದ್ ಅವರೇ, ನಿಮ್ಮ ಮಗಳನ್ನು ಉಳಿಸಲು ನಮ್ಮಿಂದ ಸಾಧ್ಯವಾಗಿಲ್ಲ’ ಎಂದು ಯುವತಿ ವಿಸ್ಮಯಳ ತಂದೆಯ ಬಳಿ ಕ್ಷಮೆ ಕೋರಿ ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ಮಗಳನ್ನು ಉಳಿಸಿಕೊಡಿ ಎಂದು ವಿಎಚ್‌ಪಿ ಮುಖಂಡರ ಬಳಿಗೆ ವಿಸ್ಮಯಳ ತಂದೆ ವಿನೋದ್ ಬಂದಿದ್ದರು.
ಕೇರಳದ ಕುಖ್ಯಾತ ಕ್ರಿಮಿನಲ್ ವಿರುದ್ಧ ಕೇಳಿಬಂದಿದ್ದ ಲವ್ ಜಿಹಾದ್ ಆರೋಪ ಕೇಸ್‌ಗೆ ಮತ್ತೊಂದು ಟ್ವಿಸ್ಟ್ ದೊರೆತಿದೆ. ತಂದೆ- ತಾಯಿ ಎಷ್ಟೇ ಒತ್ತಾಯಿಸಿದರೂ, ಹಿಂದೂ ಸಂಘಟನೆಗಳು ಹೋರಾಡಿದರೂ ಹಿಂದೂ ಯುವತಿ ವಿಸ್ಮಯ, ತನ್ನ ಪ್ರೇಮಿ ಮೊಹಮ್ಮದ್ ಅಶ್ಫಾಕ್‌ನನ್ನು ಮದುವೆಯಾಗಿದ್ದಾಳೆ. ಕೇರಳ ಹೈಕೋರ್ಟ್ ಇವರ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದೆ.
ಕಾನೂನು ಹೋರಾಟದ ಮೂಲಕ ಮಗಳನ್ನು ವಾಪಸ್ ಕರೆತರುವುದಾಗಿ ವಿಸ್ಮಯ ತಂದೆಗೆ ವಿಎಚ್‌ಪಿ ಭರವಸೆ ನೀಡಿತ್ತು. ವಿಸ್ಮಯಳನ್ನು ಮಂಗಳೂರಿನ ಕೌನ್ಸೆಲಿಂಗ್ ಸೆಂಟರ್‌ಗೆ ವಿಎಚ್‌ಪಿ ಕಳುಹಿಸಿತ್ತು. ಆದರೆ ಮೊಹಮ್ಮದ್ ಅಶ್ಫಾಕ್ ಕೇರಳ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದ. ಕೇರಳ ಹೈಕೋರ್ಟ್ ಆಕೆಯನ್ನು ಕರೆತರುವಂತೆ ಆದೇಶ ನೀಡಿತ್ತು. ಹೀಗಾಗಿ ಅಶ್ಫಾಕ್ ಜೊತೆ ತೆರಳಿ ವಿಸ್ಮಯ ವಿವಾಹವಾಗಿದ್ದಾಳೆ.
ಕೇರಳದ ಕಾಸರಗೋಡಿನ ವಿದ್ಯಾನಗರ ನಿವಾಸಿಯಾಗಿರುವ ವಿಸ್ಮಯಿ ಅಶ್ಫಾಕ್ ಪ್ರಕರಣ ಕರಾವಳಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಮಂಗಳೂರಿನ ಉಳ್ಳಾಲದ ಅತ್ತೆ ಮನೆಯಲ್ಲಿ ಇದ್ದುಕೊಂಡು ಮಂಗಳೂರಿನಲ್ಲಿ ಬಿಸಿಎ ಶಿಕ್ಷಣ ಪಡೆಯುತ್ತಿದ್ದ ವಿಸ್ಮಯಳನ್ನು ವಿದ್ಯಾನಗರದಲ್ಲಿದ್ದಾಗಲೇ ಅಶ್ಫಾಕ್ ಪ್ರೀತಿಯ ಬಲೆಗೆ ಬೀಳಿಸಿದ್ದ. ಎರಡು ತಿಂಗಳ ಪರಿಚಯದಲ್ಲೇ ಈತ ವಿಸ್ಮಯಳ ಬ್ರೇನ್‌ವಾಶ್ ಮಾಡಿದ್ದಾನೆ ಎಂದು ಆಕೆಯ ಹೆತ್ತವರು ಆರೋಪಿಸಿದ್ದಾರೆ. ಈತ ಕ್ರಿಮಿನಲ್ ರೆಕಾರ್ಡ್ ಹೊಂದಿದ್ದಾನೆ ಎನ್ನಲಾಗಿದೆ.
ಕಳೆದ ಜೂ.6 ರಂದು ಉಳ್ಳಾಲದಿಂದ ವಿಸ್ಮಯಳನ್ನು ಈತ ಕರೆದುಕೊಂಡು ಹೋಗಿದ್ದ. ಬಳಿಕ ವಿದ್ಯಾನಗರ ಠಾಣೆ ಪೊಲೀಸರು ಈಕೆಯನ್ನು ಪತ್ತೆ ಹಚ್ಚಿ ಮನೆಯವರ ಜೊತೆ ಕಳುಹಿಸಿದ್ದರು. ಮತ್ತೆ ಜೂ.30ರಂದು ಉಳ್ಳಾಲದಿಂದ ವಿಸ್ಮಯಳನ್ನು ಅಪಹರಿಸಿ ಕೊಚ್ಚಿಗೆ ಕರೆದುಕೊಂಡು ಹೋಗಿದ್ದ. ಈ ಬಗ್ಗೆ ವಿಸ್ಮಯಳ ತಂದೆ ವಿನೋದ್ ಉಳ್ಳಾಲ ಠಾಣೆಗೆ ಅಪಹರಣ ದೂರು ನೀಡಿದ್ದರು. ಬಳಿಕ ವಿದ್ಯಾನಗರ ಪೊಲೀಸರು ಪತ್ತೆ ಹಚ್ಚಿ ಮಂಗಳೂರಿನ ಕೌನ್ಸಿಲಿಂಗ್ ಕೇಂದ್ರದಲ್ಲಿ ಇರಿಸಿದ್ದರು.
ಆದರೆ ಅಶ್ಫಾಕ್ ಜೊತೆಗೆ ತೆರಳುವುದಾಗಿ ವಿಸ್ಮಯ ಹಠ ಹಿಡಿದಿದ್ದಳು. ಈಕೆಯ ಬ್ರೇನ್ ವಾಶ್ ಮಾಡಲಾಗಿದೆ ಎಂದು ಆರೋಪಿಸಿ ಅಶ್ಫಾಕ್ ವಿರುದ್ಧ ವಿಸ್ಮಯ ತಂದೆ ದೂರು ನೀಡಿದ್ದರು. ಕೇರಳದಲ್ಲಿ ವಿಸ್ಮಯ ಮತಾಂತರಕ್ಕೆ ಯತ್ನಿಸಲಾಗಿದೆ ಎಂದು ಆರೋಪಿಸಿದ್ದರು. ಬಳಿಕ ಮಂಗಳೂರಿನ ವಿಎಚ್‌ಪಿ ನಾಯಕರನ್ನು ಭೇಟಿಯಾಗಿ ಕಣ್ಣೀರು ಹಾಕಿದ್ದರು. ಕೊನೆಗೂ ವಿಸ್ಮಯ, ಅಶ್ಫಾಕ್ ಜೊತೆಗೆ ತೆರಳಿ ಆತನನ್ನು ವರಿಸಿದ್ದಾಳೆ.
ಇದನ್ನೂ ಓದಿ: Love Jihad: ಲವ್ ಜಿಹಾದ್ ವಿರುದ್ಧ ಯೋಗಿ ದಿಟ್ಟ ಕ್ರಮ; ಇನ್ನು ಜಿಹಾದಿಗಳಿಗೆ ಜೀವಾವಧಿ ಶಿಕ್ಷೆ ಗ್ಯಾರಂಟಿ!