ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ (President of Karnataka state employees association) ಸಿ.ಎಸ್. ಷಡಾಕ್ಷರಿ (CS Shadakshari) ಅವರನ್ನು ಶಿವಮೊಗ್ಗದಿಂದ ಕೋಲಾರ ಜಿಲ್ಲೆಗೆ ವರ್ಗಾವಣೆ (Transfered from Shivamogga to Kolara) ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ನೌಕರರ ವರ್ಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಸರ್ಕಾರಕ್ಕೆ ಬರೆದ ಒಂದು ಪತ್ರವನ್ನು ಆಧರಿಸಿ ಈ ಪ್ರಕ್ರಿಯೆ ನಡೆದಿದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಷಡಾಕ್ಷರಿ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಕ್ಕೆ 71 ಲಕ್ಷ ರೂ. ನಷ್ಟ ಉಂಟು ಮಾಡಿದ್ದಾರೆ ಎಂದು ಮಧು ಬಂಗಾರಪ್ಪ ಅವರು ಪತ್ರದಲ್ಲಿ ಆರೋಪಿಸಿದ್ದರು.
ರಾಜ್ಯ ಸರ್ಕಾರವು ಏಳನೇ ವೇತನ ಆಯೋಗದ (7th Pay Commission) ಅವಧಿಯನ್ನು ಆರು ತಿಂಗಳ ಕಾಲ ವಿಸ್ತರಿಸಿದ್ದು, ಅದರ ವಿರುದ್ಧ ನೌಕರರ ಆಕ್ರೋಶ ಭುಗಿಲೇಳಬಹುದು ಎಂಬ ಕಾರಣಕ್ಕಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಅಭಿಪ್ರಾಯ ಮೊದಲು ಕೇಳಿಬಂದಿತ್ತು. ಆದರೆ, ಇದಕ್ಕೂ ವರ್ಗಾವಣೆಗೂ ಯಾವುದೇ ಸಂಬಂಧವಿಲ್ಲ. ಇದು ಯಾವುದೋ ಬೇರೆ ಉದ್ದೇಶವನ್ನು ಇಟ್ಟುಕೊಂಡು ಮಾಡಿರುವ ಪ್ರಕ್ರಿಯೆ. ಇದರ ಬಗ್ಗೆ ಸ್ವತಃ ಮುಖ್ಯಮಂತ್ರಿಗಳಿಂದಲೇ ವಿವರಣೆ ಕೇಳುತ್ತೇನೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.
ಎಸ್. ಷಡಾಕ್ಷರಿ ಅವರು ಇದುವರೆಗೆ ಶಿವಮೊಗ್ಗದ ಸ್ಥಳೀಯ ಲೆಕ್ಕ ಪರಿಶೋಧಣಾ ವರ್ತುಲದ ಜಂಟಿ ನಿರ್ದೇಶಕರ ಕಚೇರಿಯ ಲೆಕ್ಕಾಧೀಕ್ಷಕರಾಗಿದ್ದರು. ಅವರನ್ನು ಈಗ ಕೋಲಾರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಲೆಕ್ಕಾಧೀಕ್ಷಕರಾಗಿ ನೇಮಕ ಮಾಡಲಾಗಿದೆ. ಆರ್ಥಿಕ ಇಲಾಖೆಯ ಆಡಳಿತ ಮತ್ತು ಮುಂಗಡಗಳು ವಿಭಾಗದ ಅಧೀನ ಕಾರ್ಯದರ್ಶಿಯಾಗಿರುವ ನೇತ್ರಪ್ರಭಾ ಎಂ. ಧಾಯಪುಲೆ ಅವರು ಆದೇಶ ಹೊರಡಿಸಿದ್ದರು.
ಇತಿಹಾಸದಲ್ಲೇ ಇದು ಮೊದಲು
ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಹಲವಾರು ದಶಕಗಳ ಇತಿಹಾಸವಿದೆ. ಇದರಲ್ಲಿ ಇದುವರೆಗೂ ಅಧ್ಯಕ್ಷರನ್ನು ವರ್ಗಾವಣೆ ಮಾಡಿದ ಉದಾಹರಣೆ ಇಲ್ಲ. ನಿಜವೆಂದರೆ ಅವರನ್ನು ರಾಜ್ಯದ ಯಾವ ಭಾಗಕ್ಕೆ ವರ್ಗಾವಣೆ ಮಾಡಿದರೂ ಅವರ ಸ್ಥಾನಕ್ಕೆ ಯಾವುದೇ ಕುತ್ತು ಕೂಡಾ ಇಲ್ಲ. ಅವರು ಎಲ್ಲೇ ಇದ್ದರೂ ಹುದ್ದೆಯಲ್ಲಿ ಮುಂದುವರಿಯಲು ಅವಕಾಶವಿದೆ. ನಿಜವೆಂದರೆ ಅವರಿಗೆ ಯಾವುದೇ ಪದನಾಮ ತೋರಿಸಿದರೂ ದೈನಂದಿನ ಕೆಲಸಕ್ಕಾಗಿ ಅವರು ಕಚೇರಿಗೆ ಹೋಗಬೇಕಾದ ಅವಶ್ಯಕತೆಗಳು ಇಲ್ಲ. ಅವರು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ.
ಏನಿದು 71 ಲಕ್ಷ ರೂ. ನಷ್ಟ ಉಂಟು ಮಾಡಿದ ಆರೋಪ?
ಶಿವಮೊಗ್ಗ ತಾಲೂಕಿನ ಅಬ್ಬಲಗೆರೆಯಲ್ಲಿರುವ ಮುದ್ದಣ್ಣನ ಕೆರೆಯಿಂದ ಅಕ್ರಮವಾಗಿ ಮಣ್ಣು ತೆಗೆದು ಖಾಸಗಿ ಲೇಔಟ್‌ಗೆ ಸಾಗಿಸಿರುವ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ 71 ಲಕ್ಷ ರೂ. ರಾಯಲ್ಟಿ ನೀಡಬೇಕಾಗಿತ್ತು. ಆದರೆ, ಅದನ್ನು ನಷ್ಟ ಉಂಟು ಮಾಡಲಾಗಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರ ಕುಮ್ಮಕ್ಕಿನ ಮೇರೆಗೆ ಈ ರೀತಿ ಮಾಡಲಾಗಿದೆ. ಹೀಗಾಗಿ ಷಡಾಕ್ಷರಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೆಪ್ಟೆಂಬರ್ 21ರಂದು ಪತ್ರ ಬರೆದಿದ್ದರು. ಅದರನ್ವಯ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಹಾಗಿದ್ದರೆ ಮಧು ಬಂಗಾರಪ್ಪ ಅವರು ಬರೆದ ಆ ಪತ್ರದಲ್ಲಿ ಏನಿದೆ?
-ಶಿವಮೊಗ್ಗ ತಾಲೂಕು, ಅಬ್ಬಲಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಬ್ಬಲಗೆರೆ ಗ್ರಾಮದ ಸರ್ವೆ ನಂ.119ರಲ್ಲಿ ಮುದ್ದಣ್ಣನ ಕೆರೆಯಲ್ಲಿ ಅಕ್ರಮವಾಗಿ ಮಣ್ಣನ್ನು ತೆಗೆದು ಖಾಸಗಿ ಲೇಔಟ್ ಗೆ ಸಾಗಿಸಿರುವ ಬಗ್ಗೆ ಸರ್ಕಾರಕ್ಕೆ ಪಾವತಿಸಬೇಕಾಗಿರುವ ಮಣ್ಣಿನ ಒಟ್ಟು ರಾಯಲ್ಟಿ ಮೊತ್ತವನ್ನು ಪಾವತಿಸದೆ ಸರ್ಕಾರದ ಬೊಕ್ಕಸಕ್ಕೆ ರೂ. 71,45,920/-ಗಳನ್ನು ನಷ್ಟ ಉಂಟು ಮಾಡಲಾಗಿದೆ.
-ಈ ಬಗ್ಗೆ ಹಾಗೂ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ ಬಗ್ಗೆ ಕಾರ್ಯಪಾಲಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಜಿಲ್ಲಾ ಪಂಚಾಯತ್ ಶಿವಮೊಗ್ಗ ಇವರು ವರದಿ ನೀಡಿರುತ್ತಾರೆ.
-ಈ ಪ್ರಕರಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರ ನಿರ್ದೇಶನದಂತೆ ಗ್ರಾಮ ಪಂಚಾಯತ್ ಮತ್ತು ಗಣಿ ಇಲಾಖೆಯವರು ನಡೆದುಕೊಂಡಿರುವ ಬಗ್ಗೆ ಆಕ್ಷೇಪಣೆಗಳು ವ್ಯಕ್ತವಾಗಿರುತ್ತವೆ.
– ಇದೇ ವೇಳೆ ಸರ್ಕಾರಿ ನೌಕರರ ಸಂಘದ ರಾಜ್ಯ ಸರಿಷತ್ ಸದಸ್ಯರಾದ ಬಿ ಗಂಗಾಧರ ಮತ್ತು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ ಅವರು ಹಾಗೂ ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳು ಸದರಿ ಘಟನೆಯ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿರುತ್ತಾರೆ.
– ಈ ಬಗ್ಗೆ ಪ್ರಧಾನ ನಿರ್ದೇಶಕರು, ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ, ಬೆಂಗಳೂರು ಇವರು ಜಂಟಿ ನಿರ್ದೇಶಕರ ಕಛೇರಿ, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ, ಶಿವಮೊಗ್ಗ ಇಲ್ಲಿ ಲೆಕ್ಕಾಧೀಕ್ಷಕರಾಗಿರುವ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ. ಎಸ್. ಪಡಕ್ಟರಿ, ಈ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ಇವರನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಮೊಗ್ಗ ಜಿಲ್ಲೆಯಿಂದ ಬೇರೆಡೆಗೆ ವರ್ಗಾಯಿಸುವ ಕುರಿತು ಸರ್ಕಾರದ ಆರ್ಥಿಕ ಇಲಾಖೆಯನ್ನು ಕೋರಿರುತ್ತಾರೆ.
– ಸದರಿಯವರು ಜಿಲ್ಲೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ತಮ್ಮ ಇಚ್ಚೆಯಂತೆ ಕಾರ್ಯನಿರ್ವಹಿಸಲು ಒತ್ತಡ ಹೇರುವುದರಿಂದ ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿಯು ಉಂಟಾಗಿರುವುದಾಗಿ ದಿನಾಂಕ: 16-09-2023ರಲ್ಲಿ ನಡೆದ ಜಿಲ್ಲಾ ಪರಿಶೀಲನಾ ಸಭೆಯ ಚರ್ಚೆಯಲ್ಲಿ ಪ್ರಸ್ತಾಪವಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಸಂಬಂಧ ಪಟ್ಟವರ ಮೇಲೆ ಕ್ರಮಕೈಗೊಳ್ಳಲು ಕೋರುತ್ತೇನೆ.
ಇದನ್ನೂ ಓದಿ: ಶಿವಮೊಗ್ಗದಿಂದ ಕೋಲಾರ ಜಿಲ್ಲೆಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ವರ್ಗಾವಣೆ
ಸಿ.ಎಸ್ ಷಡಾಕ್ಷರಿ ಹೇಳುವುದೇನು?
ಸಿ.ಎಸ್. ಷಡಾಕ್ಷರಿ ಅವರು ಹೇಳುವ ಪ್ರಕಾರ ಶಿವಮೊಗ್ಗದ ಮಣ್ಣು ಸಾಗಾಟ ಪ್ರಕರಣದಲ್ಲಿ ತನಗೆ ಯಾವುದೇ ಪಾಲುದಾರಿಕೆ ಇಲ್ಲ. ಇದನ್ನು ಲೋಕಾಯುಕ್ತ ತನಿಖೆ ನಡೆಸಿ ಕ್ಲೀನ್ ಚಿಟ್ ನೀಡಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯೂ ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದೆ. ಇಷ್ಟಿದ್ದರೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು ಯಾಕೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಈ ಬಗ್ಗೆ ಸಿಎಂ ಅವರ ಜತೆ ಮಾತನಾಡುತ್ತೇನೆ. ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಸರ್ಕಾರಿ ನೌಕರರ ಪರವಾಗಿ ನನ್ನ ಹೋರಾಟ ಸದಾ ಜಾರಿಯಲ್ಲಿ ಇದ್ದೇ ಇರುತ್ತದೆ ಎಂದು ಷಡಾಕ್ಷರಿ ಅವರು ಹೇಳಿದ್ದಾರೆ.