Site icon Vistara News

BJP Karnataka: ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮತ್ತೆ ಬಿಜೆಪಿ ಸೇರ್ಪಡೆ; ಕಮಲ ಪಾಳಯ ಸೇರಿದ ಹಲವು ಮುಖಂಡರು

Madal Mallikarjun joins BJP again

ಬೆಂಗಳೂರು: ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್, ಗುರುಸಿದ್ದನಗೌಡ, ಡಾ. ರವಿಕುಮಾರ್ ಸೇರಿ ಹಲವು ಮುಖಂಡರು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ (BJP Karnataka) ಸೇರ್ಪಡೆಯಾಗಿದ್ದಾರೆ. ಚನ್ನಗಿರಿ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿ ಬಂಡಾಯ ಅಭ್ಯರ್ಥಿಯಾಗಿ ಮಾಡಾಳ್ ಮಲ್ಲಿಕಾರ್ಜುನ್ ಪಕ್ಷೇತರರಾಗಿ ಕಣಕ್ಕಿಳಿದು ಸೋಲು ಕಂಡಿದ್ದರು. ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರಿಂದ 6 ವರ್ಷ ಉಚ್ಚಾಟನೆಗೊಂಡಿದ್ದ ಅವರು ಇದೀಗ ಪಕ್ಷಕ್ಕೆ ಪುನಃ ಮರಳಿದ್ದಾರೆ.

ಬಿಜೆಪಿಗೆ ಸೇರ್ಪಡೆಯಾಗಿ ಮಾತನಾಡಿದ ಮಾಡಾಳ್ ಮಲ್ಲಿಕಾರ್ಜುನ್ ಅವರು, ಈ ಹಿಂದೆ ಏನೆಲ್ಲಾ ಆಗಿತ್ತು ಎಂಬುದು ನಿಮಗೆಲ್ಲಾ ಗೊತ್ತಿದೆ. ನಾವೆಲ್ಲಾ ಪಕ್ಷವನ್ನು ಮತ್ತೆ ಸಂಘಟಿಸಬೇಕು, ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು. ವಿಜಯೇಂದ್ರ ಅವರು ಬಹುಕಾಲ ಸಿಎಂ ಆಗಬೇಕು. ಪಕ್ಷಕ್ಕೆ ಸೇರಿಸಿಕೊಂಡಿದ್ದಕ್ಕೆ ಅವರಿಗೆ ಅವರಿಗೆ ಚಿರ ಋಣಿಯಾಗಿದ್ದು, ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ: ಬಿ.ವೈ. ವಿಜಯೇಂದ್ರ

ಮಾಡಾಳ್ ಮಲ್ಲಿಕಾರ್ಜುನ್ ಅವರನ್ನು ಅತಿ ಶೀಘ್ರವಾಗಿ ಬಿಜೆಪಿಗೆ ಸೇರಿಸಬೇಕೆಂದು ನಾನು ರಾಜ್ಯಾಧ್ಯಕ್ಷನಾದ ಬಳಿಕ ಒತ್ತಡ ಇತ್ತು. ಇವತ್ತು ಆ ಕಾರ್ಯ ಪೂರ್ಣಗೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಶಕ್ತಿ ತುಂಬಲು, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ದೊಡ್ಡ ಅಂತರದಲ್ಲಿ ಗೆಲ್ಲಿಸಿ ಮೋದೀಜಿ ಕೈಯನ್ನು ಬಲಪಡಿಸಲು ಮಾಡಾಳ್ ವಿರೂಪಾಕ್ಷಪ್ಪ, ಮಾಡಾಳ್ ಮಲ್ಲಿಕಾರ್ಜುನ್, ಡಾ. ರವಿಕುಮಾರ್, ಗುರುಸಿದ್ದನಗೌಡ ಅವರು ಬಿಜೆಪಿ ಸೇರಿದ್ದು ಸಂತಸ ತಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ | BJP Protest: ಐದರ ಜತೆ ನಾಮ ಹಾಕುವ ಗ್ಯಾರಂಟಿ ನೀಡಿದ ಕಾಂಗ್ರೆಸ್: ಆರ್.ಅಶೋಕ್‌ ಕಿಡಿ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಲು ಹಲವಾರು ಕಾರಣಗಳಿವೆ. ಆಗ ಇದ್ದ ವಾತಾವರಣ ಮತ್ತು ಇವತ್ತಿನ ವಾತಾವರಣಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರವು ಕೆಲವು ತಿಂಗಳ ಹಿಂದೆ 20-22 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿತ್ತು. ಈಗ ರಾಜ್ಯದಲ್ಲಿ ಸಂಪೂರ್ಣ ಬಿಜೆಪಿ ಪರವಾದ ವಾತಾವರಣವಿದೆ ಎಂದು ವಿಶ್ಲೇಷಿಸಿದರು.

ನರೇಂದ್ರ ಮೋದೀಜಿ ಅವರ ಪರವಾದ ಅಲೆ ಮತ್ತೊಮ್ಮೆ ಕಾಣುತ್ತಿದೆ. ಇದರ ಪರಿಣಾಮವಾಗಿ ಯಾವುದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ನಡೆದರೂ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷ ಒಂದು ಸೀಟು ಗೆಲ್ಲಲು ಕೂಡ ತಡಕಾಟದಲ್ಲಿ ಸಿಲುಕುವ ಸ್ಥಿತಿ ಇದೆ ಎಂದು ನುಡಿದರು.

ಇಂಥ ಕ್ಷೇತ್ರ ಗೆದ್ದೇಗೆಲ್ಲುತ್ತೇವೆ ಎಂಬ ಕ್ಷೇತ್ರವನ್ನು ತೋರಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಇಲ್ಲ. ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ನಂತರ, ಅಯೋಧ್ಯೆಯಲ್ಲಿ ಬಾಲಕ ರಾಮನ ಪ್ರತಿಷ್ಠೆ ಆದ ಬಳಿಕ ಇಡೀ ದೇಶದಲ್ಲಿ ವಾತಾವರಣ ಬದಲಾಗಿದೆ. ಇದರ ಪರಿಣಾಮವೇ ಇವತ್ತು ರಾಜ್ಯದಲ್ಲಿ ನಾಳೆ ವಿಧಾನಸಭಾ ಚುನಾವಣೆ ನಡೆದರೂ ಕೂಡ ಬಿಜೆಪಿ 130-140 ಸ್ಥಾನಗಳನ್ನು ಗೆಲ್ಲುವ ಸ್ಥಿತಿಯಲ್ಲಿದೆ ಎಂದು ತಿಳಿಸಿದರು.

ನಾಳೆ ಬಿಜೆಪಿ ದಾವಣಗೆರೆ ಜಿಲ್ಲಾಧ್ಯಕ್ಷರು ಜವಾಬ್ದಾರಿ ಸ್ವೀಕರಿಸುತ್ತಾರೆ. ಹಿರಿಯರು, ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಮಾಜಿ ಡಿಸಿಎಂ ಈಶ್ವರಪ್ಪ ಅವರೂ ಪಾಲ್ಗೊಳ್ಳುತ್ತಾರೆ. ವಿಧಾನಪರಿಷತ್ ಅಭ್ಯರ್ಥಿಗಳು ಮತ್ತು ರಾಜ್ಯಸಭಾ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ನಾನು ದೆಹಲಿಗೆ ಹೋಗಲಿದ್ದೇನೆ. ಮುಂದಿನ ದಿನಗಳಲ್ಲಿ ನಾನು ದಾವಣಗೆರೆಗೆ ಬರುತ್ತೇನೆ ಎಂದು ತಿಳಿಸಿದರು.

ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು, ಹಿರಿಯರಾದ ರವೀಂದ್ರನಾಥ್, ರೇಣುಕಾಚಾರ್ಯ, ಮಾಯಕೊಂಡ ಬಸವರಾಜ್ ಮತ್ತಿತರರು ಇದ್ದರು.

ಇದನ್ನೂ ಓದಿ | BJP Protest: ಮೋದಿ ಮತ್ತೆ ಪ್ರಧಾನಿಯಾದ ಒಂದೇ ತಿಂಗಳಲ್ಲಿ ಕಾಂಗ್ರೆಸ್ ಇಬ್ಭಾಗ: ಬೊಮ್ಮಾಯಿ

ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಾಡಾಳ್‌ ಮಲ್ಲಿಕಾರ್ಜುನ್

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿದ್ದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಮಾಡಾಳ್ ಮಲ್ಲಿಕಾರ್ಜುನ್ ಪಕ್ಷೇತರರಾಗಿ ಕಣಕ್ಕಿಳಿದು ಚುನಾವಣೆಯಲ್ಲಿ ಸೋಲು ಕಂಡಿದ್ದರು. ಆದರೆ ಬಿಜೆಪಿಯ ಅಧಿಕೃತ ಅಭ್ಯರ್ಥಿ ಶಿವಕುಮಾರ್ ಅವರಿಗಿಂತ ಮೂರು ಪಟ್ಟು ಅಧಿಕ ಮತಗಳನ್ನೂ ಪಡೆದಿದ್ದರು. ಆಗಿನ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲಂಚ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಕಾರಣ ಹಾಗೂ ಬಿಜೆಪಿಗೆ ಭಾರೀ ಮುಖಭಂಗ ಆಗಿದ್ದರಿಂದ ಇಬ್ಬರಿಗೂ ಟಿಕೆಟ್ ನಿರಾಕರಿಸಲಾಗಿತ್ತು.

ಮತ್ತೊಂದೆಡೆ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿ ಅಧಿಕೃತ ಅಭ್ಯರ್ಥಿಯ ಸೋಲಿಗೆ ಮಾಡಾಳ್ ಮಲ್ಲಿಕಾರ್ಜುನ್ ಕಾರಣವಾಗಿದ್ದರಿಂದ ಅವರನ್ನು ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿತ್ತು. ಇದೀಗ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆಯಾದ ನಂತರ ಬಿಜೆಪಿ ತೊರೆದ ಹಲವು ನಾಯಕರನ್ನು ಪುನಃ ಪಕ್ಷಕ್ಕೆ ಸೆಳೆಯುವ ಕಾರ್ಯ ನಡೆಯುತ್ತಿದೆ.

Exit mobile version