ಬೆಂಗಳೂರು: ಈಗಾಗಲೆ ಪೆಟ್ರೋಲ್ ದರ, ಡೀಸೆಲ್ ದರ, ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಕಂಡಿರುವ ಜನಸಾಮಾನ್ಯರಿಗೆ ಎಲ್‌ಪಿಜಿ (LPG) ಬೆಲೆ ಏರಿಕೆ ಬರೆ ಮತ್ತೆ ಬಿದ್ದಿದೆ. ಮನೆ ಬಳಕೆಗೆ ಖರೀದಿಸುವ 14.2 ಕೆ.ಜಿ. ಸಿಲಿಂಡರ್ ಬೆಲೆಯನ್ನು ಬರೊಬ್ಬರಿ ₹50 ಹೆಚ್ಚಳ ಮಾಡಲಾಗಿದೆ. ಶನಿವಾರದಿಂದ ಜಾರಿಗೆ ಬಂದಿರುವ ಈ ಹೊಸ ದರದ ಪರಿಣಾಮವಾ ಬೆಂಗಳೂರಿನಲ್ಲಿ ಒಂದು ಸಿಲಿಂಡರ್ ಬೆಲೆ ಬರೊಬ್ಬರಿ ₹1,002.50 ಆಗಿದೆ. ನವದೆಹಲಿಯಲ್ಲಿ ಒಂದು ಸಿಲಿಂಡರ್ ಬೆಲೆ ಇದೀಗ ₹999.50 ಆಗಿದೆ. ₹1,000 ತಲುಪಲು ಕೇವಲ 50 ಪೈಸೆ ಬಾಕಿ ಉಳಿದಂತಾಗಿದೆ.
₹14.2 ಕೆ.ಜಿ. ಸಿಲಿಂಡರ್ ಬೆಲೆಯನ್ನು ಕಳೆದ ಮಾರ್ಚ್‌ನಲ್ಲಷ್ಟೆ ಏರಿಕೆ ಮಾಡಲಾಗಿತ್ತು. ಇದೀಗ ಒಂದೇ ತಿಂಗಳ ಅವಧಿಯಲ್ಲಿ ಮತ್ತೊಮ್ಮೆ ಹೊರೆ ಹೊರಿಸಲಾಗಿದೆ.
ಅದಕ್ಕೂ ಮೊದಲು 2021ರ ಅಕ್ಟೋಬರ್‌ನಲ್ಲಿ ಏರಿಕೆ ಮಾಡಲಾಗಿತ್ತು. 2021ರ ಸೆಪ್ಟೆಂಬರ್‌ನಲ್ಲಿ ₹887.50 ಇದ್ದ ದರವನ್ನು ₹15 ಹೆಚ್ಚಳ ಮಾಡಿ ₹902 ಆಗಿತ್ತು. ಮಾರ್ಚ್‌ನಲ್ಲಿ ₹50 ಹೆಚ್ಚಳ ಮಾಡಿ ₹952 ಆಗಿತ್ತು. ಸಿಲಿಂಡರ್ ಸರಬರಾಜು ವೆಚ್ಚವನ್ನೂ ಸೇರಿಸಿ ಅದಾಗಲೇ ₹970- ₹980ರ ಆಸುಪಾಸಿನಲ್ಲಿ ಜನರು ಅದಾಗಲೇ ಪಾವತಿ ಮಾಡುತ್ತಿದ್ದರು. ಇದೀಗ ಕೇವಲ ಸಿಲಿಂಡರ್ ಬೆಲೆಯೇ ಅಧಿಕೃತವಾಗಿ ₹1,000 ಗಡಿ ದಾಟಿದೆ.
ಮನೆಗೆ ಸಿಲಿಂಡರ್ ಸರಬರಾಜು ಮಾಡುವವರು ಸಾಮಾನ್ಯವಾಗಿ ನೆಲ ಮಹಡಿ ಹಾಗೂ ಮೊದಲ ಮಹಡಿಗಾದರೆ ₹30 ಹಾಗೂ ಎರಡನೇ ಮಹಡಿ ಅಥವಾ ಮೂರನೇ ಮಹಡಿಗಾದರೆ ₹40-₹50 ಪಡೆಯುತ್ತಾರೆ. ಒಟ್ಟಾರೆ ಸಾಮಾನ್ಯ ನಾಗರಿಕರು ಪ್ರತಿ ಸಿಲಿಂಡರ್‌ಗೆ ₹1,050 ರಿಂದ ₹1,100 ಪಾವತಿ ಮಾಡಬೇಕಾಗುತ್ತದೆ. ದೇಶದ ವಿವಿಧೆಡೆಯೂ ಸಿಲಿಂಡರ್ ದರ ಏರಿಕೆ ಆಗಿದೆ. ಆದರೆ ವಾಣಿಜ್ಯ ನಗರಿ ಮುಂಬೈ ಹಾಗೂ ದೇಶದ ರಾಜಧಾನಿ ನವದೆಹಲಿಗಿಂತಲೂ ಬೆಂಗಳೂರಿನಲ್ಲೆ ದರ ಹೆಚ್ಚಿದೆ. ರಾಜ್ಯದ ಹಾಗೂ ದೇಶದ ವಿವಿಧೆಡೆಗೆ ಸಾಗಣೆ ವೆಚ್ಚದ ಆಧಾರದಲ್ಲಿ ಸಿಲಿಂಡರ್ ದರದಲ್ಲಿ ವ್ಯತ್ಯಾಸವಿರುತ್ತದೆ.
ವಿವಿಧೆಡೆ ಎಲ್‌ಪಿಜಿ ಸಿಲಿಂಡರ್ ದರ
ಸ್ಥಳ | ದರ( 14.2 ಕೆ.ಜಿ. ಸಿಲಿಂಡರ್) |
ಬೆಂಗಳೂರು | ₹1,002.50 |
ಬೆಂಗಳೂರು ಗ್ರಾಮಾಂತರ | ₹1,013.50 |
ಬೆಳಗಾವಿ | ₹1,002.50 |
ಚಿಕ್ಕಮಗಳೂರು | ₹1,013.50 |
ದಕ್ಷಿಣ ಕನ್ನಡ | ₹1,013.50 |
ಹಾಸನ | ₹1,013.50 |
ಮೈಸೂರು | ₹1,013.50 |
ಉತ್ತರ ಕನ್ನಡ | ₹1,013.50 |
ಮುಂಬೈ | ₹990.50 |
ನವದೆಹಲಿ | ₹990.50 |
ಚೆನ್ನೈ | ₹1,015.50 |
ಹೈದರಾಬಾದ್ | ₹1,052.00 |
ಲಖನೌ | ₹1,037.50 |