Site icon Vistara News

Love Jihad | ನಾಲ್ಕು ಮಕ್ಕಳ ತಾಯಿಯನ್ನು ಮತಾಂತರ ಮಾಡಿ ಮದುವೆಯಾದ ಮುಸ್ಲಿಂ ವ್ಯಕ್ತಿ: ಕಣ್ಣೀರಲ್ಲಿ ಕುಟುಂಬ

Love jihad gadag

ಮಹಲಿಂಗೇಶ್‌ ಹಿರೇಮಠ, ವಿಸ್ತಾರ ನ್ಯೂಸ್‌, ಗದಗ
ಗದಗದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದು ಧರ್ಮಕ್ಕೆ ಸೇರಿದ ನಾಲ್ಕು ಮಕ್ಕಳ ತಾಯಿಯನ್ನು ಮಂಕುಬೂದಿ ಎರಚಿ ಮತಾಂತರ ಮಾಡಿ ಮದುವೆಯಾಗಿದ್ದಾನೆ. ಮಹಿಳೆಯ ಒಬ್ಬ ಅಪ್ರಾಪ್ತ ಮಗಳು ಕೂಡಾ ಆತನ ಜತೆಗೆ ಹೋಗಿದ್ದು, ಇದೊಂದು ಲವ್‌ ಜಿಹಾದ್‌ ಕೃತ್ಯ (Love Jihad) ಎಂಬ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ, ಮಹಿಳೆಯ ನಿರ್ಗಮನದ ಬಳಿಕ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದು, ಈ ರೀತಿ ಕುಟುಂಬವನ್ನು ಛಿದ್ರಗೊಳಿಸಿದವರಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದೆ.

ಗದಗದ ಪ್ರಕಾಶ್ ಗುಜರಾತಿ ಅವರದು ಸುಂದರ ಕುಟುಂಬವಾಗಿತ್ತು. ಇಪ್ಪತ್ತು ವರ್ಷಗಳ ಕಾಲ ಒಳ್ಳೆಯ ರೀತಿಯಲ್ಲಿ ಸಂಸಾರ ನೌಕೆ ಸಾಗಿತ್ತು. ಗಂಡ-ಹೆಂಡತಿ, ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳು. ಪ್ರಕಾಶ್‌ ಗುಜರಾತಿ ಅವರು ಅಕ್ಕಸಾಲಿಗ ವೃತ್ತಿಯವರು. ಹಾಗಂತ ಆಭರಣ ತಯಾರಿಸೋರೇನಲ್ಲ. ಅವರು ಜುವೆಲ್ಲರಿ ಶಾಪ್‌ಗಳ ಎದುರು ಮಣ್ಣಿನಲ್ಲಿ ಸೇರಿಕೊಂಡಿರಬಹುದಾದ ಚಿನ್ನವನ್ನು ಜಾಲಾಡಿಸಿ ಸಂಗ್ರಹ ಮಾಡುವ ವೃತ್ತಿ ಮಾಡುತ್ತಿದ್ದವರು. ಆದರೂ ಅದರಲ್ಲಿನ ಶ್ರದ್ಧೆಯಿಂದ ಸಾಕಷ್ಟು ಸಂಪಾದನೆ ಮಾಡಿದ್ದರು. ದೊಡ್ಡ ಮನೆ ಕಟ್ಟಿಸಿದ್ದರು. ಒಂದಷ್ಟು ಭೂಮಿಯನ್ನೂ ಹೊಂದಿದ್ದಾರೆ. ಇವರ ಈ ಸುಂದರ ಸಂಸಾರದಲ್ಲಿ ಬಿರುಗಾಳಿ ಏಳುವಂತೆ ಮಾಡಿದ್ದು ಕೊರೊನಾ ಲಾಕ್‌ಡೌನ್‌!

ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ತುಂಬಾ ಸಮಯ ಕೆಲಸವಿರಲಿಲ್ಲ. ಆಗ ಇಲ್ಲೆಲ್ಲೂ ಕೆಲಸವಿಲ್ಲದೆ ಇದ್ದಾಗ ಗೋವಾದಲ್ಲಿ ಅವಕಾಶವಿದೆ ಎಂದು ಯಾರೋ ಹೇಳಿದರು. ಹೀಗಾಗಿ ಪ್ರಕಾಶ್‌ ಗುಜರಾತಿ ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು ಅಲ್ಲಿಗೆ ಹೋದರು. ಅಲ್ಲಿಯೂ ಅವರ ವೃತ್ತಿ ಚಿನ್ನವನ್ನು ಸಂಗ್ರಹ ಮಾಡುವುದೇ ಆಗಿತ್ತು. ಆಗ ಅಲ್ಲೊಂದು ಬಾಡಿಗೆ ಮನೆ ಹುಡುಕುವ ಪ್ರಯತ್ನದಲ್ಲಿ ಒಬ್ಬ ವ್ಯಕ್ತಿ ನೆರವಾದ.

ಅವನೇ ಮೂಲತಃ ಹಾವೇರಿ ಜಿಲ್ಲೆಯ ಸವಣೂರಿನವನಾದ ಮುಕ್ಬೂಲ್ ಬಾಯಬಡಕಿ. ಊರಿನವನೇ ಬಾಡಿಗೆ ಮನೆ ಹುಡುಕಲು ಸಿಕ್ಕಿದ್ದು ಪ್ರಕಾಶ್‌ ಅವರಿಗೂ ಖುಷಿ ಆಯಿತು. ಅವನು ತನ್ನ ಮನೆಯ ಸಮೀಪದಲ್ಲೇ ಒಂದು ಒಳ್ಳೆಯ ಮನೆ ಹುಡುಕಿಸಿಕೊಟ್ಟ. ಪ್ರಕಾಶ್‌ ಕುಟುಂಬ ಒಳ್ಳೆಯ ಮನೆ ಸಿಕ್ಕಿತು ಎನ್ನುವ ಖುಷಿಯಲ್ಲಿ ಕೆಲಸ ಆರಂಭಿಸಿತು.

ಈ ನಡುವೆ, ಮನೆ ಮಾಡಿಕೊಟ್ಟ ಪರಿಚಯದ ಆಧಾರ, ಅಕ್ಕಪಕ್ಕದಲ್ಲೇ ವಾಸವಾಗಿದ್ದ ಹಿನ್ನೆಲೆಯಲ್ಲಿ ಮಕ್ಬೂಲ್‌ ಪ್ರಕಾಶ್‌ ಅವರ ಮನೆಗೆ ಬಂದು ಹೋಗುತ್ತಿದ್ದ. ಹಾಗೆ ಬಂದು ಹೋಗುತ್ತಿದ್ದವನಿಗೆ ಪ್ರಕಾಶ್‌ ಕುಟುಂಬದ ಜತೆ ಆತ್ಮೀಯತೆ ಬೆಳೆಯಿತು. ಅದರಲ್ಲೂ ಮುಖ್ಯವಾಗಿ ಪ್ರಕಾಶ್‌ ಅವರ ಪತ್ನಿಯ ಜತೆ. ಆ ಆತ್ಮೀಯತೆ ಎಷ್ಟರ ಮಟ್ಟಿಗೆ ಎಷ್ಟೆಂದರೆ ಒಂದು ದಿನ ಬೆಳಗ್ಗೆ ನೋಡಿದರೆ ಪ್ರಕಾಶ್‌ ಅವರ ಹೆಂಡತಿಯೇ ಕಾಣೆಯಾಗಿದ್ದರು. ಪಕ್ಕದ್ಮನೆಯ ಮುಕ್ಬೂಲ್ ಬಾಯಬಡಕಿ ಕೂಡಾ ನಾಪತ್ತೆಯಾಗಿದ್ದ. ಆಗಲೇ ಪ್ರಕಾಶ್‌ ಅವರಿಗೆ ತನ್ನ ಕುಟುಂಬವೊಂದು ದೊಡ್ಡ ಜಾಲದೊಳಗೆ ಸಿಕ್ಕಿ ಹಾಕಿಕೊಂಡಿದ್ದು ತಿಳಿಯಿತು.

ಮಕ್ಬೂಲ್‌ ಪ್ರಕಾಶ್‌ ಅವರ ಹೆಂಡತಿಯನ್ನು ಕರೆದುಕೊಂಡು ಎಲ್ಲೋ ಹೋಗಿದ್ದ. ಆಕೆಯನ್ನು ಅಜ್ಮೀರ್‌ ದರ್ಗಾ ಮತ್ತಿತರ ಕಡೆಗೆ ಸುತ್ತಾಡಿಸಿದ್ದಲ್ಲದೆ ಮದುವೆಯೇ ಮಾಡಿಕೊಂಡು ಬಂದಿದ್ದ. ಪ್ರಕಾಶ್‌ ಅವರ ಹೆಂಡತಿ ನಮಾಜ್‌ ಸೇರಿದಂತೆ ಇಸ್ಲಾಂ ಧರ್ಮಾಚರಣೆ ಶುರು ಮಾಡಿದ್ದರು!

ಇದನ್ನೆಲ್ಲ ನೋಡಿದ ಪ್ರಕಾಶ್‌ ಹೆಂಡತಿಯ ಮುಂದೆ ಪರಿಪರಿಯಾಗಿ ಅಂಗಲಾಚಿದರು. ಇಬ್ಬರು ಹೆಣ್ಮಕ್ಕಳ ಭವಿಷ್ಯ, ಮಕ್ಕಳ ಹಿತದೃಷ್ಟಿಯಿಂದಲಾದರೂ ಈ ರೀತಿಯ ತೀರ್ಮಾನದಿಂದ ಹಿಂದೆ ಬಾ ಎಂದು ಗೋಗರೆದರು. ಅವರ ಕಣ್ಣೀರಿಗೆ ಕರಗಿದಂತೆ ಮಾಡಿದ ಆಕೆ ಮರಳಿ ಬಂದರು. ಅಷ್ಟು ಹೊತ್ತಿಗೆ ಪ್ರಕಾಶ್‌ ತಮ್ಮ ಸಂಸಾರವನ್ನು ಮತ್ತೆ ಗದಗದಕ್ಕೆ ಶಿಫ್ಟ್‌ ಮಾಡಿದ್ದರು. ಮರಳಿ ಬಂದ ಹೆಂಡತಿ ಕದ್ದು ಮುಚ್ಚಿ ಇಸ್ಲಾಂ ಧರ್ಮಾಚರಣೆ ಮಾಡುತ್ತಿದ್ದರು. ಸ್ವಲ್ಪ ಸಮಯದಲ್ಲಿ ಸರಿ ಹೋಗಬಹುದು ಎಂದು ಅಸೆಯಿಂದ ಕಾದರು ಪ್ರಕಾಶ್‌.

ದೇವರ ಮುಂದೆ ಇಷ್ಟು ಭಕ್ತಿಯಿಂದ ನಡೆದುಕೊಂಡಾಕೆ ಮತಾಂತರಗೊಂಡಳೇ?

ಈ ನಡುವೆ, ಎಲ್ಲವೂ ಸರಿ ಹೋಯಿತು ಎಂಬ ಪರಿಸ್ಥಿತಿ ನಿರ್ಮಾಣವಾಯಿತು. ʻನೀವಿನ್ನು ಕೆಲಸಕ್ಕೆ ಹೋಗಿʼ ಎಂದು ಹೇಳಿದರು ಪತ್ನಿ. ಅದನ್ನು ನಂಬಿ ಪ್ರಕಾಶ್‌ ಮನೆ ಬಿಟ್ಟು ಕೆಲಸಕ್ಕೆ ಹೋದರು. ಆದರೆ ಒಂದೆರಡೇ ದಿನದಲ್ಲಿ ಪತ್ನಿ ಮನೆ ಬಿಟ್ಟು ಹೋಗಿದ್ದರು… ಅದೇ ಮಕ್ಬೂಲ್‌ ಜತೆಗೆ! ಈ ನಡುವೆ, ಈ ಬಾರಿ ಆಕೆ ಮಾತ್ರವಲ್ಲ, ಒಬ್ಬ ೧೫ ವರ್ಷದ ಮಗಳು ಕೂಡಾ ಜತೆಗೆ ಹೋಗಿದ್ದಳು.

ಈ ರೀತಿ ಪತ್ನಿ ಮತ್ತು ಮಗಳನ್ನು ಕಳೆದುಕೊಂಡ ಪ್ರಕಾಶ್‌ ತೀವ್ರ ಆಘಾತಕ್ಕೆ ಒಳಗಾದರು. ಇದೆಲ್ಲ ನಡೆದು ಕೆಲವು ತಿಂಗಳುಗಳೇ ನಡೆದಿವೆ. ಅವರು ಮಹಿಳಾ ಸಂಘಟನೆಗಳು, ಪೊಲೀಸರು ಎನ್ನದೆ ಎಲ್ಲರ ಮುಂದೆ ತನ್ನ ಗೋಳು ಹೇಳಿಕೊಂಡರು. ಈ ನಡುವೆ, ಅವರಿಗೆ ಹೃದಯಾಘಾತವಾಯಿತು. ಅವರ ಗಂಡು ಮಕ್ಕಳಲ್ಲಿ ಇಬ್ಬರೂ ಈಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ತಾಯಿ ಮರಳಿ ಮರಳಿ ಬರಲಿ ಎಂದು ಮಕ್ಕಳು ಮತ್ತು ಹೆಂಡತಿ ಬೇಕು ಎಂದು ಪ್ರಕಾಶ್‌ ಗೋಗರೆಯುತ್ತಿದ್ದಾರೆ.

ಅತ್ತ ಮಕ್ಬೂಲ್‌ ಪ್ರಕಾಶ್‌ ಅವರ ಹೆಂಡತಿಯ ಜತೆಗೆ ಚೆನ್ನಾಗಿ ಸಂಸಾರ ಮಾಡುತ್ತಿದ್ದಾರೆ ಎನ್ನಲಾಗಿದೆ. ಯಾಕೆ ಹೀಗೆ ಮಾಡಿದಿರಿ ಎಂದು ಕೇಳಿದರೆ ಆತನ ಸಹೋದರ ಅಲ್ತಾಫ್‌ ಸೇರಿದಂತೆ ಇತರರು ದಬಾಯಿಸಿ ಕಳುಹಿಸಿದ್ದಾರೆ. ಸ್ವತಃ ಹೆಂಡತಿಯೂ ಬರಲು ಒಪ್ಪಿಲ್ಲ.

ಹಾಡಹಗಲೇ ಈ ರೀತಿ ಮತಾಂತರ ನಡೆದಿದೆ. ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ತಂದಿರುವ ಮತಾಂತರ ನಿಷೇಧ ಕಾಯಿದೆಗೆ ಹಲ್ಲಿಲ್ಲವೇ ಎಂದು ಪ್ರಕಾಶ್‌ ಅವರ ಆಪ್ತರು ಕೇಳುತ್ತಿದ್ದಾರೆ. ಈ ನಡುವೆ ಶ್ರೀರಾಮ ಸೇನೆ ಈ ಮತಾಂತರದ ವಿರುದ್ಧ ಹೋರಾಟ ಮಾಡಲು ಮುಂದಾಗಿದೆ. ಆರೋಪಿಗಳಿಗೆ ಶಿಕ್ಷೆಯಾಗಬೇಕು, ಮಹಿಳೆಯನ್ನು ಮರಳಿ ಕುಟುಂಬಕ್ಕೆ ಸೇರಿಸಬೇಕು. ಇಲ್ಲದೆ ಹೋದಲ್ಲಿ ಉಗ್ರ‌ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದೆ.

ಇದನ್ನೂ ಓದಿ | Suspicion of Conversion | ಮತಾಂತರ ಶಂಕೆ; ಕ್ರೈಸ್ತ ಧರ್ಮಗುರು ನೇತೃತ್ವದಲ್ಲಿ ತೆರಳುತ್ತಿದ್ದ ತಂಡದ ಮೇಲೆ ಹಿಂದು ಸಂಘಟನೆಗಳ ದಾಳಿ

Exit mobile version