Site icon Vistara News

Ajit Rai : ಭ್ರಷ್ಟ ಅಜಿತ್‌ ರೈ ಲಕ್ಸುರಿ ಬದುಕು; ಚಪ್ಪಲಿ, ಮೊಬೈಲ್‌, ಆಟದ ಸಾಮಾನಿಗೇ ಲಕ್ಷ ಲಕ್ಷ ರೇಟು!

Ajit rai shoes

ಬೆಂಗಳೂರು: ಕೆ.ಆರ್‌. ಪುರದ ತಹಸೀಲ್ದಾರ್‌ ಆಗಿದ್ದು ಬೇಕಾಬಿಟ್ಟಿ ಭ್ರಷ್ಟಾಚಾರ (Corruption Case) ಮತ್ತು ಖತರ್ನಾಕ್‌ ಐಡಿಯಾಗಳ ಮೂಲಕ ಸಾವಿರಾರು ಕೋಟಿ ರೂ. ಒಡೆಯನಾದ ಅಜಿತ್‌ ರೈ (Ajit Rai) ಮಾಡಿಕೊಂಡಿರುವ ಮನೆ, ಆಸ್ತಿ, ಹಣದ ಮೌಲ್ಯ ಒಂದು ಕಡೆಯಾದರೆ, ಆ ಮನೆಯೊಳಗಿರುವ ವಸ್ತುಗಳದೇ ಇನ್ನೊಂದು ಕಥೆ!

ನಾಲ್ಕು ದಿನಗಳ ಹಿಂದೆ ಲೋಕಾಯುಕ್ತ ಪೊಲೀಸರು (Lokayukta Raid) ರಾಜ್ಯದ 14 ಜಿಲ್ಲೆಗಳಲ್ಲಿ ದಾಳಿ ನಡೆಸಿ 15 ಜನ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿದ್ದರು. ಹೀಗೆ ಬಲೆಗೆ ಬಿದ್ದ 15ರಲ್ಲಿ 14 ಜನರನ್ನು ಒಂದು ಕಡೆ ನಿಲ್ಲಿಸಿ ಇನ್ನೊಂದು ಕಡೆ ಅಜಿತ್‌ ರೈಯನ್ನು ನಿಲ್ಲಿಸಿದರೆ ಹೆಚ್ಚು ತೂಗೋದು ಅಜಿತ್‌ ರೈನೇ! ಪುತ್ತೂರಿನಲ್ಲಿ ಸರ್ವೇಯರ್‌ ಆಗಿದ್ದ ಅಪ್ಪ ಆನಂದ್‌ ರೈ ಅವರು ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟಾಗ ಅನುಕಂಪದ ಭಿಕ್ಷೆಯಾಗಿ ಸಿಕ್ಕಿದ ಸರ್ಕಾರಿ ಉದ್ಯೋಗವನ್ನು ತನ್ನ ಐಷಾರಾಮಿ ಮತ್ತು ಶೋಕಿ ಹಾಗೂ ಕನಸಿನ ಬದುಕಿಗೆ ಅತ್ಯಂತ ಚಾಲಾಕಿತನದಿಂದ ಬಳಸಿಕೊಂಡ ಅಜಿತ್‌ ರೈಯ ಬಣ್ಣ ಬಣ್ಣದ ಬದುಕಿನ ಕಥೆಗಳಿಗೆ ಕೊನೆಯೇ ಇಲ್ಲವಾಗಿದೆ.

ಆತನಿಗೆ ಸೇರಿದ 11 ಮನೆಗಳಿಗೆ ಪೊಲೀಸರು ದಾಳಿ ಮಾಡಿದ್ದರು. ಅದರಲ್ಲಿ ಗೆಳೆಯರು, ಸೋದರರು, ಆಪ್ತರ ಹೆಸರಿನಲ್ಲಿದ್ದ ಮನೆಗಳೇ ಹೆಚ್ಚು. ಸುಮಾರು 11 ಹೈ ಎಂಡ್‌ ಐಷಾರಾಮಿ ಕಾರುಗಳು ಪತ್ತೆಯಾಗಿವೆ. ಇನ್ನು ಕೆಲವು ಇನ್ನೂ ಸಿಕ್ಕಿಲ್ಲ. ದೇವನಹಳ್ಳಿ, ದೊಡ್ಡಬಳ್ಳಾಪುರ, ಜಿಕ್ಕಬಳ್ಳಾಪುರ ಭಾಗವೊಂದರಲ್ಲೇ 150 ಎಕರೆ ಜಾಗ ಖರೀದಿ ಮಾಡಿದ್ದು, ಅದೆಷ್ಟೋ ಎಕರೆ ಭೂಮಿಯನ್ನು ಗೆಳೆಯರ ರಿಯಲ್‌ ಎಸ್ಟೇಟ್‌ಗೆ ಒದಗಿಸಿದ್ದು.. ಹೀಗೆ ನೂರಾರು ಕರ್ಮಕಾಂಡಗಳಿವೆ.

ಇದೆಲ್ಲ ಹೊರಗಿನ ಕಥೆಯಾಯಿತು.. ಅಜಿತ್‌ ರೈಯ ಅಷ್ಟೂ ಮನೆಗಳಿಗೆ ದಾಳಿ ಮಾಡಿದಾಗ ಒಳಗಡೆ ಏನೇನು ಕಂಡಿದೆ. ಅದು ಮನೆನಾ? ಅಥವಾ ದುಬಾರಿ ವಸ್ತುಗಳ ಶೋರೂಮಾ ಎಂದು ಸಂಶಯ ಬರುವಷ್ಟರ ಮಟ್ಟಿಗೆ ಅಲ್ಲಿ ವೈಭೋಗ ಮೆರೆದಾಡಿತ್ತು ಎಂದು ಲೋಕಾಯುಕ್ತ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಹಾಗಿದ್ದರೆ ಅಜಿತ್‌ ರೈ ಮನೆಯಲ್ಲಿ ಏನೇನು ಸಿಕ್ಕಿತು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್!‌

ಅಜಿತ್ ರೈ ಮನೆಯಲ್ಲಿ ಸಿಕ್ಕ ಲಕ್ಸುರಿ ವಸ್ತುಗಳನ್ನು ನೋಡಿ ಅಧಿಕಾರಿಗಳೇ ಥಂಡಾ ಹೊಡೆದಿದ್ದಾರೆ. ಬ್ರಾಂಡೆಡ್ ವಾಚ್ ಗಳು, ಸಾವಿರಾರು ರೂಪಾಯಿಯ ಚಪ್ಪಲಿಗಳು, ಐಷಾರಾಮಿ ವಸ್ತುಗಳನ್ನು ನೋಡಿ ಅಚ್ಚರಿಪಟ್ಟಿದ್ದಾರೆ.

ಹಾಗೆ ನೋಡಿದರೆ ಚಿನ್ನ-ಬೆಳ್ಳಿಯೇ ಕಡಿಮೆ!

ಅಜಿತ್‌ ರೈಯ ಮನೆಯಲ್ಲಿತ್ತು 27 ವಾಚ್‌

ಅಜಿತ್ ರೈ ಮನೆಯಲ್ಲಿ 7.63 ಲಕ್ಷ ಮೌಲ್ಯದ ವಾಚ್ ಗಳು ಪತ್ತೆಯಾಗಿವೆ. ಮೂರು ರೇಡೋ, ಮೆಸಾರಿಟಿ, ಟೈಟಾನ್, ಟೆಸ್ಲಾಟ್, ಸಿಕೋ ಕಂಪನಿಯ ದುಬಾರಿ ಬೆಲೆಯ 27 ವಾಚ್ ಗಳು ಪತ್ತೆಯಾಗಿವೆ.

ಅಜಿತ್‌ ರೈ ಬಳಿ ಎಷ್ಟು ಮೊಬೈಲ್‌ ಇತ್ತು ಗೊತ್ತಾ?

ಅಜಿತ್ ರೈ ಮನೆಯಲ್ಲಿ ಒಟ್ಟು 16 ಮೊಬೈಲ್ ಫೋನ್ ಪತ್ತೆಯಾಗಿವೆ. ಇವುಗಳ ಪೈಕಿ 7 ಬಳಕೆಯಲ್ಲಿ ಇರಲಿಲ್ಲ. ಬಳಕೆಯಲ್ಲಿರುವ ಒಂಬತ್ತು ಫೋನ್‌ಗಳ ಮೌಲ್ಯ 7 ಲಕ್ಷ ರೂ.

ಕಾಲಿಗೆ ಹಾಕುತ್ತಿದ್ದ ಬ್ರಾಂಡೆಡ್‌ ಶೂ, ಚಪ್ಪಲಿ

ಅಜಿತ್‌ ರೈ ಮನೆಗೆ ಎಂಟ್ರಿ ಕೊಡುತ್ತಿದ್ದಂತೆಯೇ ಅಧಿಕಾರಿಗಳಿಗೆ ಶಾಕ್‌ ಆಗಿತ್ತು. ಯಾಕೆಂದರೆ ಅಲ್ಲಿತ್ತು ದುಬಾರಿ ಬೆಲೆಯ ಶೂ ಮತ್ತು ಚಪ್ಪಲಿಗಳು. ಪೂಮಾ, ಡಾವಿಂಚಿ, ರೋಸೊ ಬ್ರೊನೆಲೋ, ಲೂಯಿಸ್ ವಿಟ್ಟನ್ ಹಾಗೂ ವುಡ್ಸ್ ಸೇರಿದಂತೆ ವಿವಿಧ ಕಂಪನಿಗಳ ಬ್ರಾಂಡೆಡ್ ಶೂಗಳು ಪತ್ತೆ. 11 ಜೊತೆ ಶೂ, ಆರು ಜೊತೆ ಚಪ್ಪಲಿಗಳ ಒಟ್ಟು ಮೌಲ್ಯವೇ 70 ಸಾವಿರ ರೂ.

ಇದನ್ನೂ ಓದಿ: ಅಜಿತ್‌ ರೈಯ 1368 ನಂಬರ್‌ ರಹಸ್ಯ ಬಯಲು; ಅವನ ಅಕ್ರಮಗಳ ಹಿಂದಿರುವ ಶಕ್ತಿ ಯಾವುದು?
ಇದನ್ನೂ: 200 ಕಿಮೀ ವೇಗದಲ್ಲಿ ಕಾರು ಓಡಿಸಬಲ್ಲ ಅಜಿತ್‌ ರೈ; ಫಾರ್ಮುಲಾ 1 ಟ್ರ್ಯಾಕ್‌ ನಿರ್ಮಿಸಲು ರೆಡಿಯಾಗಿದ್ದ!

ಲೋಕಾಯುಕ್ತ ಅಧಿಕಾರಿಗಳು ಇಬ್ಬರು ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ವಸ್ತುಗಳ ಪಂಚನಾಮೆ ಮಾಡಿ ಮಹಜರು ಮಾಡಿದ್ದಾರೆ. ಕೆಲವು ಅಗತ್ಯ ವಸ್ತುಗಳನ್ನ ವಶಕ್ಕೆ ಪಡೆದು ಉಳಿದವುಗಳನ್ನು ವಾಪಸ್ ನೀಡಿದ್ದಾರೆ.

Exit mobile version