ಬೆಂಗಳೂರು: ಒಂದು ಸಣ್ಣ ಮಿಸ್ ಅಂಡರ್‌ಸ್ಟಾಂಡಿಂಗ್‌ನಿಂದಾಗಿ (Misunderstanding) ಅನ್ಯಾಯವಾಗಿ ಪ್ರೇಮಿಗಳಿಬ್ಬರು ಪ್ರಾಣ (Lovers suicide) ಕಳೆದುಕೊಂಡಿದ್ದಾರೆ. ಅವಳು ನನ್ನನ್ನು ಬಿಟ್ಟು ಹೋದಳು ಎಂದು ತಪ್ಪು ತಿಳಿದ ಆತ ಸಾವಿಗೆ ಶರಣಾದ, ಅವನ ಸಾವನ್ನು ಸಹಿಸಿಕೊಳ್ಳಲಾಗದೆ ಆಕೆಯೂ ಪ್ರಾಣ ಕಳೆದುಕೊಂಡಳು. ಒಂದೇ ಕಚೇರಿ, ಒಟ್ಟಿಗೇ ಕೆಲಸ.. ಅದರ ನಡುವೆ ಅರಳಿದ್ದ ಪ್ರೀತಿ ಹೀಗೆ ಸಾವಿನಲ್ಲಿ ಅಂತ್ಯಗೊಂಡಿದೆ.
ಘಟನೆ ನಡೆದಿದ್ದು ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಅವಳ ಹೆಸರು ಧಾರಾ ಸಂಶುಕಾ. ಅವನ ದೀಪೇಂದ್ರ ಕುಮಾರ್. ಇಬ್ಬರು ಕೂಡಾ ಪಶ್ಚಿಮ ಬಂಗಾಳ ಮೂಲದವರು. ಒಂದೇ ಕಂಪನಿಯಲ್ಲಿ ಕೆಲಸಕ್ಕಿದ್ದರು. ಒಂದೇ ಕಂಪನಿ, ಒಂದೇ ರಾಜ್ಯದ ಮೂಲಕ ಎಂಬ ಕಾರಣಕ್ಕೋ ಏನೋ ಅವರಿಬ್ಬರ ಮಧ್ಯೆ ಅವಲಂಬನೆ ಹುಟ್ಟಿಕೊಂಡು ಪ್ರೀತಿಯಾಗಿ ಮಾರ್ಪಟ್ಟಿತ್ತು.
ಜತೆಯಾಗಿ ಓಡಾಡುವುದು, ಫೋಟೊ ತೆಗೆಸಿಕೊಳ್ಳುವುದು, ಕಾಲೆಳೆದುಕೊಳ್ಳುವುದು ಎಲ್ಲದರ ನಡುವೆ ಬದುಕು ಸುಂದರವಾಗಿಯೇ ಸಾಗುತ್ತಿತ್ತು. ಜತೆಗೆ ಕೆಲಸ ಮಾಡುತ್ತಿದ್ದವರು ಕೂಡಾ ಅವರಿಬ್ಬರ ಬಗ್ಗೆ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದರು.
ಈ ನಡುವೆ ಐದು ದಿನಗಳ ಹಿಂದೆ ಒಂದು ದುರಂತ ಸಂಭವಿಸಿಯೇ ಬಿಟ್ಟಿತು. ದೀಪೇಂದ್ರ ಕುಮಾರ್ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ. ಗೆಳೆಯರಿಗೆ ಗುಡ್ ಬೈ ಎಂದು ಮೆಸೇಜ್ ಹಾಕಿ ನೇಣಿಗೆ ಶರಣಾಗಿದ್ದ. ಬಂದು ನೋಡಿದಾಗ ಆತ ಹೆಣವಾಗಿದ್ದ.
ಪರಿಶೀಲನೆ ನಡೆಸಿದಾಗ ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಅಂತ ಗೊತ್ತಾಗಿತ್ತು. ತಾನು ಪ್ರೀತಿಸುತ್ತಿರುವ ಧಾರಾಳನ್ನು ಆಕೆಯ ಮನೆಯವರು ಬಲವಂತವಾಗಿ ಪಶ್ಚಿಮ ಬಂಗಾಳಕ್ಕೆ ಕರೆದೊಯ್ದಿದ್ದಾರೆ. ಆಕೆಯಿಲ್ಲದೆ ನಾನು ಬದುಕುವುದು ಹೇಗೆ ಎಂದು ಆತ ಗೋಗರೆದಿದ್ದ. ಮೃತ ಯುವಕನ ಕುಟುಂಬದ ಮಾಹಿತಿ ಅನ್ವಯ ಮಾರತ್ ಹಳ್ಳಿ ಪೊಲೀಸರು ಕೇಸು ದಾಖಲಿಸಿದ್ದರು.
ಈ ನಡುವೆ, ಎರಡು ದಿನಗಳ ಹಿಂದೆ ನಿರ್ಮಾಣದ ಹಂತದ ಕಟ್ಟಡದ ಮೇಲಿಂದ ಹಾರಿ ಓರ್ವ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಾಹಿತಿ ಪಡೆದ ಪೊಲೀಸರು ಪರಿಶೀಲನೆ ವೇಳೆ ಆಕೆ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದುಬಂತು.
ನಂತರ ಯುವತಿಯ ಮೊಬೈಲ್ ಪರಿಶೀಲನೆ ನಡೆಸಿದಾಗ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಜೊತೆಗಿನ ಫೋಟೊಗಳು ಲಭ್ಯವಾದವು.
ನಿಜವೆಂದರೆ, ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ತಪ್ಪು ಮಾಹಿತಿಯಿಂದ ದೀಪೇಂದ್ರ ಕುಮಾರ್ ಪ್ರಾಣ ಕಳೆದುಕೊಂಡಿದ್ದ. ತನ್ನ ಪ್ರಿಯಕರ ಸಾವನಪ್ಪಿದ್ದ ಅಂತ ನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಮಾರತ್ ಹಳ್ಳಿ ಪೊಲೀಸ್ ಠಾಣೆ ಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತಪ್ಪುಗ್ರಹಿಕೆಯಿಂದ ಪ್ರೇಮಿಗಳಿಬ್ಬರು ದುರಂತ ಅಂತ್ಯ ಕಂಡಂತಾಗಿದೆ.
ಇಲ್ಲಿ ನಿಜಕ್ಕೂ ಏನಾಗಿದೆ ಎಂಬ ಮಾಹಿತಿ ಇಲ್ಲ. ಆದರೆ, ಒಂದು ಮಾಹಿತಿಯ ಪ್ರಕಾರ, ಯುವಕ-ಯುವತಿ ಮಧ್ಯೆ ಸಣ್ಣದೇನೋ ತಾತ್ಕಾಲಿಕ ಮನಸ್ತಾಪ ಉಂಟಾಗಿದೆ. ಆಕೆ ತನ್ನನ್ನು ಮನೆಯವರು ಪಶ್ಚಿಮ ಬಂಗಾಳಕ್ಕೆ ಕರೆದುಕೊಂಡು ಹೋಗಲು ಬಂದಿದ್ದಾರೆ. ಬೇರೆ ಮದುವೆ ಮಾಡಿಸುವವರಿದ್ದಾರೆ. ಹೀಗಾಗಿ ಮತ್ತೆ ಸಿಗುವುದಿಲ್ಲ ಎಂದಿದ್ದಾಳೆ.
ಇದನ್ನೇ ಸತ್ಯವೆಂದು ತಿಳಿದ ಯುವಕ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಆತ ಇಷ್ಟೊಂದು ಅತಿರೇಕಕ್ಕೆ ಹೋಗುತ್ತಾನೆ ಎಂದು ತಿಳಿಯದ ಯುವತಿ ಧಾರಾಳೂ ನೊಂದುಕೊಂಡು ಸಾವಿಗೆ ಶರಣಾಗಿದ್ದಾಳೆ.
ಇದನ್ನೂ ಓದಿ : Murder: ಸಜೀವವಾಗಿ ದಹಿಸಿ 10ನೇ ತರಗತಿ ವಿದ್ಯಾರ್ಥಿ ಕೊಲೆ, ಮೃತನ ತಂಗಿಯನ್ನು ಚುಡಾಯಿಸುತ್ತಿದ್ದ ಆರೋಪಿ