ಬೆಂಗಳೂರು: ಜಗತ್ತಿನಲ್ಲಿ ಯಾವ್ಯಾವ ರೀತಿಯ ಪ್ರೇಮಿಗಳಿರುತ್ತಾರೋ (Lovers) ದೇವರೇ ಬಲ್ಲ! ಪ್ರೀತಿಗಾಗಿ ಪ್ರಾಣವನ್ನೇ ಕೊಡುವಷ್ಟು ಗಾಢವಾದ ಪ್ರೇಮಿಗಳು, ಪ್ರೀತಿಸುತ್ತಾ ಸಾಧಿಸುತ್ತೇವೆ ಎನ್ನುವ ಪಾಸಿಟೀವ್ ಪ್ರೇಮಿಗಳು, ಮದುವೆ ಆಗಬೇಕಿಲ್ಲ, ಮದುವೆ ಆಗೋವರೆಗೆ ಜತೆಯಾಗಿರೋಣ ಎನ್ನುವ ಟೈಮ್ ಪಾಸ್ ಪ್ರೇಮಿಗಳು, ಪ್ರೀತಿ ಮಾಡದಿದ್ದರೆ ಕೊಂದೇ ಬಿಡ್ತೀನಿ ಇಲ್ಲ ಸಾಯ್ತೇನೆ ಎನ್ನುವ ಪಾಗಲ್ ಪ್ರೇಮಿಗಳು.. ಹೀಗೆ ಪ್ರೇಮಿಗಳೆಂದರೆ ಥರ ಥರ!
ಇವೆಲ್ಲಕ್ಕಿಂತಲೂ ಡಿಫರೆಂಟ್ ಆಗಿರುವ ಪ್ರೇಮಿಗಳ ಜೋಡಿಯೊಂದು ಇಲ್ಲಿದೆ. ಇದು ಪ್ರೀತಿ, ಪ್ರೇಮ ಮತ್ತು ಕಳ್ಳತನದ ಕಥೆ!
ಅವರಿಬ್ಬರೂ ಕೆಲವು ಸಮಯದಿಂದ ಪ್ರೇಮಿಗಳು. ಇಬ್ಬರಿಗೂ ಮೋಜು, ಮಸ್ತಿ, ರಾಯಲ್ ಲೈಫಿನದೇ ಗುಂಗು. ಇಬ್ಬರದೂ ಒಂದೇ ಹವ್ಯಾಸ ಆಗಿರುವುದರಿಂದಲೇ ಅವರು ಪರಿಚಯವಾದ ಕೂಡಲೇ ನೇರ ಪ್ರೇಮಿಗಳಾಗಿಬಿಟ್ಟರು. ನನಗೆ ನೀನು- ನಿನಗೆ ನಾನು, ಜೀವಕ್ಕೆ ಜೀವ ಅಂತೆಲ್ಲ ಹಾಡು ಹಾಡಿದರೋ ಗೊತ್ತಿಲ್ಲ. ಹಾಡಿಗಿಂತಲೂ ಗಾಢವಾಗಿ ಬದುಕಿದರು.
ಈ ಜೋಡಿ ಹಕ್ಕಿಗಳಲ್ಲಿ ಹುಡುಗನಿಗೆ ಬೈಕ್, ಸ್ಕೂಟರ್ ಕದಿಯೋದೇ ಬ್ಯುಸಿನೆಸ್. ಅವನ ಚಟುವಟಿಕೆ ಬಗ್ಗೆ ಚೆನ್ನಾಗಿ ತಿಳಿದಿದ್ದ ಅವಳು ಅದಕ್ಕೆ ಬೆಂಬಲ ನೀಡುತ್ತಿದ್ದಳು. ಮಾತ್ರವಲ್ಲ, ಅವನ ಜತೆ ಸೇರಿ ತಾನೂ ವಾಹನ ಕಳ್ಳತನಕ್ಕೆ ನೆರವು ನೀಡುತ್ತಿದ್ದಳು. ಪ್ರಿಯಕರ ಮಾತ್ರವಲ್ಲ, ತಾನೂ ಸ್ವತಃ ಬೈಕ್‌ಗಳನ್ನು ಕದಿಯುತ್ತಿದ್ದಳು. ಇಂಥ ಕಳ್ಳಜೋಡಿಯೊಂದು ಈಗ ಪೊಲೀಸರ ಅತಿಥಿಯಾಗಿದೆ.
ಇದೀಗ ಬೆಂಗಳೂರು ಮಲ್ಲೇಶ್ವರಂ ಪೊಲೀಸರು ಈಗ ಚೋರ ಪ್ರೇಮಿಗಳನ್ನು ಬಂಧಿಸಿದ್ದಾರೆ. ಬಂಧಿತ ಮುರುಗಾ ಮತ್ತು ಅವನ ಪ್ರೇಯಸಿಯ ಕೈಯಿಂದ ಮೂರು ಬೈಕ್ ಹಾಗೂ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಇತ್ತೀಚೆಗೆ ನಡೆದ ಬೈಕ್ ಕಳವು ಪ್ರಕರಣವೊಂದರ ಬೆನ್ನು ಹತ್ತಿದ ಪೊಲೀಸರಿಗೆ ಈ ಖತರ್ನಾಕ್ ಪ್ರೇಮಿಗಳು ಸಿಕ್ಕಿಬಿದ್ದರು. ಇವರು ಬೈಕ್ ಕಳವು ಮಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಮಸ್ತ್ ಮಜಾ ಜೋಡಿ!
ಮೊದಲೇ ಹೇಳಿದಂತೆ ಇಬ್ಬರೂ ಮಜಾ ಉಡಾಯಿಸುವುದರಲ್ಲಿ ನಂಬರ್ ಒನ್ ಜೋಡಿ. ಖರ್ಚಿಗೆ ಹಣ ಬೇಕು ಅನಿಸಿದಾಗಲೆಲ್ಲ ಬೈಕ್ ಎಗರಿಸುವುದು, ಮಾರಾಟ ಮಾಡುವುದು ಅವರ ಜಾಯಮಾನ. ಬಹುತೇಕ ವಸತಿ ಪ್ರದೇಶದಲ್ಲೇ ಇವರ ಚಟುವಟಿಕೆ. ಒಮ್ಮೆ ಅವನು ಬೈಕ್ ಕದಿಯೋದು, ಇವನ ಬೆಂಬಲ! ಇನ್ನೊಮ್ಮೆ ಅವಳೇ ಮೆಲ್ಲನೆ ಹೋಗಿ ಬೈಕ್ ತರೋದು, ಇವನು ಯಾರಾದ್ರೂ ಬರ್ತಾರಾ ಅಂತ ನೋಡಿ ಸಿಗ್ನಲ್ ಕೊಡುವುದು… ಹೀಗೆ ಹೊಂದಾಣಿಕೆಯಲ್ಲಿ ಕಳವು ಮಾಡುತ್ತಿದ್ದರು.
ಕಳವು ಮಾಡಿದ ಬೈಕ್, ಸ್ಕೂಟರ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಜೋಡಿ ಹಕ್ಕಿಗಳು ಬಳಿಕ ಮಾದಕ ವಸ್ತು ಸೇವಿಸಿ ಮೋಜು ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ನಿಜವೆಂದರೆ, ಎಂಡಿಎಂಎ ಮತ್ತು ಗಾಂಜಾ ವಿಸುವುದಕ್ಕಾಗಿಯೇ ಅವರು ವಾಹನ ಕಳವು ಮಾಡುತ್ತಿದ್ದರು!
ಶ್ರೀರಾಂಪುರ, ಮಲ್ಲೇಶ್ವರಂ ಸೇರಿ ಹಲವು ಠಾಣೆಗೆ ಬೇಕಾಗಿದ್ದ ಆರೋಪಿ ಮುರುಗಾ ಮತ್ತು ಮುರುಗನ ಪ್ರೀತಿಯಲ್ಲಿ ಬಿದ್ದು ಕಳ್ಳತನಕ್ಕೆ ಸಾಥ್ ಕೊಟ್ಟಿದ್ದ ಯುವತಿ ಇಬ್ಬರೂ ಜೈಲಿನಲ್ಲಿದ್ದಾರೆ.
ಇದನ್ನೂ ಓದಿ : Woman suicide : ಅಕ್ಕಪಕ್ಕದ ಮನೆಗಳ ನೀರಿನ ಜಗಳ; ಮನನೊಂದ ಗೃಹಿಣಿ ಸಾವಿಗೆ ಶರಣು