ಪುತ್ತೂರು: ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಕಂಪ ಎಂಬಲ್ಲಿ ಜಯಶ್ರೀ ಎಂಬ ಯುವತಿಯನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ (Woman murder) ಘಟನೆಗೆ ಸಂಬಂಧಿಸಿ ಸುಳ್ಯದ ಕನಕಮಜಲು ನಿವಾಸಿ ಉಮೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರೀತಿಸಲು ನಿರಾಕರಿಸಿದ ಕಾರಣಕ್ಕೆ ಹುಚ್ಚನಂತಾಗಿದ್ದ ಉಮೇಶ್ ಆಕೆಯನ್ನು ಮನೆಗೇ ಬಂದು ಕೊಲೆ ಮಾಡಿದ್ದ.
ಕಂಪ ನಿವಾಸಿ ಗಿರಿಜಾ ಎಂಬವರ ಪುತ್ರಿ ಜಯಶ್ರೀ(23) ಅವರನ್ನು ಸೋಮವಾರ ಬೆಳಗ್ಗೆ ಉಮೇಶ್ ಮನೆಗೆ ಬಂದು ಕೊಲೆ ಮಾಡಿದ್ದ. ಜಯಶ್ರೀ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾಗ ನುಗ್ಗಿದ ಆತ ಕೊಲೆ ಮಾಡಿ ಪರಾರಿಯಾಗಿದ್ದ. ಜಯಶ್ರೀಯ ಕೂಗು ಕೇಳಿಸಿ ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದ ತಾಯಿ ಗಿರಿಜಾ ಮನೆಯಂಗಳಕ್ಕೆ
ಬಂದಾಗ ಮಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದಳು, ಪ್ರಜ್ಞೆ ಕಳೆದುಕೊಂಡಿದ್ದಳು. ಆಸ್ಪತ್ರೆಗೆ ಸಾಗಿಸಿದರೂ ಬದುಕಿಸಲು ಸಾಧ್ಯವಾಗಲಿಲ್ಲ. ಈ ನಡುವೆ, ತಾಯಿ ಗಿರಿಜಾ ಅವರು ಕನಕಮಜಲಿನ ಉಮೇಶನ ಮೇಲೆ ಸಂಶಯ ವ್ಯಕ್ತಪಡಿಸಿದ್ದರು. ಬಿಎಸ್ಸಿ ಶಿಕ್ಷಣ ಪಡೆದಿರುವ ಜಯಶ್ರೀ ಕೆಲ ಸಮಯದಿಂದೀಚೆಗೆ ಮನೆಯಲ್ಲೇ ಇದ್ದರು. ಜಯಶ್ರೀಯನ್ನು ಸುಳ್ಯ ತಾಲ್ಲೂಕಿನ ಕನಕಮಜಲಿನ ಉಮೇಶ್ ಎಂಬಾತ ಕೆಲವು ಸಮಯದಿಂದ ಪ್ರೀತಿಸುತ್ತಿದ್ದ. ಆಗಾಗ ಗಿರಿಜಾ ಅವರ ಮನೆಗೆ ಬಂದು ಹೋಗುತ್ತಿದ್ದ. ಆದರೆ ಇತ್ತೀಚೆಗೆ ಅವನ ಗುಣ ನಡತೆ ಜಯಶ್ರೀಗೆ ಇಷ್ಟವಾಗದ ಕಾರಣ 2022ನೇ ನವಂಬರ್ ವೇಳೆಗೆ ಆಕೆ ಆತನನ್ನು ದೂರ ಮಾಡಿದ್ದಳು. ಇದರಿಂದ ಆತ ಸಿಟ್ಟುಗೊಂಡಿದ್ದು, ಈ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಗಿರಿಜಾ ಅವರು ಉಮೇಶನ ಹೆಸರು ಹೇಳುತ್ತಿದ್ದಂತೆಯೇ ಪೊಲೀಸರು ಆತನನ್ನು ಬೆನ್ನು ಹತ್ತಿದ್ದರು. ಮೊದಲು ಒಳ್ಳೆಯವನಂತೆ ನಟಿಸಿ ಜಯಶ್ರೀಯ ಪ್ರೀತಿ ಗೆದ್ದಿದ್ದ. ಆದರೆ ಮುಂದೆ ಆತನ ನಿಜ ಬಣ್ಣಗಳು ಬಯಲಾಗುತ್ತಿದ್ದಂತೆಯೇ ಆಕೆ ಆತನ ಜತೆ ಸಂಬಂಧ ಇಟ್ಟುಕೊಳ್ಳಲು ಬಯಸಲಿಲ್ಲ. ಇದರಿಂದ ಆತ ಆಕೆಗೆ ಪಾಠ ಕಲಿಸಬೇಕು ಎಂಬ ನಿರ್ಧಾರಕ್ಕೆ ಬಂದು ಈ ಕೃತ್ಯ ನಡೆಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.
ಜಯಶ್ರೀಯ ಅಪ್ಪ ಗುರುವ ಇತ್ತೀಚೆಗೆ ನಿಧನರಾಗಿದ್ದರು. ಜಯಶ್ರೀ ಒಳ್ಳೆಯ ಶಿಕ್ಷಣ ಪಡೆದು ಕುಟುಂಬಕ್ಕೆ ಆಸರೆಯಾಗುವ ಸಾಧ್ಯತೆ ಕಂಡುಬಂದಿತ್ತು. ಆದರೆ, ವಿಧಿ ಬೇರೇನೋ ಮಾಡಿದೆ.
ಇದನ್ನೂ ಓದಿ | Mass suicide | ಇಬ್ಬರು ಹಾಲುಗಲ್ಲದ ಮಕ್ಕಳಿಗೆ ವಿಷ ಉಣಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ತಾಯಿ