Site icon Vistara News

ಚರ್ಮ ಗಂಟು ರೋಗ: ವಿಜಯಪುರದಲ್ಲಿ ಕಟ್ಟೆಚ್ಚರ, ಮಹಾಗಡಿಯಲ್ಲಿ ತಡೆ, ಜಾನುವಾರು ಜಾತ್ರೆ ರದ್ದು

Januvaru jathre raddu

ರಾಜು ಪಾಟೀಲ್‌, ವಿಸ್ತಾರ ನ್ಯೂಸ್ ವಿಜಯಪುರ
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜಾನುವಾರುಗಳನ್ನು ಕಾಡುತ್ತಿರುವ ಚರ್ಮದ ಗಂಟು ರೋಗ (Lumpy Skin Disease) ವಿಜಯಪುರ ಜಿಲ್ಲೆಯಲ್ಲೂ ಹರಡುವ ಆತಂಕ ಎದುರಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಕೆಲವು ಜಾನುವಾರುಗಳಿಗೆ ಚರ್ಮ ಗಂಟು ರೋಗ ಕಂಡುಬಂದಿದ್ದು ರೈತರಲ್ಲಿ ಆತಂಕ ಮೂಡಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಹಾಗೂ ಪಶುಸಂಗೋಪನಾ ಇಲಾಖೆ ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಲಸಿಕೆ ವಿತರಿಸಲು ಕ್ರಮವಹಿಸಿದ್ದು, ಮಹಾರಾಷ್ಟ್ರ ಗಡಿ ಭಾಗದ ಆರು ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದೆ.

ಈ ಬಾರಿ ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಚರ್ಮ ಗಂಟು ರೋಗ ಹೆಚ್ಚಾಗಿ ಹರಡಿದೆ. ಇದರಿಂದ ಮುನ್ನೆಚ್ಚರಿಕೆಯಾಗಿ ಇಲಾಖೆ ಅಗತ್ಯ ಕ್ರಮಕ್ಕೆ ಮುಂದಾಗಿದೆ. ಜಿಲ್ಲೆಯ ಗಡಿ ಪ್ರದೇಶಗಳಾದ ಅರಕೇರಿ, ಸಿದ್ದಾಪುರ, ಕನಮಡಿ, ಅಗರಖೇಡ, ಶಿರಡೋಣ ಹಾಗೂ ಧೂಳಖೇಡನಲ್ಲಿ ಜಾನುವಾರುಗಳ ತಪಾಸಣೆಗಾಗಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು, ಅಗತ್ಯ ಲಸಿಕೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ.

ಚರ್ಮದ ಗಂಟು ರೋಗಕ್ಕೆ ಲಸಿಕೆ ವಿತರಿಸಲು ಕ್ರಮ
ಜಿಲ್ಲೆಯ ಗುಣದಾಳ ಬಳಿಯ ಚನಾಳ ಪಾರ್ಮ್ ನಲ್ಲಿರುವ ಒಂದು ಕಿಲಾರಿ ಆಕಳಿಗೆ ಈ ರೀತಿಯ ಚರ್ಮ ಗಂಟು ರೋಗ ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮಹಾರಾಷ್ಟ್ರದಿಂದ ಬರುವ ಜಾನುವಾರುಗಳನ್ನು ಸೂಕ್ತವಾಗಿ ಪರೀಕ್ಷೆ ನಡೆಸಿ, ಲಸಿಕೆ ನೀಡುವಂತೆ ಸೂಚಿಸಿದ್ದಾರೆ. ರೋಗ ನಿಯಂತ್ರಣಕ್ಕೆ ಬರುವವರೆಗೂ ಜಾನುವಾರು ಜಾತ್ರೆ ಹಾಗೂ ಸಂತೆಗಳನ್ನ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಮೊದಲ ಹಂತದಲ್ಲಿ 6 ಸಾವಿರ ಲಸಿಕೆ
ಈಗಾಗಲೇ ಜಿಲ್ಲಾಡಳಿತ ಹಾಗೂ ಪಶು ಸಂಗೋಪನಾ ಇಲಾಖೆ ಮುಂಜಾಗ್ರತಾ ಕ್ರಮವಾಗಿ 6 ಸಾವಿರ ಗೋಟ್ ಫಾಕ್ಸ್ ವ್ಯಾಕ್ಸಿನ್ ಸಂಗ್ರಹ ಮಾಡಿಟ್ಟುಕೊಂಡಿದೆ. ಪ್ರತಿ ತಾಲೂಕಿಗೆ 500 ಲಸಿಕೆಗಳನ್ನು ಪೂರೈಸಿದೆ. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಕುರಿತಂತೆ ರೈತರಿಗೆ ಮಾಹಿತಿ ನೀಡುತ್ತಿದ್ದಾರೆ. ಬಾರ್ಡರ್ ಏರಿಯಾದಲ್ಲಿ ಕಡ್ಡಾಯವಾಗಿ ಜಾನುವಾರುಗಳಿಗೆ ಈ ಲಸಿಕೆ ಹಾಕುವಂತೆ ಸೂಚಿಸಲಾಗಿದೆ.

ಮೈಯಲ್ಲಿ ಗಂಟು: ಏನಿದು ಕಾಯಿಲೆ?
ಆರಂಭದಲ್ಲಿ ಜಾನುವಾರುಗಳ ಮೈಯಲ್ಲಿ ಒಂದರೆಡು ಕಡೆ ಗಂಟು ರೂಪದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಕೆಲವೇ ದಿನಗಳಲ್ಲಿ ಮೈಯೆಲ್ಲ ಆವರಿಸಿಕೊಳ್ಳುತ್ತದೆ. ಬಳಿಕ ಗಂಟುಗಳು ಒಡೆದು ಕೀವು ಸೋರುತ್ತದೆ. ಇದು ನೊಣಗಳ ಮೂಲಕ ಹರಡುವುದರಿಂದ ಅಕ್ಕಪಕ್ಕದಲ್ಲಿರುವ ಗೋವುಗಳಿಗೆ ಹರಡುವ ಸಾಧ್ಯತೆಯಿದೆ. ಜೊತೆಗೆ ಕಾಲು ಮತ್ತು ಬಾಯಿ ರೋಗದ ತರಹ ಗಾಳಿಯಲ್ಲಿ ಹರಡುವುದರಿಂದ ಈ ಚರ್ಮ ಗಂಟು ರೋಗ ಲಕ್ಷಣಗಳು ಕಂಡು ಬರುವ ರಾಸುಗಳಿಗೆ ಲಸಿಕೆಯನ್ನು ಹಾಕಿಸಲು ಸೂಚಿಸಲಾಗಿದೆ.

ನಿರ್ದಿಷ್ಟ ಮದ್ದಿಲ್ಲ, ಮೇಕೆಗಳಿಗೆ ನೀಡುವ ಲಸಿಕೆಯೇ ಔಷಧ
ಕಾಯಿಲೆಗೆ ನಿರ್ದಿಷ್ಟ ಔಷಧ ಇನ್ನೂ ಕಂಡು ಹಿಡಿದಿಲ್ಲ. ಸದ್ಯ ಮೇಕೆಗಳಿಗೆ ನೀಡುವ ರೋಗ ನಿರೋಧಕ ಚುಚ್ಚು ಮದ್ದು, ಅದರಲ್ಲೂ ವಿಶೇಷವಾಗಿ ಮೇಕೆ ಸಿಡುಬು ಲಸಿಕೆ ನೀಡಲಾಗುತ್ತದೆ. ಜಿಲ್ಲೆಗೆ ಲಸಿಕೆ ತರಿಸಿ ಅಗತ್ಯ ದಾಸ್ತಾನು ಮಾಡಲಾಗುತ್ತಿದೆ. ಈ ಲಸಿಕೆ ಹೆಚ್ಚಿನ ಪರಿಣಾಮಕಾರಿಯಾಗಿ ಚರ್ಮ ಗಂಟು ರೋಗ ಗುಣಮುಖವಾಗುತ್ತದೆ.

ಕರಪತ್ರ ವಿತರಣೆ, ಅರಿವು ಮೂಡಿಸಲು ಪ್ರಯತ್ನ
ಚರ್ಮ ಗಂಟು ರೋಗವನ್ನು ಆರಂಭದಲ್ಲಿ ಪತ್ತೆ ಹಚ್ಚಿ ಜಾನುವಾರಗಳಿಗೆ ಚಿಕಿತ್ಸೆ ನೀಡಲು ಅಗತ್ಯ ಅರಿವು ರೈತರಲ್ಲಿ ಮೂಡಿಸಲಾಗುತ್ತಿದೆ. ಕರಪತ್ರ ವಿತರಣೆ ಮಾಡಿ ರೈತರಲ್ಲಿ ಅರಿವು ಮೂಡಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

ವೈದ್ಯಾಧಿಕಾರಿ, ಜಿಲ್ಲಾಧಿಕಾರಿಗಳು ಏನನ್ನುತ್ತಾರೆ?
ವೈರಸ್‌ನಿಂದ ಈ ರೋಗ ಬರುತ್ತದೆ. ಜಿಲ್ಲೆಯಲ್ಲಿ ಈ ರೋಗ ತಡೆಗಟ್ಟಲು ತಾಲೂಕಿಗೆ 500 ಲಸಿಕೆಯಂತೆ ಮೊದಲ ಹಂತದಲ್ಲಿ ವಿತರಿಸಲಾಗುತ್ತದೆ. ಕರಪತ್ರ, ಪಶು ಚಿಕಿತ್ಸಾಲಯಗಳಲ್ಲಿ ರೋಗ ತಡೆಗಟ್ಟುವ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಅಶೋಕ ಘೋಣಸಗಿ ಹೇಳಿದ್ದಾರೆ.

ಆರಂಭದಲ್ಲಿ ಪ್ರಾಣಿಗಳಲ್ಲಿ ಜ್ವರ ಕಾಣಿಸಿಕೊಂಡು ನಂತರ ಚರ್ಮದ ಮೇಲೆ ಗಂಟುಗಳಾಗಿ ಒಡೆದು ಗಾಯಗಳಾಗುತ್ತವೆ. ಇದರಿಂದ ಹಸುಗಳಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಎತ್ತು ಮತ್ತು ಹೋರಿಗಳಲ್ಲಿ ಹೂಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಜೊತೆಗೆ ಜಾನುವಾರು ಸಾಕಣೆ ಮಾಡುವವರು ಪಶು ವೈದ್ಯಾಧಿಕಾರಿಗಳ ಸಲಹೆ ಪಡೆಯುವುದು ಉತ್ತಮ ಎನ್ನುತ್ತಾರೆ ವಿಜಯಪುರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ್ ದಾನಮ್ಮನವರ ಅವರು.

ಜಾನುವಾರುಗಳಿಗೆ ಚರ್ಮ ಗಂಟು ರೋಗದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಜಾನುವಾರು ಜಾತ್ರೆ ರದ್ದಾಗಿದೆ. ಇದನ್ನು ತಿಳಿಯದೆ ಬಂದಿದ್ದ ರೈತರಿಗೆ ಸಮಸ್ಯೆ ಆಯಿತು.

ಜಾನುವಾರು ಜಾತ್ರೆಗಳು ರದ್ದು
ಜಾನುವಾರುಗಳಿಗೆ ಚರ್ಮಗಂಟು ರೋಗ ಹಿನ್ನೆಲೆ, ತಿಂಗಳ ಕಾಲ ಜಾನುವಾರು ಸಂತೆ, ಜಾತ್ರೆಗಳ ರದ್ದುಪಡಿಸಿ ವಿಜಯಪುರ ಡಿಸಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಎಲ್ಲರೂ ಜಾನುವಾರಗಳ ಮಾರಾಟದ ಈ ಜಾತ್ರೆಗಳು ನಡೆಯುತ್ತಿಲ್ಲ.

ಸೆ.17ರಂದೇ ಡಿಸಿ ಆದೇಶ ಹೊರಡಿಸಿದ್ದಾರೆ. ಆದರೆ ಕೊಲ್ಹಾರ ತಾಲೂಕು ಆಡಳಿತ ಸೆ. ೨೦ರಂದು ಸೂಚನೆ ಹೊರಡಿಸಿತ್ತು. ಆದರೆ, ಈ ವಿಚಾರ ತಿಳಿಯದೆ ಸೆ. ೨೧ರಂದು ನೂರಾರು ರೈತರು ಕೊಲ್ಹಾರ ಜಾನುವಾರು ಸಂತೆಗೆ ಆಗಮಿಸಿದ್ದರು. ಅವರೆಲ್ಲರನ್ನು ಬಳಿಕ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿ ಕಳುಹಿಸಲಾಯಿತು.

ದೂರದ ಊರುಗಳಿಂದ ಸಾವಿರಾರು ಖರ್ಚು ಮಾಡಿ ವಾಹನಗಳಲ್ಲಿ ಜಾನುವಾರುಗಳನ್ನು ತಂದಿದ್ದ ರೈತರು ವಾಹನಗಳ ಖರ್ಚಾದರೂ ಸಿಗಲಿ ಎಂದು ಹೆದ್ದಾರಿಯಲ್ಲೇ ಬಂದಷ್ಟಕ್ಕೆ ಜಾನುವಾರು ವ್ಯಾಪಾರಕ್ಕೆ ಮುಂದಾದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾನುವಾರುಗಳು, ರೈತರು ಜಮಾಯಿಸಿದ ಹಿನ್ನಲೆ ಕೆಲ ಹೊತ್ತು ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು.

ಇದನ್ನೂ ಓದಿ | ಜಾನುವಾರುಗಳಿಗೆ ಕಾಡುತ್ತಿದೆ ಚರ್ಮ, ಗಂಟು ರೋಗ: ಅನ್ನದಾತರಿಗೆ ಮತ್ತೊಂದು ಸಂಕಷ್ಟ

Exit mobile version